ಸಕ್ಕರೆ ಕಾರ್ಖಾನೆಗಳ ಪರ ಸರ್ಕಾರದ ವಕಾಲತ್ತು
ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ರು. 2488.97 ಕೋಟಿ ಬಾಕಿ ಉಳಿಸಿಕೊಂಡಿದ್ದು, ಸರ್ಕಾರ ಕಾರ್ಖಾನೆ ಮಾಲೀಕರ...

ವಿಧಾನಸಭೆ: ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ರು. 2488.97 ಕೋಟಿ ಬಾಕಿ ಉಳಿಸಿಕೊಂಡಿದ್ದು, ಸರ್ಕಾರ ಕಾರ್ಖಾನೆ ಮಾಲೀಕರ ಪರ ವಕಾಲತ್ತು ವಹಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಧರಣಿ ನಡೆಸಿದರು. ಯಾವುದೇ ಕಾರ್ಖಾನೆಗಳು ರೈತರಿಗೆ ಹಣ ನೀಡಿಲ್ಲ. ಆದರೆ ಕೇವಲ 6 ಕಾರ್ಖಾನೆಗಳ ಗೋದಾಮು ಜಪ್ತಿ ಮಾಡಲಾ ಗಿದೆ. ಸಚಿವರು ಹಾಗೂ ಶಾಸಕರ ಕಾರ್ಖಾನೆಗಳ ಬಗ್ಗೆ ಮೌನ ವಹಿಸಲಾಗಿದೆ ಸಕ್ಕರೆ ಕಾರ್ಖಾನೆ ಮಾಲೀಕರೆದುರು ಸರ್ಕಾರ ಶರಣಾಗಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಸದನದ ಬಾವಿಗಿಳಿದರು. ನಿಲುವಳಿ ಸೂಚನೆ ಮೂಲಕ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆಗೆ ಅವಕಾಶ ಕೇಳಿದ್ದರು. ಪ್ರತಿಪಕ್ಷಗಳ ಚರ್ಚೆ ಆಧರಿಸಿ ಸಹಕಾರ ಸಚಿವ ಎಚ್.ಎಸ್.ಮಹಾದೇವ್ ಪ್ರಸಾದ್ ಸದನಕ್ಕೆ ಮೂರು ಪುಟಗಳ ಮಾಹಿತಿ ನೀಡಿದರು. ಆದರೆ, ಕಾಂಗ್ರೆಸ್ ಮುಖಂಡ ರು ಸೇರಿದಂತೆ ಬಹುತೇಕ ಕಾರ್ಖಾನೆಗಳ ಮಾಹಿತಿ ನೀಡಿಲ್ಲ. ಕಾರ್ಖಾನೆ ಮಾಲೀಕರನ್ನು ರಕ್ಷಿಸುವ ಕೆಲಸ ಮಾಡಲಾಗುತ್ತಿದೆ. ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ನೀಡಿದ್ದ ಭರವಸೆ ಸುಳ್ಳಾಗಿದೆ ಎಂದು ಶೆಟ್ಟರ್ ಆರೋಪಿಸಿದರು. ಪ್ರತಿಕ್ರಿಯಿಸಿದ ಸಚಿವ ಮಹಾದೇವ್ ಪ್ರಸಾದ್, ರೈತರಿಗೆ ಬಾಕಿ ಕೊಡಬೇಕಾದ ಸಕ್ಕರೆ ಕಾರ್ಖಾನೆ ಮಾಲೀಕರೇ ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಹೊರಗೆ ಹೋಗಿ ಸಕ್ಕರೆ ಕಾರ್ಖಾನೆ ಪರ ಮಾತನಾಡುವ ಬಿಜೆಪಿ ಶಾಸಕರು ಇಲ್ಲಿ ರೈತರ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯದು ಏಕಪಾತ್ರಾಭಿನಯವಾಗಿದೆ ಎಂದು ಹೇಳಿದರು. 63 ಕಾರ್ಖಾನೆಗಳಿಂದ 1495 ಕೋಟಿ ಬಾಕಿ 201415ನೇ ಸಾಲಿನಲ್ಲಿ ಜನವರಿ ಅಂತ್ಯದವರೆಗೆ 63 ಸಕ್ಕರೆ ಕಾರ್ಖಾನೆಗಳು 223 ಲಕ್ಷ ಟನ್ ಕಬ್ಬು ಅರೆದು 23.13 ಲಕ್ಷ
ಟನ್ ಸಕ್ಕರೆ ಉತ್ಪಾದಿಸಿವೆ. ಒಟ್ಟಾರೆ ರೈತರಿಗೆ ರು. 4358 ಕೋಟಿ ಹಣ ಪಾವತಿಸಬೇಕಿದ್ದು ಕೇವಲ ರು. 2862 ಕೋಟಿ ಪಾವತಿಸಲಾಗಿ ದೆ. ರೈತರಿಗೆ ಇನ್ನೂ ರು. 1495 ಕೋಟಿ ನೀಡಬೇಕಿದೆ. ಈ ಸಂಬಂಧ ಎಲ್ಲ ಕಾರ್ಖಾನೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಆದರೆ 201314ನೇ ಸಾಲಿನಲ್ಲಿ 60 ಕಾರ್ಖಾನೆಗಳಿಂದ ರೈತರಿಗೆ ರು. 993.97 ಕೋಟಿ ನೀಡಬೇಕಿದೆ. ಮಾರ್ಚ್ 2015ರ ನಂತರ ಈ ಬಾಕಿ ಪಾವತಿಸಲಾಗುವುದು ಎಂದು ಮಹಾದೇವ್ ಪ್ರಸಾದ್ ತಿಳಿಸಿದರು. ಆದರೆ ಮಾರ್ಚ್ 2015ರ ನಂತರ ಯಾವಾಗ ಪಾವತಿಸಲಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ. ಪ್ರಸಕ್ತ ಸಾಲಿನ ರು. 1495 ಕೋಟಿ ಮೊತ್ತವನ್ನು ರೈತರಿಗೆ ಪಾವತಿಸುವ ಕಾಲಾವಧಿಯನ್ನೂ ನಿಗದಿ ಮಾಡಿಲ್ಲ. ಬಿಜೆಪಿ ಶಾಸಕರು ಸರ್ಕಾರದ ಈ ಕ್ರಮ ಖಂಡಿಸಿದ್ದಾರೆ. ಕಬ್ಬು ಚರ್ಚೆಗೆ ಉತ್ತರ ಆರಂಭವಾಗುವವರೆಗೆ ಸದನದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೂಡಲೇ ಜಾಗ ಖಾಲಿ ಮಾಡಿದರು. ಇದಕ್ಕೂ ಬಿಜೆಪಿ ಮುಖಂಡರು ಆಕ್ಷೇಪವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


