ಧನಾಭಿಷೇಕದಲ್ಲೂ ದೇವರಿಗೆ ದೋಖಾ
ರಾಜ್ಯ ಸರ್ಕಾರ ದೇವರಿಗೂ ಅನ್ಯಾಯ ಮಾಡುತ್ತಿದೆ! ಬೀದರ್‍ನಲ್ಲಿರುವ ದೇವರಿಗಿಂತ ತುಮಕೂರಿನಲ್ಲಿರುವ ದೇವರೇ ಹೆಚ್ಚಂತೆ. ಬೆಳಗಾವಿ ದೇವರಿಗೆ ಹೆಚ್ಚು ಹಣ ಬೇಕು...

ವಿಧಾನಸಭೆ: ರಾಜ್ಯ ಸರ್ಕಾರ ದೇವರಿಗೂ ಅನ್ಯಾಯ ಮಾಡುತ್ತಿದೆ! ಬೀದರ್‍ನಲ್ಲಿರುವ ದೇವರಿಗಿಂತ ತುಮಕೂರಿನಲ್ಲಿರುವ ದೇವರೇ ಹೆಚ್ಚಂತೆ. ಬೆಳಗಾವಿ ದೇವರಿಗೆ ಹೆಚ್ಚು ಹಣ ಬೇಕು, ಕೊಡಗು ದೇವರಿಗೆ ಬೇಡ!
ಹಾಗೆಂದೇ ಸರ್ಕಾರ `ಆರಾಧನಾ' ತಾರತಮ್ಯ ಮಾಡುತ್ತಿದೆ ಎಂದು ದಾಖಲೆ ಸಹಿತ ಬಿಜೆಪಿಯ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಬಹಿರಂಗಪಡಿಸಿದರು. ಅಷ್ಟಕ್ಕೂ ಈ ದಾಖಲೆಯನ್ನು ನೀಡಿರುವುದು ಸರ್ಕಾರವೇ.
ಮುಜರಾಯಿ ಖಾತೆ ಸಚಿವ ಟಿ.ಬಿ. ಜಯಚಂದ್ರ ಅವರು ಬಸವರಾಜ ಬೊಮ್ಮಾಯಿ ಅವರ ಪ್ರಶ್ನೆಗೆ ಉತ್ತರಿಸಿದ್ದರು. ದೇವಸ್ಥಾನಗಳಿಗೆ ಆರಾಧನಾ ಯೋಜನೆಯಲ್ಲಿ ಎಷ್ಟು ಹಣ ನೀಡಲಾಗಿದೆ ಎಂಬುದನ್ನು ಜಿಲ್ಲಾವಾರು ಮಾಹಿತಿ ನೀಡಿ ಎಂದೂ ಕೇಳಿದ್ದರು. ಹೀಗೆ ನೀಡಿದ್ದ ಮಾಹಿತಿಯಲ್ಲಿ ತುಮಕೂರಿಗೆ ರು.5 ಕೋಟಿ ನೀಡಲಾಗಿತ್ತು. ಬೀದರ್ ಗೆ ರು.23 ಲಕ್ಷ, ಕೊಡಗಿಗೆ ರು.13 ಲಕ್ಷ!
ಇದನ್ನು ಉಲ್ಲೇಖಿಸಿಯೇ ಮಾತನಾಡಿದ ಬಸವರಾಜ ಬೊಮ್ಮಾಯಿ, ಅನುದಾನ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಈ ಸರ್ಕಾರದಲ್ಲಿ ದೇವರಿಗೂ ಅನ್ಯಾಯವಾಗುತ್ತಿದೆ. ಯಾರು ಮಂತ್ರಿಗಳಾಗುತ್ತಾರೋ ಅವರ ಜಿಲ್ಲೆಗೆ ಹೆಚ್ಚಿನ ಅನುದಾನ ಹೋಗುತ್ತದೆ. ಅಷ್ಟೇ ಅಲ್ಲ, ಅವರ ಕ್ಷೇತ್ರಕ್ಕೆ `ಆರಾಧನಾ' ಅನುದಾನವೂ ಹೆಚ್ಚಾಗಿಯೇ ನೀಡಲಾಗುತ್ತದೆ. ಶಾಸಕರ ಪ್ರಸ್ತಾವನೆಯಂತೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಎಲ್ಲದರಲ್ಲೂ ತಾರತಮ್ಯ ಎಂದು ಆರೋಪಿಸಿದರು. ಇದಕ್ಕೆ ಮಲ್ಲಿಕಾರ್ಜುನ ಖೂಬಾ ಕೂಡ ದನಿ ಸೇರಿಸಿ, ಬೀದರ್ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು, ದೇವಸ್ಥಾನಗಳಿಗೂ ಹಣ ಬಿಡುಗಡೆ ಮಾಡುವಲ್ಲಿ ನಿರ್ಲಕ್ಷಿಸುವುದು ಸರಿಯಲ್ಲ ಎಂದರು.
ಸಚಿವ ಟಿ.ಬಿ. ಜಯಚಂದ್ರ ಅವರು ಉತ್ತರಿಸಿ, ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಉಂಟಾಗಿದೆ ಎಂಬುದನ್ನು ಸ್ಪಷ್ಟವಾಗಿ ಒಪ್ಪಿಕೊಂಡರು. ನಾನು ಈ ಖಾತೆಗೆ ಮೂರನೇ ಸಚಿವ. ಹಿಂದೆ ಹುಕ್ಕೇರಿ ಇದ್ದರು, ನಂತರ ಮುಖ್ಯಮಂತ್ರಿ. ನನಗೆ ಬರುವ ವೇಳೆಗೆ ಸಾಕಷ್ಟು ಅನುದಾನ ಬಿಡುಗಡೆ ಆಗಿತ್ತು. ಹಣವೇ ಉಳಿದಿಲ್ಲ. ಎಲ್ಲವನ್ನೂ ಸರಿದೂಗಿಸಲು ಯತ್ನಿಸಿ, ಸಮತೋಲನ ಕಾಪಾಡುತ್ತೇನೆ ಎಂಬ ಭರವಸೆ ನೀಡಿದರು.
ಶಾಸಕರ ಪ್ರಸ್ತಾವನೆಯಂತೆ ಹಣ ಬಿಡುಗಡೆ ಮಾಡಲು ರು.464 ಕೋಟಿ ಅಗತ್ಯವಿದೆ. ಅಷ್ಟು ಹಣ ಇಲ್ಲ. ಮುಂದಿನ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಕೋರಲಾಗುತ್ತದೆ ಎಂದರು. ಮುಖ್ಯಮಂತ್ರಿ ಇಲ್ಲೇ ಇದ್ದಾರೆ ಹಣ ಕೇಳಿ ಎಂದು ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಳಿತಲ್ಲೇ `ಇಲ್ಲ' ಎಂದು ಕೈತೋರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


