ವಿಧಾನ ಪರಿಷತ್ ವಿಸರ್ಜನೆ ಇಲ್ಲ: ಸಿಎಂ ಸಿದ್ದರಾಮಯ್ಯ
ತೀವ್ರ ಚರ್ಚೆಗೆ ಕಾರಣವಾಗಿದ್ದ ವಿಧಾನ ಪರಿಷತ್ ಅನ್ನು ವಿಸರ್ಜಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ/ಸುವರ್ಣಸೌಧ: ತೀವ್ರ ಚರ್ಚೆಗೆ ಕಾರಣವಾಗಿದ್ದ ವಿಧಾನ ಪರಿಷತ್ ಅನ್ನು ವಿಸರ್ಜಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಇಂದು ವಿಧಾನ ಪರಿಷತ್‌ನಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಮೇಲ್ಮನೆ ವಿಸರ್ಜನೆ ಬಗ್ಗೆ ನಿಮ್ಮ ಪಕ್ಷದಲ್ಲಿ ಚರ್ಚೆಯಾಗಿದೆಯೇ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಹೊರಟ್ಟಿ ನಮ್ಮ ಪಕ್ಷದಲ್ಲಿ ಚರ್ಚೆಯಾಗಿಲ್ಲ, ಅದು ಖಾಸಗಿ ನಿರ್ಣಯವಾದ್ದರಿಂದ ಮಂಡಿಸಲಾಗಿದೆ ಎಂದರು.
ಮೊದಲು ನಿಮ್ಮ ಪಕ್ಷದಲ್ಲಿ ಚರ್ಚಿಸಿ ಎಂದು ಸಿದ್ದರಾಮಯ್ಯ ಹೊರಟ್ಟಿ ಅವರಿಗೆ ಸಲಹೆ ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರು, ವಿಧಾನ ಪರಿಷತ್ ವಿಸರ್ಜಿಸುವ ಬಗ್ಗೆ ನಮ್ಮ ಪಕ್ಷದಲ್ಲಿ ಚರ್ಚೆಯಾಗಿದ್ದು, ವಿಸರ್ಜನೆ ಮಾಡಬಾರದು ಎಂದು ತೀರ್ಮಾನಿಸಿದ್ದೇವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾವೂ ವಿಸರ್ಜನೆ ಮಾಡಬಾರದು ಎಂದು ತೀರ್ಮಾನಿಸಿದ್ದೇವೆ ಎಂದರು.
ವಿಧಾನ ಪರಿಷತ್ ಅನ್ನು ವಿಸರ್ಜಿಸಬೇಕು ಎಂದು ನಿನ್ನೆ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ವಿಧಾನಸಭೆಯಲ್ಲಿ ಖಾಸಗಿ ನಿರ್ಣಯ ಮಂಡಿಸಿದ್ದರು. ಅಲ್ಲದೆ ರಹಸ್ಯ ಮತದಾನದ ಮೂಲಕ ನಿರ್ಣಯಕ್ಕೆ ಅನುಮೋದನೆ ಪಡೆಯುವಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಮಾಡಿದ್ದರು.
ನಿರ್ಣಯ ಮಂಡಿಸಿ ಮಾತನಾಡಿದ್ದ ಕೃಷ್ಣಪ್ಪ, ವಾರ್ಷಿಕ 300 ಕೋಟಿ ರೂ. ವೆಚ್ಚಕ್ಕೆ ಕಾರಣವಾಗಿ ರಾಜ್ಯ ಸರಕಾರದ ಪಾಲಿಗೆ ಬಿಳಿ ಆನೆಯಾಗಿರುವ ವಿಧಾನಪರಿಷತ್ತಿನಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಹಿಂದೆ ವಿಧಾನಪರಿಷತ್ತಿಗೆ ಇದ್ದ ಘನತೆ ಈಗಿಲ್ಲ. ಪ್ರಸ್ತುತ ಪರಿಷತ್ತು ಲ್ಯಾಂಡ್ ಮಾಫಿಯಾ, ಲಿಕ್ಕರ್ ಮಾಫಿಯಾ, ಮೆಡಿಕಲ್-ಎಂಜಿನಿಯರಿಂಗ್ ಕಾಲೇಜು ಸೀಟು ಮಾಫಿಯಾದವರಿಗೆ ಆಶ್ರಯ ನೀಡುವ "ರಾಜಕೀಯ ನಿರಾಶ್ರಿತರ ಶಿಬಿರ' ಆಗಿದೆ. ಹೀಗಾಗಿ, ರಾಜ್ಯದಲ್ಲಿ ಅದರ ಆವಶ್ಯಕತೆ ಇಲ್ಲ ಎಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


