ರಾಜಕೀಯ

ಬಜೆಟ್‍ಗೆ ಅಸ್ತು; ಬಿಜೆಪಿ ನಡೆಗೆ ಕೈ ಸುಸ್ತು

ಕೇಂದ್ರ ಸರ್ಕಾರದ ಅನುದಾನ ಕಡಿತದಿಂದ ರಾಜ್ಯಕ್ಕೆ ಹೊರೆ ಎಂಬುದು ಸರ್ಕಾರದ ವಾದ. ಆದರೆ, ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚು ಅನುದಾನ ದೊರೆತಿದೆ ಎಂಬುದು ವಿಪಕ್ಷ ಬಿಜೆಪಿಯ ಪ್ರತಿವಾದ...

ಬಜೆಟ್‍ಗೆ ಅಸ್ತು; ಬಿಜೆಪಿ ನಡೆಗೆ ಕೈ ಸುಸ್ತು
ಮುಖ್ಯಮಂತ್ರಿ ಸಿದ್ದರಾಮಯ್ಯ
Published On :

ವಿಧಾನಸಭೆ/ವಿಧಾನಪರಿಷತ್: ಕೇಂದ್ರ ಸರ್ಕಾರದ ಅನುದಾನ ಕಡಿತದಿಂದ ರಾಜ್ಯಕ್ಕೆ ಹೊರೆ ಎಂಬುದು ಸರ್ಕಾರದ ವಾದ. ಆದರೆ, ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚು ಅನುದಾನ ದೊರೆತಿದೆ ಎಂಬುದು ವಿಪಕ್ಷ ಬಿಜೆಪಿಯ ಪ್ರತಿವಾದ.

ಈ ವಿಷಯದಲ್ಲಿ ಆಡಳಿತ-ಪ್ರತಿಪಕ್ಷಗಳ ನಡುವಿನ ಪರಸ್ಪರ ಟೀಕಾಪ್ರಹಾರದ ನಡುವೆಯೇ 2015-16ನೇ ಸಾಲಿನ ಬಜೆಟ್ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ.  ವಿಧಾನಸಭೆಯಲ್ಲಿ ಬಿಜೆಪಿಯ ಧರಣಿ ಮಧ್ಯೆ ಹಾಗೂ ಪರಿಷತ್‍ನಲ್ಲಿ ಬಿಜೆಪಿ ಸಭಾತ್ಯಾಗದ ನಂತರ ಬಜೆಟ್‍ಗೆ ಅನುಮೋದನೆ ದೊರೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ  ಇಲಾಖೆಗಳ ಬೇಡಿಕೆ ಮೇಲೆ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಕೇಂದ್ರದ ಅನುದಾನ ಕಡಿತದಿಂದ ರಾಜ್ಯಕ್ಕೆ ಹೆಚ್ಚು ಹೊರೆಯಾಗಿದ್ದು, ರು.4,960 ಕೋಟಿ ಹೆಚ್ಚು ಹಣ ನಾವು ಭರಿಸಬೇಕಿದೆ ಎಂದು ದೂರಿದರು. ಇದನ್ನು ವಿರೋಧಿಸಿದ  ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಸಿ.ಟಿ. ರವಿ ರಾಜ್ಯಕ್ಕೆ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಅನುದಾನ ಲಭ್ಯವಾಗುತ್ತಿದೆ. ಇದನ್ನು ಸರ್ಕಾರ ಮರೆಮಾಚುತ್ತಿದೆ ಎಂದು ಪ್ರತ್ಯುತ್ತರಿಸಿದರು.

ನಾಚಿಕೆ ಇಲ್ಲ: ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನಡುವೆ ತೀವ್ರ ವಾಗ್ವಾದ  ಉಂಟಾಗಿ ಪರಸ್ಪರ `ನಾಚಿಕೆ ಇಲ್ಲ' ಎಂದು ತೆಗಳಿದರು. ರಾಜಕೀಯ ಲಾಭಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದೀರಾ ಎಂದು ಉಭಯ  ನಾಯಕರು ದೂರಿದರು. `ಬಜೆಟ್‍ನಲ್ಲೇ ಈ ಕಡಿತವನ್ನು ನಾನು ಸೂಚಿಸಿದ್ದೇನೆ. ಆದರೆ, ಈಗ ಇಷ್ಟೊಂದು ವಿರೋಧ ಮಾಡುತ್ತಿರು ವುದು ರಾಜಕೀಯಪ್ರೇರಿತ' ಎಂದು ಆಕ್ರೋಶಗೊಂಡ ಮುಖ್ಯಮಂತ್ರಿ ಬಜೆಟ್ ಪ್ರತಿಯನ್ನು ಮೇಜಿನ ಮೇಲೆ ಹಾಕಿದರು. `ಅಂದೂ ವಿರೋಧ ಮಾಡಿದ್ದೆವು. ಇಂದು ನೀವು ತಪ್ಪು ಮಾಹಿತಿ ನೀಡುತ್ತಿದ್ದೀರ. ಅದನ್ನು ಸರಿಪಡಿಸಿಕೊಳ್ಳಿ. ಕೇಂದ್ರದಿಂದ ಬರುವಎಲ್ಲ ನೆರವನ್ನೂ ಹೇಳಿ' ಎಂದು ಜಗದೀಶ್ ಶೆಟ್ಟರ್ ಆಗ್ರಹಿಸಿದರು. ಈ ಸಂದರ್ಭದಲ್ಲಿ ಉಭಯ ನಾಯಕರ ಜತೆಗೆ ಸದಸ್ಯರೂ ಸೇರಿಕೊಂಡು ತೀವ್ರ ವಾಗ್ವಾದ ಉಂಟಾಗಿ, ಪರಸ್ಪರ ದೋಷಾರೋಪಣೆ ಮಾಡಿದರು. ಜೆಡಿಎಸ್‍ನವರು ಎಲ್ಲವನ್ನು ನೋಡುತ್ತಿದ್ದರು. ಬಿಜೆಪಿಯವರು ಬಾವಿಗಿಳಿದು ಧರಣಿ ನಡೆಸಿದರು.

ಬಿಜೆಪಿಯ ಧರಣಿ ಹಾಗೂ ಘೋಷಣೆ ನಡುವೆಯೇ ಇಲಾಖಾವಾರು ಬೇಡಿಕೆ ಉತ್ತರವನ್ನು ಅಲ್ಲಿಗೇ ಮೊಟಕುಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಧನವಿಧೇಯಕವನ್ನು ಮಂಡಿಸಿದರು. ಜತೆಗೆ ಪೂರಕ ಅಂದಾಜು ಪಟ್ಟಿಯನ್ನೂಮಂಡಿಸಿದರು. ಧ್ವನಿಮತದಿಂದ ಬಜೆಟ್ ಅಂಗೀಕಾರಗೊಂಡಿತು. ನಂತರ ಲೋಕಾಯುಕ್ತ ಕಾಯಿದೆಯನ್ನು ಕಾನೂನು ಸಚಿವ ಟಿ.ಬಿ. ಜಯಚಂದ್ರ ಮಂಡಿಸಿದರು. ಜುಲೈ 30 ಮತ್ತು  31ರಂದು ಕಲಾಪ ನಡೆಯುತ್ತದೆ ಎಂದು ಘೋಷಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಇದಕ್ಕೂ ಮುನ್ನ ಇಲಾಖಾವಾರು ಬೇಡಿಕೆ ಮೇಲಿನ ಚರ್ಚೆ ಮುಕ್ತಾಯಗೊಂಡ ಮೇಲೆ ಅದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಐದು ಇಲಾಖೆಗಳ ಮೇಲೆ ಮಾತ್ರ ಚರ್ಚೆ ನಡೆದಿದೆ. ಎಲ್ಲ ಇಲಾಖೆಗಳ ಮೇಲೆ ಚರ್ಚೆ ಆಗದಿರುವುದು ಅಸಮಾಧಾನ ಉಂಟು ಮಾಡಿದೆ ಎಂದರು.

ಅಲ್ಲದೆ, ನಾನು ಈಗ ದೀರ್ಘ ಉತ್ತರ ನೀಡುವುದಿಲ್ಲ. ನಂಜುಂಡಪ್ಪ ವರದಿ ಹಾಗೂ ಕುಮಾರಸ್ವಾಮಿ ಅವರು ತಂದಿದ್ದ ಅಕಾಲಿಕ-ಅನಗತ್ಯ ಅವಿಶ್ವಾಸ ನಿರ್ಣಯದ ಮೇಲೆ ಉತ್ತರ ನೀಡುವಾಗ ಬಹುತೇಕ ಎಲ್ಲವನ್ನೂ ಹೇಳಿದ್ದೇನೆ. ಈಗ ಕೆಲವನ್ನು ಮಾತ್ರ ಹೇಳುತ್ತೇನೆ ಎಂದರು. ಹಗರಣ ಮುಕ್ತ ಸರ್ಕಾರ: ನಮ್ಮ ಸರ್ಕಾರ ಕಳೆದ ಎರಡು ವರ್ಷ 2 ತಿಂಗಳಲ್ಲಿ ಬೊಟ್ಟು ಮಾಡಿಸಿ ತೋರಿಸುವಂತಹ ತಪ್ಪು ಮಾಡಿಲ್ಲ. ಹೀಗಾಗಿ ಸರ್ಕಾರ ಪಾರದರ್ಶಕ, ಹಗರಣ ಮುಕ್ತ, ಜನಪರ ಸರ್ಕಾರವಾಗಿದೆ ಎಂಬುದರಲ್ಲಿ ಎರಡು ಮಾಡಿಲ್ಲ. 2006ರಿಂದ ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ನೀಡಿರಲಿಲ್ಲ. ಅಕ್ರಮ ಗಣಿಗಾರಿಕೆ ಬಗ್ಗೆ ನಾವು ವಿಧಾನಸಭೆಯಲ್ಲಿ ರಾತ್ರಿಪೂರ್ತಿ ಧರಣಿಮಾಡಿ, ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರೂ ಸಿಬಿಐಗೆ ನೀಡಿರಲಿಲ್ಲ. ನಮ್ಮ ಸರ್ಕಾರ 6 ಪ್ರಕರಣಗಳನ್ನು ಸಿಬಿಐಗೆ ನೀಡಿದೆ. ಹೀಗಾಗಿ ನಮ್ಮದು ಹಗರಣಮುಕ್ತ ಸರ್ಕಾರ ಎಂದು ಸಿದ್ದರಾಮಯ್ಯ
ಹೇಳಿದರು.

ಕಳೆದ ವರ್ಷಕ್ಕಿಂತ ಈ ವರ್ಷ ಯೋಜನಾಗಾತ್ರ ಶೇ.10.67ರಷ್ಟು ಹೆಚ್ಚಾಗಿದ್ದು, ಕಳೆದ ಬಾರಿ ಶೇ.94ರಷ್ಟು ಸಾಧನೆ ಮಾಡಿದ್ದೇವೆ. ಈ ಬಾರಿ ನಾವು ಪೂರ್ಣ ಸಾಧಿಸುವ ವಿಶ್ವಾಸ ಇದೆ. ಕಳೆದ ಬಾರಿ
ಪೂರ್ಣ ಸಾಧಿಸುತ್ತಿದ್ದೆವು. ಆದರೆ, ಕೇಂದ್ರ ಸರ್ಕಾರ ಹಲವು ಯೋಜನೆಗಳಿಗೆ ತನ್ನ ಪಾಲಿನ ಅನುದಾನವನ್ನು ಕಡಿತ ಮಾಡಿತು. ಹೀಗಾಗಿ, ರಾಜ್ಯ ಸರ್ಕಾರಕ್ಕೆ ರು.4,690 ಕೋಟಿ ಹೆಚ್ಚುವರಿ ಹೊರೆಯಾಗಿದೆ. ಸೇವಾ ತೆರಿಗೆಯಲ್ಲಿ ರಾಜ್ಯದ ಪಾಲನ್ನುಶೇ.32ರಿಂದ 42ಕ್ಕೆ ಏರಿಸಿದರೂ ರಾಜ್ಯ ಸರ್ಕಾರಕ್ಕೆ ನೀಡಬೇಕಾದ ಅನುದಾನದಲ್ಲಿ ಕಡಿತ ಮಾಡಿದೆ. ಹೀಗಾಗಿ ಹೆಚ್ಚುಹೊರೆ ಸರ್ಕಾರದ ಮೇಲೆ ಬಿದ್ದಿದೆ ಎಂದು ಸಿದ್ದರಾಮಯ್ಯ ದೂರಿದರು. ಈ ಸಂದರ್ಭದಲ್ಲಿ ಬಿಜೆಪಿಯ ಸಿ.ಟಿ. ರವಿ ಎದ್ದು ನಿಂತು `ನೀವು  ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದೀರಿ. ಕೇಂದ್ರದ ನೀತಿಯಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ಲಭ್ಯವಾಗುತ್ತದೆ. ಹೆಚ್ಚುವರಿ ಹಣವೂ ಬರುತ್ತದೆ' ಎಂದು ಹೇಳಿದರು. ಇದಕ್ಕೆ ಅವಕಾಶ ನೀಡಿದ ಮುಖ್ಯಮಂತ್ರಿಯವರು ನಾನು ಉತ್ತರ ನೀಡಿದ ಮೇಲೆ ನೀವು ಮಾತನಾಡಿ ಎಂದರು. ಆಗ ಈಗಲೇ ಅವಕಾಶ ನೀಡಬೇಕು ಎಂದು ಸಿ.ಟಿ. ರವಿ ಪಟ್ಟು ಹಿಡಿದರು. ಸ್ಪೀಕರ್ ಕುಳಿತುಕೊಳ್ಳಲು ಆದೇಶಿಸಿದರು. ಮತ್ತೆ ಸಿದ್ದರಾಮಯ್ಯ ಅವರು ಕೇಂದ್ರದ ಅನುದಾನ ಕೊರತೆಯ ವಿವರವನ್ನು ನೀಡಲು ಮುಂದಾದಾಗ `ತಪ್ಪು ಮಾಹಿತಿ ನೀಡಬಾರದು' ಎಂದು ಜಗದೀಶ್ ಶೆಟ್ಟರ್ ಆಕ್ಷೇಪಿಸಿದರು. ಅವರಿಗೆ ಮಾತನಾಡಲು ಅವಕಾಶ ನೀಡಬೇಡಿ  ಎಂದು ಮುಖ್ಯಮಂತ್ರಿ ನುಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.