ರಾಜಕೀಯ

ತೊಗಾಡಿಯಾಗೆ ನಿರ್ಬಂಧ: ಉಭಯ ಸದನ ರಣರಂಗ

ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ಬೆಂಗಳೂರು ಪ್ರವೇಶ ನಿರ್ಬಂಧ ರದ್ದು...

ತೊಗಾಡಿಯಾಗೆ ನಿರ್ಬಂಧ: ಉಭಯ ಸದನ ರಣರಂಗ
ವಿಧಾನಸಭಾ ಕಲಾಪ (ಸಂಗ್ರಹ ಚಿತ್ರ)
Published On :

ಬೆಂಗಳೂರು: ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ಬೆಂಗಳೂರು ಪ್ರವೇಶ ನಿರ್ಬಂಧ ರದ್ದುಗೊಳಿಸಲು ಸರ್ಕಾರ ಒಪ್ಪದ ಬಗ್ಗೆ ಉಭಯ ಸದನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ಯುದ್ದವೇ ನಡೆಯಿತು.

ನಿಷೇಧ ತೆರವು ಮಾಡದಿರುವ ಪಟ್ಟಿಗೆ ಸರ್ಕಾರ ಅಂಟಿಕೊಂಡರೆ, ತೆರವು ಮಾಡದ ಹೊರತು ಧರಣಿ ನಿಲ್ಲಿಸುವುದಿಲ್ಲ ಎಂದು ಬಿಜೆಪಿ ಪಟ್ಟು ಹಿಡಿಯಿತು.ಹೀಗಾಗಿ ಎರಡೂ ಸದನಗಳು ಬುಧವಾರ ಧರಣಿಗಷ್ಟೇ ಸೀಮಿತವಾಗಿದ್ದವು. ವಿಧಾನಸಭೆ ಆರಂಭದಲ್ಲೇ ಬಿಜೆಪಿ ವಿಷಯ ಪ್ರಸ್ತಾಪಿಸಿ ತೊಗಾಡಿಯಾ ಮೇಲಿನ ನಿರ್ಬಂಧ ತೆರವಿಗೆ ಆಗ್ರಹಿಸಿತು. ಪ್ರಶ್ನೋತ್ತರ ವೇಳೆಯಲ್ಲಿ ಪ್ರಸ್ತಾವನೆಗೆ ಅವಕಾಶ ದೊರೆಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ತೆರವಿಗೆ ಅವಕಾಶ ನೀಡಲು ಸಾಧ್ಯ ಇಲ್ಲ' ಎಂದು ಸ್ಪಷ್ಟವಾಗಿ ಹೇಳಿದರು.

ಇದರಿಂದ ಕುಪಿತಗೊಂಡ ಬಿಜೆಪಿ ಸದಸ್ಯರು ಆರ್. ಅಶೋಕ್ ನೇತೃತ್ವದಲ್ಲಿ ಧರಣಿ ನಡೆಸಿದರು. ಎರಡು ಬಾರಿ ಸದನವನ್ನು ಮುಂದೂಡಿ ದರೂ ಮತ್ತೆ ಕಲಾಪ ಆರಂಭವಾದಾಗ ಧರಣಿ ಮುಂದುವರಿಯಿತು. ಇದರಿಂದ ಸ್ಪೀಕರ್ ಕಾಗೋಡು ತಿಮ್ಮಪ್ಪ ಸದನವನ್ನು ಗುರುವಾರಕ್ಕೆ ಮುಂದೂಡಿದರು. ವಿಧಾನಸಭೆಯಲ್ಲಿ ಬಿಜೆಪಿ ನಡೆಸಿದ ಧರಣಿಯಲ್ಲಿ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖುಬಾ ಭಾಗವಹಿಸಿದ್ದು ಗಮನಾರ್ಹವಾಗಿತ್ತು.

ವಿಧಾನಪರಿಷತ್‍ನಲ್ಲಿ ತೊಗಾಡಿಯಾ ಪ್ರವೇಶ ನಿರ್ಬಂಧ ವಿಷಯವಾಗಿ ನಿಲುವಳಿ ಸೂಚನೆ ಮಂಡಿಸಲು ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮುಂದಾದರು. ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ಸಭಾಪತಿ ಅನುಮತಿ ನೀಡಿದರು. ಇದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎರಡೂ ಪಕ್ಷದ ಸದಸ್ಯರು ಪರಸ್ಪರ ವಾಗ್ದಾಳಿ ನಡೆಸಿದರು. ಬಿಜೆಪಿ ಸದಸ್ಯರು ಧರಣಿಯನ್ನೂ ನಡೆಸಿದರು.

ಭೋಜನ ನಂತರ ಕಲಾಪ ಆರಂಭವಾದಾಗ ನಿಲುವಳಿ ಸೂಚನೆ ಮಂಡಿಸಲು ಬಿಜೆಪಿ ಮುಂದಾದಾಗ ಕಾಂಗ್ರೆಸ್ ನವರು ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ಉಂಟಾಗ ಗದ್ದಲದಿಂದ ಸಭಾಪತಿಯವರು ಸದನ ಮುಂದೂಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.