ಕಂಗೆಟ್ಟ ಕೆಪಿಸಿಸಿಯಲ್ಲಿ ಈಗ ನಿರಾಸೆ, ಮೌನ
ಬಿಬಿಎಂಪಿ ಚುನಾವಣೆ ಸೋಲು ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನೀರವ ಮೌನ ಸೃಷ್ಟಿಸಿದ್ದು ಸೋಲಿನ ಬಗ್ಗೆ ಪರಾಮರ್ಶೆ ನಡೆಸುವುದಕ್ಕೂ...

ಬೆಂಗಳೂರು: ಬಿಬಿಎಂಪಿ ಚುನಾವಣೆ ಸೋಲು ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನೀರವ ಮೌನ ಸೃಷ್ಟಿಸಿದ್ದು ಸೋಲಿನ ಬಗ್ಗೆ ಪರಾಮರ್ಶೆ ನಡೆಸುವುದಕ್ಕೂ ನಾಯಕರು ಇತ್ತ ಸುಳಿದಿಲ್ಲ.
ಯುದ್ಧದಲ್ಲಿ ಸೋತು ನಿಸ್ತೇಜಗೊಂಡ ಸೇನಾನಿಯ ರೀತಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಪಕ್ಷದ ಕಚೇರಿಯಲ್ಲಿ ಕೂತು ನಿರ್ಗಮಿಸಿದ್ದನ್ನು ಬಿಟ್ಟರೆ ಕಾಂಗ್ರೆಸ್ ಕಚೇರಿಯತ್ತ ಬೇರೆ ಆತ್ಮಗಳು ಸುಳಿದಿಲ್ಲ. ಅವಲೋಕನ ನಡೆದಿಲ್ಲ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾ ಹಾಗೂ ಅಧಿಕೃತ ನಿವಾಸ ಕಾವೇರಿಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಸೋಲಿನ ಬಗ್ಗೆ ಪಕ್ಷದ ವಲಯದಲ್ಲಿ ತೀವ್ರ ಅಸಮಾಧಾನ ಸೃಷ್ಟಿಯಾಗುತ್ತಿದ್ದರೂ ಮುಖ್ಯಮಂತ್ರಿಗಳ ಆಪ್ತರೊಬ್ಬರು ಈ ಬಾರಿ ಮತ್ತು ಕಳೆದ ಬಾರಿ ಕಾಂಗ್ರೆಸ್‍ಗೆ ಬಿದ್ದ ಮತಗಳು, ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಇರುವ ಮತ ಗಳಿಕೆಯ ಅಂತರದ ಬಗ್ಗೆ ವ್ಯಾಖ್ಯಾನಕ್ಕೆ ತೊಡಗಿರುವುದರ ಬಗ್ಗೆಯೂ ಅಲ್ಲಲ್ಲಿ ಆಕ್ಷೇಪಗಳು ಮೊಳಗುತ್ತಿವೆ.
ಪಕ್ಷದ ಸೋಲಿನ ಬಗ್ಗೆ ಬಹಿರಂಗ ಸಮರ್ಥನೆ ಮಾಡುವುದಕ್ಕೆ ಸಿಎಂ ಆಪ್ತ ವಲಯದ ರಾಜಕೀಯ ವಿದ್ವಾಂಸರ ಬಳಿ ಮಾತುಗಳೇ ಇಲ್ಲದಿರುವಾಗ ಅಸಂಬದ್ಧ ವ್ಯಾಖ್ಯಾನ ಈ
ಹಂತದಲ್ಲಿ ಬೇಕಿತ್ತೇ ಎಂಬ ಮಾತುಗಳು ಕೇಳಿಬರುತ್ತಿವೆ.
ಗೆಲವು ತಾರದ ದಕ್ಷಿಣ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಂಡುಬಂದ ಹೀನಾಯ ಸಾಧನೆಯಿಂದ ಪಕ್ಷದ ಒಟ್ಟಾರೆ ಸ್ಥಾನ ಗಳಿಕೆ ಕಡಿಮೆಯಾಗಿದೆ.ಬಸವನಗುಡಿಯ 6, ಪದ್ಮ ನಾಭ ನಗರದ 7, ಜಯನಗರದ 6, ಬೊಮ್ಮನ ಹಳ್ಳಿಯ 7, ಬೆಂಗಳೂರು ದಕ್ಷಿಣದ 5 ಹಾಗೂ ಆನೇಕಲ್ ನಲ್ಲಿ 1 ಸ್ಥಾನಗಳು ಬಿಜೆಪಿ ಪಾಲಾಗಿದೆ. ಇಲ್ಲಿನ 37 ವಾರ್ಡ್ ಗಳ ಪೈಕಿ ಕಾಂಗ್ರೆಸ್ 5 ವಾರ್ಡ್‍ಗಳಲ್ಲಷ್ಟೇ ಗೆದ್ದಿದೆ. ಬಿಜೆಪಿಗೆ ದಕ್ಕಿದ್ದು 31 ವಾರ್ಡ್‍ಗಳು ಎಂಬ ಅಂಶ ಕಾಂಗ್ರೆಸ್ಸನ್ನು ಕಂಗೆಡಿಸಿದೆ.
ಓಬಿಸಿಗೆ ಸೋಲು
ಬಿಬಿಎಂಪಿ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್‍ನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಹಿಂದುಳಿದ
ವರ್ಗದವರಿಗೆ ಟಿಕೆಟ್ ನೀಡಲಾಗಿತ್ತು. ಕಾಂಗ್ರೆಸ್‍ನಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ 68 ಮಂದಿಗೆ ಟಿಕೆಟ್ ನೀಡಿದ್ದರೆ ಆ ಪೈಕಿ ಕುರುಬ ಜನಾಂಗಕ್ಕೆ ಸೇರಿದವರಿಗೆ ಹೆಚ್ಚಿನ ಸ್ಥಾನ
ನೀಡಲಾಗಿತ್ತು. ಒಟ್ಟು 23 ಮಂದಿ ಕುರುಬ ಮುಖಂಡರಿಗೆ ಟಿಕೆಟ್ ನೀಡಿದ್ದು ಅವರಲ್ಲಿ ಕೇವಲ ಮೂವರು ಮಾತ್ರ ಗೆಲುವು ಸಾಧಿಸಿದ್ದಾರೆ.
ಆದರೆ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಕಾಂಗ್ರೆಸ್‍ಗಿಂತ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಕಾಂಗ್ರೆಸ್‍ನಲ್ಲಿ 29 ಮುಸ್ಲಿಂರಿಗೆ ಟಿಕೆಟ್ ನೀಡಲಾಗಿದ್ದು ಆ ಪೈಕಿ 10 ಜನ ಗೆಲುವು ಸಾಧಿಸಿದ್ದಾರೆ. 49 ಒಕ್ಕಲಿಗ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು ಅವರಲ್ಲಿ 20 ಮಂದಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಜಾತಿ ಲೆಕ್ಕಾಚಾರವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


