ರಾಜಕೀಯ

ಹರಿದುಬಂತು ನಾಮಪತ್ರಗಳ ಮಹಾಪೂರ

ಬಿಬಿಎಂಪಿಯ 198 ವಾರ್ಡ್‍ಗಳ ಚುನಾವಣೆಗೆ ಉಮೇದುವಾರಿಕೆ ಸಲ್ಲಿಕೆಗೆ ಕೊನೆಯ ದಿನವಾದ ಸೋಮವಾರ ನಾಮಪತ್ರಗಳ ಮಹಾಪೂರವೇ ಹರಿದುಬಂದಿದೆ...

ಹರಿದುಬಂತು ನಾಮಪತ್ರಗಳ ಮಹಾಪೂರ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಬಿಬಿಎಂಪಿಯ 198 ವಾರ್ಡ್‍ಗಳ ಚುನಾವಣೆಗೆ ಉಮೇದುವಾರಿಕೆ ಸಲ್ಲಿಕೆಗೆ ಕೊನೆಯ ದಿನವಾದ ಸೋಮವಾರ ನಾಮಪತ್ರಗಳ ಮಹಾಪೂರವೇ ಹರಿದುಬಂದಿದೆ. ಲಭ್ಯ ಮಾಹಿತಿ ಪ್ರಕಾರ 938 ಅಭ್ಯರ್ಥಿಗಳಿಂದ 1,166 ನಾಮಪತ್ರಗಳು ಸಲ್ಲಿಕೆಯಾಗಿವೆ. ಸೋಮವಾರ ರಾತ್ರಿಯವರೆಗೆ  ಈ ಪ್ರಕ್ರಿಯಗಳು ಮುಂದುವರಿದಿದ್ದವು. 168 ವಾರ್ಡ್ ಗಳಲ್ಲಿ 938 ಅಭ್ಯರ್ಥಿಗಳು ಧುಮುಕಿದ್ದಾರೆ. ಇತರೆ ವಾರ್ಡ್‍ಗಳ ವಿವರಗಳು ಲಭ್ಯವಾಗಬೇಕಿದೆ.

ನಾಮಪತ್ರ ಸ್ವೀಕಾರ ಕೇಂದ್ರಗಳ ಒಳಗೆ ನೂಕುನುಗ್ಗಲು, ಹೊರಗೆ ಬೆಂಬಲಿಗರಿಂದ ಹರ್ಷೋದ್ಗಾರ. ದೇವಾಲಯಗಳಲ್ಲಿ ಪೂಜೆ, ಪ್ರಾರ್ಥನೆ, ಮೆರವಣಿಗೆ, ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸುವ ಗಡಿಬಿಡಿ, ಪಕ್ಷದ ಕಾರ್ಯಕರ್ತರಿಗೆ ತಮ್ಮ ನಾಯಕ ಸ್ಪರ್ಧಿ ಸುತ್ತಿದ್ದಾರೆ ಎಂಬ ಸಂತಸ...ನಾಮಪತ್ರ ಸ್ವೀಕಾರ ಕೇಂದ್ರಗಳಲ್ಲಿ ಈ ರೀತಿಯ ಸಡಗರದ ಹಾಗೂ ಗಡಿಬಿಡಿಯ ಸನ್ನಿವೇಶ ಸೃಷ್ಟಿಯಾಗಿತ್ತು. ನಾಮಪತ್ರ ಸಲ್ಲಿಸುವ ಮೊದಲ ದಿನದಿಂದ ಆರಂಭವಾಗಿ ಇಲ್ಲಿಯವರೆಗೆ ಸ್ವೀಕಾರ ಕೇಂದ್ರಗಳಲ್ಲಿ ಈ ಬಗೆಯ ಜನಸಂದಣಿ ಉಂಟಾಗಿರಲಿಲ್ಲ. ಅಭ್ಯರ್ಥಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ಹಾಗೂ ಬೆರಳೆಣಿಕೆಯ ಬೆಂಬಲಿಗರೊಂದಿಗೆ ಸ್ವೀಕಾರ ಕೇಂದ್ರಕ್ಕೆ ಭೇಟಿ ನೀಡಿ ನಾಮಪತ್ರ ಸಲ್ಲಿಸಿದ್ದರು.

ಆದರೆ ಕೊನೆಯ ದಿನ ಮಾತ್ರ ಸನ್ನಿವೇಶ ಬದಲಾಗಿತ್ತು. ಅದುವರೆಗೆ ಯಾವುದೇ ಸಡಗರ, ಶಬ್ದಮಾಲಿನ್ಯವಿಲ್ಲದೆ ಮೌನವಾಗಿದ್ದ ಸ್ವೀಕಾರ ಕೇಂದ್ರದಲ್ಲಿ ಸಂಭ್ರಮ ಮನೆಮಾಡಿತ್ತು. ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳು ಗಡಿಬಿಡಿಯಲ್ಲಿ ನಾಮ ಪತ್ರ ಸಲ್ಲಿಸಿ ನಿರಾಳವಾಗಿ ಹೊರಬರುತ್ತಿದ್ದಂತೆ ಬೆಂಬಲಿಗರು ಹರ್ಷೋದ್ಗಾರ ಮಾಡಿ ಶುಭಾಶಯ ಕೋರಿ ಜೈಕಾರ ಹಾಕಿದರು.

ಬೆಂಬಲಿಗರ ದಂಡು: ಕೆಲವು ವಾರ್ಡ್‍ಗಳಲ್ಲಿ ಅಭ್ಯರ್ಥಿಗಳು ಜನ ಸಂದಣಿ ಕರೆದುಕೊಂಡೇ ವಾರ್ಡ್ ಕಚೇರಿಗಳಿಗೆ ಲಗ್ಗೆಯಿಟ್ಟರು. ಸ್ವೀಕಾರ ಕೇಂದ್ರಗಳಿಗೆ ಕೆಲವರಿಗೆ ಮಾತ್ರ ಪ್ರವೇಶವಾಗಿದ್ದರಿಂದ ಅಭ್ಯರ್ಥಿಗಳು ಒಳಪ್ರವೇಶಿಸುತ್ತಿದ್ದಂತೆ ಹೊರಗೆ ಬೆಂಬಲಿಗರ ಗುಂಪು ಗುಂಪುಗಳೇ ಸೇರಿದ್ದವು. ಇದರಿಂದಾಗಿ ಹಲವು ಕಡೆ ಸಾರ್ವಜನಿಕರ ಸಂಚಾರಕ್ಕೂ ತೊಂದರೆ ಉಂಟಾಯಿತು. ಇನ್ನು ಕೆಲವು ಅಭ್ಯರ್ಥಿಗಳ ಬೆಂಬಲಿಗರು ಚುನಾವಣೆ ಗೆದ್ದಷ್ಟೇ ಸಂಭ್ರಮದಲ್ಲಿ ವಿಜಯೋತ್ಸವ ಆಚರಿಸಿದರು. ನಾಮಪತ್ರ ಸ್ವೀಕಾರ ಕೇಂದ್ರಕ್ಕೆ ಬರುವ ದಾರಿಯಲ್ಲಿ ಪಟಾಕಿ ಸಿಡಿಸಿ, ಹೂವು ಎಸೆದು, ಅಲಂಕಾರಿಕ ಸಾಧನಗಳನ್ನು ಬಳಸಿ ಸಂಭ್ರಮಾಚರಿಸಿದರು. ವಿವಿಧ ಪಕ್ಷಗಳ ಬಾವುಟ, ಬ್ಯಾನರ್, ಬಂಟಿಂಗ್ಸ್ ಸೇರಿ ಪ್ರಚಾರ ಸಾಮಗ್ರಿಗಳು ವಿಜೃಂಭಿಸಿದವು. ಕೆಲವೆಡೆ ನಾಮಪತ್ರ ಸಲ್ಲಿಸಲು ಮೆರವಣಿಗೆ, ಜಾತ್ರೆಯ ಸನ್ನಿವೇಶ ಸೃಷ್ಟಿಯಾಯಿತು.

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತನ್ನ ಪಟ್ಟಿಯನ್ನು ಕೊನೆಯ ಕ್ಷಣದಲ್ಲಿ ಬಿಡುಗಡೆ ಮಾಡಿದ್ದರಿಂದ ಸ್ವೀಕಾರ ಕೇಂದ್ರಗಳಲ್ಲಿ ಜನಸಂದಣಿ ಹೆಚ್ಚಿತ್ತು. ಹಲವು ಮಾಜಿ ಸದಸ್ಯರಿಗೆ ಬೆಂಬಲಿಗರು ಹೆಚ್ಚಿದ್ದರಿಂದ ಪಕ್ಷದ ಗುರುತು ಹಾಗೂ ಸಂಭ್ರಮಾಚರಣೆಯೇ ಅಧಿಕವಾಗಿ ಕಂಡುಬಂತು. ಇದರ ನಡುವೆ ಪಕ್ಷೇತರ ಅಭ್ಯರ್ಥಿಗಳಾಗಿ ಬಂದವರು ಮೌನವಾಗಿ ನಾಮಪತ್ರ ಸಲ್ಲಿಸಿ ತೆರಳಿದರು.

ರಾತ್ರಿವರೆಗೂ ನಾಮಪತ್ರ
ನಾಮಪತ್ರ ಸಲ್ಲಿಸಲು ಎಲ್ಲರೂ ಒಮ್ಮೆಲೇ ಆಗಮಿಸಿದ್ದರಿಂದ ಅಧಿಕಾರಿಗಳು ಬಿಡುವೇ ಇಲ್ಲದಂತಾಯಿತು. ನಾಮಪತ್ರ ಸಲ್ಲಿಸುವ ಅವಧಿಗೆ ಸೀಮಿತಗೊಂಡಿದ್ದರಿಂದೃ ವೇಗವಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳು ಪ್ರಯತ್ನಿಸಿದರು. ಅಭ್ಯರ್ಥಿಗಳು ಎರಡು ಅಥವಾ ಅದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಸುತ್ತಿದ್ದರಿಂದ ಪ್ರಕ್ರಿಯೆ ಪೂರ್ಣಗೊಳಿಸುವುದು ದೀರ್ಘವಾಗಿತ್ತು.ರಾತ್ರಿವರೆಗೂ ನಾಮಪತ್ರ ಸಲ್ಲಿಕೆ ಪೂರ್ಣಗೊಳಿಸುವುದು ನಡೆಯಿತು.
ಪ್ರತಿಜ್ಞಾ ವಿಧಿ ಸ್ವೀಕಾರ ವಿಜಯನಗರ, ಗೋವಿಂದರಾಜನಗರ, ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಹೊರಬಂದ ನಂತರ ಪ್ರತಿಜ್ಞಾ ವಿಧಿಸ್ವೀಕರಿಸಿದರು. `ಸಾರ್ವಜನಿಕರ ಹಣ ದುರುಪಯೋಗವಾಗದಂತೆ ಕೆಲಸ ಮಾಡುತ್ತೇವೆ. ಜನರ ಸಮಸ್ಯೆಗಳಿಗೆ ಆದ್ಯತೆ ನೀಡಿ ಶೀಘ್ರದಲ್ಲಿ ಪರಿಹಾರ ಮಾಡುತ್ತೇವೆ' ಎಂದು ಅಭ್ಯರ್ಥಿಗಳು ಒಟ್ಟಾಗಿ ಪ್ರಮಾಣ ಸ್ವೀಕರಿಸಿದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.