ರಾಜಕೀಯ

ಸಾಲ ಮನ್ನಾ ಮಾಡಲಾಗದಿದ್ದರೆ ಮನೆಗೆ ಹೋಗಿ: ಎಚ್.ಡಿ ಕುಮಾರಸ್ವಾಮಿ

ರಾಜ್ಯ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡುವ ಯೋಗ್ಯತೆ ಇಲ್ಲದಿದ್ದರೆ ರಾಜಿನಾಮೆ ಕೊಟ್ಟು ತೊಲಗಲಿ...

ಸಾಲ ಮನ್ನಾ ಮಾಡಲಾಗದಿದ್ದರೆ ಮನೆಗೆ ಹೋಗಿ: ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರ ಸ್ವಾಮಿ
Published On :

ಹುಬ್ಬಳ್ಳಿ: ರಾಜ್ಯ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡುವ ಯೋಗ್ಯತೆ ಇಲ್ಲದಿದ್ದರೆ ರಾಜಿನಾಮೆ ಕೊಟ್ಟು ತೊಲಗಲಿ. ಅಧಿಕಾರದಿಂದ ಕೆಳಗಿಳಿಯುವ ಪೂರ್ವದಲ್ಲಿ ಸಾಲ ಮನ್ನಾ ಘೋಷಣೆ ಮಾಡಿ ಹೋಗಲಿ, ಮುಂಬರುವ ಸರ್ಕಾರ ಸಾಲ ತೀರಿಸುತ್ತದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸರ್ಕಾರ ಲಘುವಾಗಿ ಪರಿಗಣಿಸಿದೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಕುಟುಂಬಕ್ಕೆ ಸರ್ಕಾರ ಅನಾಥ ಭಾಗ್ಯ ಕರುಣಿಸುತ್ತಿದೆ. ಸಾಲ ಮನ್ನಾ ಮಾಡುವುದಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಂಕಾರದ ಮಾತುಗಳನ್ನಾಡುತ್ತಿದ್ದಾರೆ. ರೈತರ ನೆರವಿಗೆ ಬಾರದವರು ಅಧಿಕಾರದಿಂದ ಕೆಳಗಿಳಿಯಲಿ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಎರಡು ವರ್ಷದ ಅವಧಿಯಲ್ಲಿ ರೂ. 45 ಸಾವಿರ ಕೋಟಿ ಸಾಲ ಮಾಡಿದೆ. ಇನ್ನೂರೂ. 5ಸಾವಿರ ಕೋಟಿ ಸಾಲ ಮಾಡಿ ರೈತರ ಸಾಲ ಮನ್ನಾ ಮಾಡಲಿ. ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಸರ್ಕಾರ ನಿಮ್ಮೊಂದಿಗಿದೆ ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಏನು ಬಂತು? ರಾಜ್ಯ ಸರ್ಕಾರಕ್ಕೆ ರೈತರ ಆತ್ಮಹತ್ಯೆಗಿಂತ ಬಿಬಿಎಂಪಿ ಚುನಾವಣೆಯೇ ಮುಖ್ಯವಾಗಿದೆ. ರೈತರ ಹಿತ ಕಾಯಲು ಚುನಾವಣೆ ಮುಂದೂಡಿದರೆ ನಾಡಿಗೇನೂ ಹಾನಿಯಾಗುವುದಿಲ್ಲ ಎಂದರು. ಸಂಸದರು ರಾಜಿನಾಮೆ ನೀಡಲಿ: 26 ದಿನಗಳಿಂದ ನರಗುಂದ, ನವಲಗುಂದ ಭಾಗದ ರೈತರು ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ರಾಜ್ಯದ 18 ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿ. ನ್ಯಾಯಾಧೀಕರಣದಿಂದ ಮಧ್ಯಂತರ ಆದೇಶ ಹೊರಡಿಸಿ 7.5 ಟಿಎಂಸಿ ಬಿಡುಗಡೆಗೆ ಒತ್ತಾಯಿಸಲಿ. ರಾಜ್ಯದ ನ್ಯಾಯಯುತ ಹಕ್ಕಿಗಾಗಿ ಬಿಜೆಪಿ ಸಂಸದರು ರಾಜಿನಾಮೆ ನೀಡುವ ಎದೆಗಾರಿಕೆ ತೋರಲಿ ಎಂದು ಒತ್ತಾಯಿಸಿದ ಅವರು, ಈ ಹಂತದಲ್ಲಿ ಪ್ರಧಾನಿ ಭೇಟಿಗೆ ಸರ್ವಪಕ್ಷ ನಿಯೋಗ ಹೋಗುವುದು ಜಾಲಿಟ್ರಿಪ್ ಆಗಲಿದೆ. ಅದಕ್ಕಿಂತ ಕಾನೂನು ಹೋರಾಟ ದ ದಾರಿ ಉತ್ತಮ ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ದುರ್ಬಳಕೆ ಆರೋಪ ಮಾಡಿದ್ದೆವು. ಆದರೆ ಸಿದ್ದರಾಮಯ್ಯನವರಷ್ಟು ಕೀಳು ರಾಜಕಾರಣಕ್ಕೆ ಯಡಿಯೂರಪ್ಪ ಇಳಿದಿರಲಿಲ್ಲ. ಮಾಜಿ ಮುಖ್ಯಮಂತ್ರಿಯಾಗಿರುವ ನನ್ನನ್ನೇ ಬಂಧಿಸಲು ಪಿತೂರಿ ಮಾಡುವ ಸರ್ಕಾರ, ಜನಸಾಮಾನ್ಯರ ಮೇಲೆ ಇನ್ನೆಂಥ ದೌರ್ಜನ್ಯಕ್ಕೆ ಇಳಿದಿರಬಹುದು! ತಮ್ಮ ಮಗನ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸ್ ಅಧಿಕಾರಿಗೆ ಸಿದ್ದರಾಮಯ್ಯ ಎರಡು ವರ್ಷಗಳಿಂದ ಹುದ್ದೆ ತೋರಿಸಿಲ್ಲ. ಇದು ದುರಾಡಳಿತವಲ್ಲವೇ ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಅವರು ಕುಂದಗೋಳ ತಾಲೂಕಿನ ಬೆಟದೂರು ಗ್ರಾಮಕ್ಕೆ ಭೇಟಿ ನೀಡಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರಾಮಪ್ಪ ಕಡಪಟ್ಟಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಆರ್ಥಿಕ ಸಹಾಯ ಮಾಡಿದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.