ವಿರೋಧದ ನಡುವೆಯೂ ಬಿಜೆಪಿಗೆ ಅರ್ಹ ಗೆಲವು
ಬೆಂಗಳೂರು ಬಿಜೆಪಿ ಪಾಲಿಗೆ `ಅಶೋಕನೇ ಸಾಮ್ರಾಟ...' ಹೀಗೆಂದು ಬಿಜೆಪಿ ಪಡಸಾಲೆಯಲ್ಲಿ ಚರ್ಚೆ ಆರಂಭವಾಗಿದೆ...

ಬೆಂಗಳೂರು: ಬೆಂಗಳೂರು ಬಿಜೆಪಿ ಪಾಲಿಗೆ `ಅಶೋಕನೇ ಸಾಮ್ರಾಟ...' ಹೀಗೆಂದು ಬಿಜೆಪಿ ಪಡಸಾಲೆಯಲ್ಲಿ ಚರ್ಚೆ ಆರಂಭವಾಗಿದೆ. ಕಳೆದ ಬಿಬಿಎಂಪಿ ಚುನಾವಣೆ ವೇಳೆಗೆ ಬಿಜೆಪಿ ರಾಜ್ಯದಲ್ಲಿ ಅಧಿಕಾರವಿತ್ತು, ಬಿಜೆಪಿ ಅಲೆಯೂ ಇತ್ತು. ಆದರೆ, ಈಗ ಬಿಜೆಪಿ ಸರ್ಕಾರವೂ ಇಲ್ಲ, ಪಕ್ಷದ ನಾಯಕರೊಳಗೆ ಎಲ್ಲವೂ ಸರಿ ಇಲ್ಲ ಎಂಬ ಸ್ಥಿತಿ. ಇಂತಹ ಸಂದರ್ಭದಲ್ಲಿ ಬಿಬಿಎಂಪಿ ಚುನಾವಣೆಯನ್ನು ಗೆಲ್ಲುವು ದು ಅಷ್ಟು ಸುಲಭವಲ್ಲ. ಇಂತಹ ಸಂದರ್ಭದಲ್ಲಿ ಚುನಾವಣೆ ಸಹವಾಸ ಸಾಕೆಂಬಂತಿದ್ದ ಬಿಜೆಪಿ ಶಾಸಕರ ಪೈಕಿ ಚುನಾವಣೆಗೆ ನೊಗ ಕಟ್ಟಿದ್ದು ಆರ್. ಅಶೋಕ್ ಅವರಿಗೆ. ಅವರು ತಾವು ಹೊತ್ತ ನೊಗವನ್ನು ಯಶಸ್ವಿಯಾಗಿ ಮುನ್ನೆಡೆಸಿರುವುದು ಫಲಿತಾಂಶದ ಮೂಲಕ ಸಾಬೀತಾಗಿದೆ.
ಉಪಮುಖ್ಯಮಂತ್ರಿಯಾಗಿ ಮತ್ತು ಬೆಂಗಳೂರಿನಲ್ಲಿ ಮುಳುಗೆದ್ದಿರುವ ಆರ್. ಅಶೋಕ್ ಅವರಿಗೆ ಪಕ್ಷದ ಚುನಾವಣೆ ಉಸ್ತುವಾರಿ ವಹಿಸಿದರೆ ಪಕ್ಷದ ಕತೆ ಅಷ್ಟೇ ಎಂದು ಮಾತನಾಡಿಕೊಂಡಿದ್ದರು. ಆದರೆ, ಅಂತಹವರೆಲ್ಲಾ ಈಗ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಫಲಿತಾಂಶ ಬಂದಿದೆ. ಇದರಲ್ಲಿ ಪಕ್ಷದ ಸಂಘಟನೆಯ ಪಾತ್ರ, ಕಾಂಗ್ರೆಸ್ ನ ಒಡಕು ಒಂದಷ್ಟು ಪ್ರಮುಖ ಅಂಶವಾದರೂ, ಅಶೋಕ್ ಅವರ ಕಾರ್ಯತಂತ್ರ ಕೂಡ ಕೆಲಸ ಮಾಡಿಲ್ಲ ಎಂದು ಯಾರೂ ಹೇಳಲು ಸಿದ್ಧರಿಲ್ಲ.
ರಾಷ್ಟ್ರೀಯ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆಯೇ ಒಂದು ಸರ್ಕಸ್ಸು. ಅವುಗಳನ್ನ ಸಮರ್ಥವಾಗಿ ಮೆಟ್ಟಿನಿಂತ ಅಶೋಕ್‍ಗೆ ನಂತರ ವೀರಶೈವ ವಿರೋಧಿ ಎಂಬ ಕಳಂಕ ಅಂಟಿಕೊಂಡಿತಲ್ಲದೇ ಒಂದಷ್ಟು ಜರ್ಝಿತರಾಗಿದ್ದೂ ಸುಳ್ಳಲ್ಲ. ಈ ಬೆಳವಣಿಗೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾದೀತೆಂಬ ಅಭಿಪ್ರಾಯವೂ ಕೇಳಿಬಂದಿತ್ತು. ಈ ವೇಳೆ ಮಧ್ಯಪ್ರವೇಶ ಮಾಡಿದ ಮಾಜಿ ಸಿಎಂ ಯಡಿಯೂರಪ್ಪನವರು ಪರಿಸ್ಥಿತಿ ತಿಳಿಗೊಳಿಸಿದ್ದಲ್ಲದೇ, ಕಾಲಿಗೆ ಚಕ್ರಕಟ್ಟಿಕೊಂಡಂತೆ ಗಲ್ಲಿಗಲ್ಲಿ ಸುತ್ತಾಡಿ ಪ್ರಚಾರ ನಡೆಸುವ ಮೂಲಕ ಪಕ್ಷಕ್ಕಾಗುವ ಹಾನಿ ತಪ್ಪಿಸಿದರು ಎಂದು ಪಕ್ಷದ ಹಿರಿಯ ಕಾರ್ಯಕರ್ತರ ಅಭಿಪ್ರಾಯ.
ಒಟ್ಟಾರೆ ಪ್ರತಿಕೂಲ ಪರಿಸ್ಥಿತಿಯಲ್ಲೂ ಸಹ ಚುನಾವಣೆಯ ನೊಗ ಹೊತ್ತ ಅಶೋಕ್ ಪಕ್ಷವನ್ನು ಅಧಿಕಾರಕ್ಕೆ ಕೂರಿಸುವಲ್ಲಿ ಯಶಸ್ವಿಯಾದರು. ಇವರ ಬೆನ್ನಿಗೆ ಬೆಂಗಳೂರಿನ ಶಾಸಕರು ನಿಂತಿದ್ದು, ಸಂಸದರು, ಕೇಂದ್ರ ಸಚಿವರು ಅಶೋಕ್ ಅವರ ಮೇಲೆ ವಿಶ್ವಾಸವಿಟ್ಟಿದ್ದು ಆ ಪಕ್ಷಕ್ಕೆ ಉಪಯೋಗಕ್ಕೆ ಬಂದಿದೆ. ಬಿಜೆಪಿ ಯಶಸ್ಸುತಂದುಕೊಟ್ಟವರ ಪೈಕಿ ಆರ್.ಅಶೋಕ್ ಅವರ ಹೆಸರು ಎಷ್ಟು ಪ್ರಮುಖವೋ ಪಕ್ಷದ ಮಹಾನಗರ ಘಟಕದ ಅಧ್ಯಕ್ಷ ಸುಬ್ಬನರಸಿಂಹ ಅವರ ಪಾತ್ರವೂ ಅಷ್ಟೇ ಎನ್ನುತ್ತಾರೆ ಪಕ್ಷದ ಮುಖಂಡರು. ಟಿಕೆಟ್ ಹಂಚಿಕೆ, ಬಂಡಾಯ, ಕಾರ್ಯತಂತ್ರ ಎಲ್ಲದರಲ್ಲೂ ಸುಬ್ಬನರಸಿಂಹ ಅವರ ಹಾಕಿದ ಶ್ರಮ, ಕಾಳಜಿ ಕೆಲಸ ಮಾಡಿದೆ ಎಂಬುದು ಮುಖಂಡರ ಅನಿಸಿಕೆ
ಹೊಸ ಪಾಲಿಕೆ ಮುಂದಿರುವ 10 ಪ್ರಮುಖ ಸವಾಲುಗಳು
ಒಣ-ಹಸಿ ತ್ಯಾಜ್ಯ ನಿರ್ವಹಣೆ, ಸಂಸ್ಕರಣೆ ಆರ್ಥಿಕ ಸಂಪನ್ಮೂಲ ಸಂಗ್ರಹಣೆ, ಗುಂಡಿಸಮುಕ್ತ ರಸ್ತೆ, ಸುಗಮ ಸಂಚಾರಕ್ಕೆ ದಟ್ಟಣೆ ರಹಿತ ರಸ್ತೆಗಳು, ಮಳೆ ನೀರು ನಿರ್ವಹಣೆ, ಪರಿಸರ ಸಂರಕ್ಷಣೆ, ಅಭಿವೃದ್ಧಿ, ರಸ್ತೆ, ಚರಂಡಿಗಳ ಶುಚಿತ್ವ, ಶಾಲೆ, ಆಸ್ಪತ್ರೆಗಳ ಉನ್ನತೀಕರಣ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು ಎಲ್ಲೆಡೆ ಮೂಲಸೌಕರ್ಯ ಸೂಕ್ತ ,ನಿರ್ವಹಣೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


