ದೇಶಪಾಂಡೆ ವಿರುದ್ಧ ದೂರಿನ ಹಿಂದೆ ನಿಗೂಢ ರಾಜಕಾರಣ!
ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧ ದಾಖಲಾಗಿರುವ ಹೊಸ ಖಾಸಗಿ ದೂರಿನ ಸುತ್ತ ಈಗ ನಿಗೂಢ...

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧ ದಾಖಲಾಗಿರುವ ಹೊಸ ಖಾಸಗಿ ದೂರಿನ ಸುತ್ತ ಈಗ ನಿಗೂಢ ರಾಜಕಾರಣದ ಅಡ್ಡವಾಸನೆ ಹೊಡೆಯಲಾರಂಭಿಸಿದೆ. ದೇಶಪಾಂಡೆ ಅವರು ಈ ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಐಟಿ ಕಾರಿಡಾರ್ ಉದ್ದೇಶಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಸ್ವಾಧೀನಪಡಿಸಿಕೊಂಡ ಮತ್ತು ಡಿನೋಟಿಫೈ ಮಾಡಲಾದ ಭೂ ವ್ಯವಹಾರದಲ್ಲಿ ಅಕ್ರಮವಾಗಿದೆ ಎಂದು
ವಾಸುದೇವ ರೆಡ್ಡಿ ಎಂಬುವರು ಇತ್ತೀಚೆಗೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ. ಕುತೂಹಲಕಾರಿ ಸಂಗತಿ ಎಂದರೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2013ರಲ್ಲಿ ಹಾಲಿ ದೂರುದಾರರ ತಂದೆ ಪಿ.ನಾರಾಯಣಪ್ಪ ಅವರು ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‍ನಲ್ಲಿ ದೂರು ಸಲ್ಲಿಸಿದ್ದರು. ಆದರೆ ಎರಡೂ ನ್ಯಾಯಾಲಯದಲ್ಲಿ ಅರ್ಜಿದಾರರ ವಾದ ಬಿದ್ದು ಹೋಗಿತ್ತು. ಆದರೆ ಈಗ ಮತ್ತೆ ಅದೇ ಪ್ರಕರಣ ಸಂಬಂಧ ಲೋಕಾಯುಕ್ತ ವಿಶೇಷ ನ್ಯಾಯಾಲ ಯದಲ್ಲಿ ಖಾಸಗಿ ದೂರು ದಾಖಲಾಗಿದೆ. ಕುತೂಹಲಕಾರಿ ಸಂಗತಿ ಎಂದರೆ ತಂದೆ ಪಿ.ನಾರಾಯಣಪ್ಪ ನೀಡಿದ ದೂರಿನಲ್ಲಿ 10 ಮಂದಿಯನ್ನು ಪ್ರತಿವಾದಿ (ಆರೋಪಿ ) ಎಂದು ಹೆಸರಿಸಲಾಗಿತ್ತು. ಆದರೆ ಅವರ ಪುತ್ರ ವಾಸುದೇವ ರೆಡ್ಡಿ ನೀಡಿರುವ ದೂರಿನಲ್ಲಿ ಆರ್.ವಿ.ದೇಶಪಾಂಡೆ ಮತ್ತು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಾತ್ರ ಸೇರಿಸಲಾಗಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಈ ಸಂಬಂಧ ನೀಡಿದ ತೀರ್ಪನ್ನು ಲೋಕಾಯುಕ್ತ ನ್ಯಾಯಾಲಯದ ಗಮನಕ್ಕೆ ತಾರದೇ ಖಾಸಗಿ ದೂರು ನೀಡಿರುವುದರ ಹಿಂದೆ `ಕೈ'ವಾಡ ಕಾಣಲಾರಂಭಿಸಿದೆ.
ದೇಶಪಾಂಡೆ ಕೈಗಾರಿಕಾ ಸಚಿವರಾಗಿದ್ದ ಸಂದರ್ಭದಲ್ಲಿ ರಾಯಲ್ ಫ್ರೆ ಗ್ರೆನ್ಸ್, ವಿಕಾಸ್ ಟೆಲಿಕಾಂ, ಸುಪ್ರೀಂ ಬಿಲ್ಟೆಕ್ ಸಂಸ್ಥೆಗಳಿಗಾಗಿ ಭೂ ಸ್ವಾಧೀನಪಡಿಸಿಕೊಂಡು ಹಂಚಿಕೆ ಮಾಡಿರುವ ಬಗ್ಗೆ ವಾಸುದೇವ ರೆಡ್ಡಿಯವರ ತಂದೆ ಪಿ.ನಾರಾಯಣಪ್ಪ ಈ ಹಿಂದೆ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆದರೆ ಈ ಕಂಪನಿಗಳಿಗಾಗಿ ವಶಪಡಿಸಿಕೊಂಡ ತಕರಾರುಗಳನ್ನು ತಿರಸ್ಕರಿಸಿದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸ್ವಾಧೀನ ಮತ್ತು
ಹಂಚಿಕೆ ಪ್ರಕ್ರಿಯೆ ಯನ್ನು ಎತ್ತಿ ಹಿಡಿದಿತ್ತು. ಆದರೆ ಈ ಸತ್ಯವನ್ನು ಮುಚ್ಚಿಟ್ಟಿರುವ ವಾಸುದೇವ ರೆಡ್ಡಿ ದುರುದ್ದೇಶ ಪೂರಿತವಾಗಿ ಲೋಕಾಯುಕ್ತ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಏಕೆಂದರೆ ಆರೋಪ ಮತ್ತು ಸ್ವರೂಪದಲ್ಲಿ ತಂದೆ-ಮಗ ನೀಡಿದ ದೂರು ಒಂದೇ ಆದರೂ ಹಿಂದೆ ನೀಡಿದ್ದ ದೂರಿನಲ್ಲಿದ್ದ 8 ಮಂದಿ ಆರೋಪಿಯನ್ನು ಕೈ ಬಿಟ್ಟಿದ್ದು ಏಕೆ ? ಕೇವಲ ಇಬ್ಬರು ಮಾತ್ರ ಇದಕ್ಕೆ ಕಾರಣರು ಎಂದು ನ್ಯಾಯಾಲಯದ ತೀರ್ಪಿನ ಹೊರತಾ ಗಿಯೂ ಪ್ರತಿಷ್ಠಾಪಿಸುವ ಪ್ರಯತ್ನ ನಡೆಸುತ್ತಿ ರುವುದೇಕೆ ಎಂಬ ಪ್ರಶ್ನೆ ಕಾಡುತ್ತಿದೆ. ಯಾವುದೇ ಭೂ ಹಂಚಿಕೆ ಪ್ರಕ್ರಿಯೆ ಯಲ್ಲಿ ಅದರಲ್ಲೂ ವಿಶೇಷವಾಗಿ ಕೈಗಾರಿಕಾ ಉದ್ದೇಶಕ್ಕೆ ಭೂಮಿ ಸ್ವಾಧೀನ ಮತ್ತು ಹಂಚಿಕೆ ಮಾಡುವಾಗ ಸರ್ಕಾರದ ಉನ್ನತ ಮಟ್ಟದ ಸಮಿತಿಯ ಒಪ್ಪಿಗೆ ಪಡೆದು ಏಕಗವಾಕ್ಷಿ ಯೋಜನೆ ಮೂಲಕವೇ ನಡೆಸಲಾಗುತ್ತದೆ. ದೇಶಪಾಂಡೆ ಕೈಗಾರಿಕಾ ಸಚಿವರಾಗಿದ್ದ ಕಾಲದಲ್ಲಿ ಅವರ ಇಲಾಖೆಯಲ್ಲಿ ಡಿನೋಟಿಫಿಕೇಶನ್ ನಡೆದ ಬಗ್ಗೆ ಇದುವರೆಗೆ ಯಾವುದೇ ದಾಖಲೆ ಲಬಿsಸಿಲ್ಲ. ಜತೆಗೆ ಈ ಮಾರ್ಗದ ಮೂಲಕ ಅವರು ಹಣಗಳಿಸಿದ್ದಾರೆಂಬ ಆರೋಪವೂ ಸತ್ಯಕ್ಕೆ ದೂರ. ಹೀಗಾಗಿ 14 ವರ್ಷಗಳ ಹಿಂದೆ ನಡೆದ ಪ್ರಕರಣವನ್ನು ಮತ್ತೆ ಕೆದಕಿ ಸುದ್ದಿ ಮಾಡುತ್ತಿರುವುದು ದೂರಿನ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುವಂತಾಗಿದೆ.
ಇದು ದೇಶಪಾಂಡೆ ಅವರ ರಾಜಕೀಯ ಚಾರಿತ್ರ್ಯವನ್ನು ಕಲುಷಿತಗೊಳಿಸುವ ಪ್ರಯತ್ನ ಎಂಬ ಅನುಮಾನವೂ ಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


