ಶಾಸಕರು ಸಚಿವರ ನಡುವೆ ಹಳಸುತ್ತಿದೆ ಸಂಬಂಧ
ಕಾಂಗ್ರೆಸ್‍ಗೆ ದೊರೆತಿರುವ ಅಧಿಕಾರವೇ ಕೊನೆಯಾಗಬಾರದು, ಈಗಿರುವ ಅಸಮರ್ಥ ಸಚಿವರನ್ನು ನಂಬಿ ಕುಳಿತರೆ ಪಕ್ಷಕ್ಕೆ...

ಬೆಂಗಳೂರು: ಕಾಂಗ್ರೆಸ್‍ಗೆ ದೊರೆತಿರುವ ಅಧಿಕಾರವೇ ಕೊನೆಯಾಗಬಾರದು, ಈಗಿರುವ ಅಸಮರ್ಥ ಸಚಿವರನ್ನು ನಂಬಿ ಕುಳಿತರೆ ಪಕ್ಷಕ್ಕೆ ಉಳಿಗಾಲವಿಲ್ಲ. ಇದು ದಿಗ್ವಿಜಯ್ ಸಿಂಗ್ ಅವರು ಕರೆದಿರುವ ಸಭೆಯಲ್ಲಿ ಹೆಚ್ಚಿನ ಶಾಸಕರು ವ್ಯಕ್ತಪಡಿಸಿರುವ ಅಭಿಪ್ರಾಯ. ಸ್ಥಳೀಯ ಸಮಸ್ಯೆಗಳಿಗೆ ಸಚಿವರಿಂದ ಉತ್ತರವೇ ಲಭಿಸುತ್ತಿಲ್ಲ. ಸ್ಥಳೀಯ ರಾಜಕೀಯ ದ್ವೇಷದಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂಬುದೂ ಅವರ ಆರೋಪ. ಆದರೆ ಸಿಎಂ ಸಿದ್ದರಾಮಯ್ಯ ಅವರು ಇದಕ್ಕೆ ಕಡಿವಾಣ ಹಾಕುತ್ತಿಲ್ಲ. ಶಾಸಕರು ಮತ್ತು ಸಚಿವರ ನಡುವೆ ದಿನದಿಂದ ದಿನಕ್ಕೆ ವೈಯಕ್ತಿಕ ಸಂಬಂಧ ಹಳಸುತ್ತಿದೆ. ಅಧಿಕಾರಿಗಳ ಮಾತುಗಳೇ ನಡೆಯುತ್ತಿದ್ದು, ಶಾಸಕರ ಅಭಿಪ್ರಾಯಕ್ಕೆ ಮನ್ನಣೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಮೇಶ್‍ಕುಮಾರ್ ಗುಡುಗು
ಹಿರಿಯ ಶಾಸಕ ರಮೇಶ್‍ಕುಮಾರ್ ಅವರು ಸರ್ಕಾರದ ನಡೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹೊರಗಿನ ಚಿತ್ರಣಕ್ಕೂ, ವಾಸ್ತವಕ್ಕೂ ಭಾರಿ ವ್ಯತ್ಯಾಸವಿದೆ. ಈ ಬಗ್ಗೆ ತಕ್ಷಣ
ಎಚ್ಚತ್ತುಕೊಳ್ಳದಿದ್ದರೆ ಪಕ್ಷ ಮತ್ತೆ ಸಂಕಷ್ಟದ ದಿನ ಎದುರಿಸಬೇಕಾಗುತ್ತದೆ ಎಂದು ದಿಗ್ವಿಜಯ್ ಸಿಂಗ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಸಚಿವರ ವರ್ತನೆ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಅರ್ಹರನ್ನು ಹೊರಗಿಟ್ಟು ಅಧಿಕಾರ ನಡೆಸಲಾಗುತ್ತಿದೆ. ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿರುವ ಸಚಿವರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಹೊಂದಾಣಿಕೆ ಇಲ್ಲ ಎಂದು ಆಕ್ರೋಶ ವ್ಯಕ್ತ
ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು ಮುಕ್ಕಾಲು ಗಂಟೆ ಕಾಲ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಸುತ್ತ ವಂದಿಮಾಗದರೇ ತುಂಬಿಕೊಂಡಿರುವುದರಿಂದ ನಿಷ್ಠಾವಂತ ಕಾರ್ಯಕರ್ತರು ಮತ್ತು ಹಿರಿಯ ಮುಖಂಡರಿಗೆ ಅವರನ್ನು ಸಂಪರ್ಕಿಸುವುದು ಕಷ್ಟವಾಗುತ್ತಿದೆ. ಸಂಪುಟದಲ್ಲಿ ಜಿಲ್ಲೆ ಮತ್ತು ಜಾತಿಗೆ ಅನುಗುಣವಾಗಿ ಪ್ರಾತಿನಿಧ್ಯವಿಲ್ಲ. ಬೆಂಗಳೂರು, ಮೈಸೂರು, ಮಂಗಳೂರು, ಗುಲ್ಬರ್ಗಕ್ಕೆ ಮಾತ್ರ ವಿಶೇಷ ಪ್ರಾತಿನಿಧ್ಯ ಸಿಕ್ಕರೆ ಸಾಕೇ ? ಎಂದು ಪ್ರಶ್ನಿಸಿದ್ದಾರೆ. ಎಷ್ಟೇ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾದರೂ ಕಾಂಗ್ರೆಸ್ ಮತ್ತೆ ಚಿಗುರುವುದಕ್ಕೆ ನಮ್ಮ ಪಕ್ಷ ಸಿದ್ದಾಂತವೇ ಕಾರಣ. ಆದರೆ ಇತ್ತೀಚಿನ ದಿನಗಳಲ್ಲಿ ದುಡ್ಡಿದ್ದವರಿಗೆ ಮಾತ್ರ ಅವಕಾಶ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಕ್ಕಾಗಿ ನಮ್ಮಂತವರು ದೆಹಲಿಗೆ ಬಂದು ಸುತ್ತು ಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನೊಂದು ಬಣ ಸಮರ್ಥನೆ
ಆದರೆ ಶಾಸಕರ ಇನ್ನೊಂದು ಬಣ ಸಿಎಂ ಸಿದ್ದರಾಮಯ್ಯ ಅವರನ್ನು ಬಲವಾಗಿ ಸಮರ್ಥಿಸಿದೆ. ಬಿಜೆಪಿಯವರು ಅರ್ಕಾವತಿ ಬಡಾವಣೆ ವಿಚಾರದಲ್ಲಿ ವಿನಾ ಕಾರಣ ಸದ್ದು ಮಾ ಡುತ್ತಿದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ ರಾಜಕೀಯ ವಾಗ್ದಾಳಿ ಪಕ್ಷದ ಕಡೆಯಿಂದ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.
ವೀರಶೈವ ಮುಖಂಡರ ಆಕ್ರೋಶ
ಲಿಂಗಾಯಿತ ಸಮುದಾಯದವರು ಕಾಂಗ್ರೆಸ್ ಜತೆಗಿಲ್ಲ ಎಂಬ ಸುಳ್ಳು ಮಾಹಿತಿ ಯನ್ನು ತಳಹಂತದಿಂದ ಹೈಕಮಾಂಡ್ ವರೆಗೆ ಹಬ್ಬಿಸುತ್ತಿರುವ ಬಗ್ಗೆ ಕಾಂಗ್ರೆಸ್‍ನ ವೀರಶೈವ
ಮುಖಂಡರು ದಿಗ್ವಿಜಯ್ ಸಿಂಗ್ ಸಮ್ಮುಖದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಿಂಗಾಯಿತರು ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಹಾಗಾದರೆ ಪಕ್ಷದಲ್ಲಿ ಲಿಂಗಾಯಿತ ಶಾಸಕರು ಇಲ್ಲವೇ? ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಮುಂಬಯಿ ಕರ್ನಾಟಕ ಭಾಗದಿಂದ ಸಾಕಷ್ಟು ವೀರಶೈವ ಶಾಸಕರು ಆಯ್ಕೆಗೊಂಡಿ ದ್ದಾರೆ. ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ವೀರಶೈವರು ಕಾರಣರಾಗಿದ್ದಾರೆ. ಆದಾಗಿಯೂ ಇಂಥ ಸುದ್ದಿ ಹಬ್ಬಿಸುತ್ತಿರುವುದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ ಎಂಬ ಆರೋಪ ವ್ಯಕ್ತವಾಗಿದೆ.
ಇಲ್ಲಿ ಹೇಳುವುದಿಲ್ಲ, ಪತ್ರ ಬರೆಯುತ್ತೇವೆ
ಸರ್ಕಾರದ ಕಾರ್ಯ ವೈಖರಿ ಬಗ್ಗೆ ಪತ್ರ ಬರೆದು ಮಾಹಿತಿ ನೀಡುವುದಾಗಿ ಕೆಲ ಹಿರಿಯ ಶಾಸಕರು ದಿಗ್ವಿಜಯ್ ಸಿಂಗ್ ಅವರಿಗೆ ಹೇಳಿದ್ದಾರೆ. ಕೆ.ಬಿ.ಕೋಳಿವಾಡ, ಮಾಲೀಕಯ್ಯ ಗುತ್ತೇದಾರ್ ಅವರು ಸರ್ಕಾರ, ಸಚಿವರ ಕಾರ್ಯ ನಿರ್ವಹಣೆ ಬಗ್ಗೆ ಪತ್ರ ಬರೆಯುತ್ತೇವೆ ಎಂದು ಬಹಿರಂಗವಾಗಿಯೇ ಸಭೆಯಲ್ಲಿ ಹೇಳಿದ್ದಾರೆ.
ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿರುವುದು ನಿಜ. ಸ್ಥಳೀಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಶಾಸಕರ ಅಭಿಪ್ರಾಯವನ್ನು ನಾನು ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಜತೆಗೂಡಿ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇವೆ.
- ಡಾ.ಜಿ.ಪರಮೇಶ್ವರ,
ಕೆಪಿಸಿಸಿ ಅಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


