ಕಬ್ಬು ಬೆಳೆಗಾರರಿಗೆ ಹಣ ಪಾವತಿ ಆರಂಭ
ಕಬ್ಬು ಬೆಳೆಗಾರರಿಗೆ ಹಣ ಪಾವತಿಸದ ಸಕ್ಕರೆ ಕಾರ್ಖಾನೆಗಳ ಗೋದಾಮುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗುತ್ತಿದೆ...

ವಿಧಾನ ಪರಿಷತ್ತು: ಕಬ್ಬು ಬೆಳೆಗಾರರಿಗೆ ಹಣ ಪಾವತಿಸದ ಸಕ್ಕರೆ ಕಾರ್ಖಾನೆಗಳ ಗೋದಾಮುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗುತ್ತಿದೆ.
ಇದರಿಂದ ಎಚ್ಚೆತ್ತ ಕಾರ್ಖಾನೆಗಳು ರೈತರಿಗೆ ಹಣ ಪಾವತಿ ಮಾಡಲಾರಂಭಿಸಿವೆ ಎಂದು ಸಕ್ಕರೆ ಖಾತೆ ಸಚಿವ ಎಚ್.ಎಸ್.ಮಹದೇವಪ್ರಸಾದ್ ಮಾಹಿತಿ ನೀಡಿದ್ದಾರೆ.
ಸದಸ್ಯ ಮಹಾಂತೇಶ್ ಶಿವಾನಂದ ಕೌಜಲಗಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಕ್ಕರೆ ತಯಾರಕರು ಕಬ್ಬು ಖರೀದಿಸಿದ 14 ದಿನಗಳ ಒಳಗಾಗಿ ಹಣ ಪಾವತಿಸಬೇಕೆಂದಿದ್ದರೂ ಯಾವುದೇ ಕಾರ್ಖಾನೆ ನಿಯಮ ಪಾಲಿಸಿಲ್ಲ. ಹೀಗಾಗಿ ನಿಯಮದಂತೆ ಹಣ ಪಾವತಿ ಮಾಡದ 63 ಕಾರ್ಖಾನೆಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ.
ನಿಗದಿತ ಅವಧಿಯೊ ಳಗೆ ಹಣ ಪಾವತಿ ಮಾಡದೇ ಇದ್ದಲ್ಲಿ ವಿಳಂಬದ ಅವಧಿಗೆ ಬಾಕಿ ಮೊತ್ತದ ಮೇಲೆ ಶೇ.15ರಷ್ಟು ಬಡ್ಡಿ ಸೇರಿಸಿ ಪಾವತಿಸಲು ಕಾರ್ಖಾನೆಗಳಿಗೆ ಅವಕಾಶ ಇರುವುದರಿಂದ ಏಕಾಏಕಿ ಕಾರ್ಖಾನೆಗಳ ಮೇಲೆ ಕ್ರಮಕೈಗೊಳ್ಳಲಾಗುತ್ತಿಲ್ಲ ಎಂದು ಸಚಿವರು ವಿವರಿಸಿದರು.
ಬೆಳಗಾವಿ ಅಧಿವೇಶನದಲ್ಲೂ ಇದೇ ಉತ್ತರ ಕೊಟ್ಟಿದ್ದೀರ, ರೈತರಿಗೆ ಹಣ ಯಾವಾಗ ಕೊಡಿಸುತ್ತೀರಾ ಎಂಬುದನ್ನು ಸ್ಪಷ್ಟಪಡಿಸಿ ಎಂದು ಪ್ರತಿಪಕ್ಷ ಸದಸ್ಯರು
ಪಟ್ಟು ಹಿಡಿದರು. ಅದಕ್ಕೆ ಉತ್ತರಿಸಿದ ಸಚಿವರು, ಆರಂಭದಲ್ಲಿ ರೈತರಿಗೆ 1750 ಕೋಟಿ ರುಪಾಯಿ ಬಾಕಿ ಇತ್ತು, ಇದೀಗ 1230 ಕೋಟಿ ರುಪಾಯಿಗೆ ಇಳಿದಿದೆ. 2-3 ಗೋದಾಮುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ನಂತರ ಕಾರ್ಖಾನೆಗಳು ಹಣ ಪಾವತಿಗೆ ಮುಂದಾಗಿವೆ ಎಂದರು.
ಕಡಿತ ಮಾಡೋಹಾಗಿಲ್ಲ ಕಬ್ಬಿನ ತೂಕದಲ್ಲಿ ಶೇ.1ರಷ್ಟು ಬೈಂಡಿಂಗ್ ಮೆಟೀರಿಯಲ್ ಕಡಿತಗೊಳಿಸಲು ಅವಕಾಶವಿದೆ. ಬಾಗಲಕೋಟೆ ಜಿಲ್ಲೆಯ ನಾಲ್ಕು ಸಕ್ಕರೆ ಕಾರ್ಖಾನೆಗಳು ಶೇ.2.5ರಷ್ಟು ಕಡಿತಗೊಳಿಸಿರುವುದು ಕಂಡುಬಂದಿದೆ. ಈ ಸಂಬಂಧ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ. ಈ ಮಧ್ಯೆ ಕಾರ್ಖಾನೆಯವರು ಸಲ್ಲಿಸಿರುವ ಉತ್ತರದಲ್ಲಿ ರೈತರು ಬೆಳೆದ 91010 ಕಬ್ಬಿನ ತಳಿಯ ಸಿಪ್ಪೆ ದಪ್ಪವಿದ್ದು, ಈ ತಳಿ ಕಬ್ಬಿನ ಸಿಪ್ಪೆ ಹೆಚ್ಚಿಗೆ ಇರುವುದರಿಂದ ಕೇವಲ ಶೇ.1ರಷ್ಟು ಕಟಾವು ಮಾಡಿದಲ್ಲಿ ಕಾರ್ಖಾನೆಗೆ ನಷ್ಟವಾಗುತ್ತದೆ ಮತ್ತು ರೈತ ಮುಖಂಡರೂ ಚರ್ಚಿಸಿ ಶೇ.2.5 ಕಡಿತಕ್ಕೆ ಸಮ್ಮತಿ ನೀಡಿದ್ದಾರೆ. ಪರಿಶೀಲನೆ ನಂತರ ಅಗತ್ಯಬಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


