ರಾಜಕೀಯ

ಅಭ್ಯರ್ಥಿಗಳ ಪಟ್ಟಿಗೆ ಬಿಜೆಪಿಯಲ್ಲಿ ಅತೃಪ್ತಿ

ಕೇವಲ ಮೂರು ದಿನಗಳಲ್ಲಿ ಹೆಚ್ಚು ಕಾವು ಪಡೆದುಕೊಂಡಿರುವ ಬಿಬಿಎಂಪಿ ಚುನಾವಣೆ ಬಿಜೆಪಿಗೆ ಬಂಡಾಯದ ಬಿಸಿಯನ್ನೂ ಮುಟ್ಟಿಸಿದೆ...

ಅಭ್ಯರ್ಥಿಗಳ ಪಟ್ಟಿಗೆ ಬಿಜೆಪಿಯಲ್ಲಿ ಅತೃಪ್ತಿ
ಬಿಜೆಪಿ ಪಕ್ಷದ ಚಿಹ್ನೆ
Published On :

ಬೆಂಗಳೂರು:ಕೇವಲ ಮೂರು ದಿನಗಳಲ್ಲಿ ಹೆಚ್ಚು ಕಾವು ಪಡೆದುಕೊಂಡಿರುವ ಬಿಬಿಎಂಪಿ ಚುನಾವಣೆ ಬಿಜೆಪಿಗೆ ಬಂಡಾಯದ ಬಿಸಿಯನ್ನೂ ಮುಟ್ಟಿಸಿದೆ. ಮೂರು ಪ್ರಮುಖ ರಾಜಕೀಯ ಪಕ್ಷಗಳ ಪೈಕಿ ನಿರೀಕ್ಷೆಯಂತೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಪ್ರಕಟ ಮಾಡಿದೆ. ಅಷ್ಟೇ ವೇಗವಾಗಿ ಅದು ಬಂಡಾಯವನ್ನೂ ಎದುರಿಸಲಾರಂಭಿಸಿದೆ. ಇನ್ನು ಜೆಡಿಎಸ್ 100 ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದ್ದು, ಗುರುವಾರ ಅಧಿಕೃತವಾಗಿ ಪ್ರಕಟ ಮಾಡಲಿದೆ.

ಈ ಮಧ್ಯೆ ಕಾಂಗ್ರೆಸ್ ಎಂದಿನಂತೆ ತಡವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆಯನ್ನೂ ನಡೆಸಿದೆ. ಇನ್ನು ಮೂರು ತಿಂಗಳ ಹಿಂದೆಯೇ ಬಿಬಿಎಂಪಿ ಚುನಾವಣೆಯಲ್ಲಿ ಭಾರೀ ಸದ್ದು ಮಾಡುತ್ತೇವೆ ಎಂದು ಹೇಳಿಕೊಂಡಿದ್ದ ಆಮ್ ಆದ್ಮಿ ಪಕ್ಷ ಈ ಬಾರಿ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯಲು ತೀರ್ಮಾನಿಸಿದೆ. ಬಿಜೆಪಿ ಪ್ರಕಟಿಸಿರುವ ಪಟ್ಟಿಯಲ್ಲಿ 9ಮಂದಿ ಮಾಜಿ ಸದಸ್ಯರನ್ನು ಹೊರತುಪಡಿಸಿದರೆ, ಉಳಿದೆಲ್ಲವೂ ಹೊಸ ಮುಖಗಳೇ ಆಗಿವೆ. ಬದಲಾದ ಮೀಸಲಾತಿಯಿಂದ ಬಹುತೇಕ ಹಾಲಿ ಸದಸ್ಯರು ಸ್ಪರ್ಧಿಸುವುದಕ್ಕೆ ಸಾಧ್ಯವಿಲ್ಲದ ಕಾರಣ ಅವರು ತಮ್ಮ ಪತ್ನಿ ಹೆಸರಿನಲ್ಲಿ ಟಿಕೆಟ್ ಗಿಟ್ಟಿಸಿದ್ದಾರೆ. ಇದೇ ರೀತಿ ಮಾಜಿ ಮೇಯರ್ ಎಸ್.ಕೆ.ನಟರಾಜ್ ಪತ್ನಿ ಹಾಗೂ ಅನೇಕ ಹಾಲಿ ಸದಸ್ಯರು ಟಿಕೆಟ್ ಪಡೆದು ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಆದರೆ ಮಾಜಿ ಮೇಯರ್‍ಗಳಿಗೆ ಟಿಕೆಟ್ ಇಲ್ಲ ಎಂದು ನಿಲುವಿನ ಹಿನ್ನೆಲೆಯಲ್ಲಿ ವೆಂಕಟೇಶ್‍ಮೂರ್ತಿ ಮತ್ತು ಕಟ್ಟೆ ಸತ್ಯನಾರಾಯಣ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ. ಇವರೊಂದಿಗೆ ಹಂಪಿನಗರದ ಚಂದ್ರಶೇಖರ್ ಮತ್ತು ಮಹಿಳಾ ಮೊರ್ಚಾ ಅಧ್ಯಕ್ಷೆ ಪುತಲಿಬಾಯಿಗೆ ಟಿಕೆಟ್ ಕೈ ತಪ್ಪಿದೆ. ಇದರಿಂದ ಸಿಟ್ಟಿಗೆದ್ದಿರುವ ಅವರು ಪಕ್ಷ ತೊರೆಯುವ ಬಗ್ಗೆಯೂ ಚಿಂತಿಸಿದ್ದು, ತಮ್ಮ ನೋವನ್ನು ಪಕ್ಷದ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
 
ಜೆಡಿಎಸ್ ಗುರುವಾರ ಸಮಾವೇಶ ನಡೆಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದು, ಇದರಲ್ಲಿಯೂ ಟಿಕೇಟ್ ಸಿಗದವರು ಸಿಟ್ಟಿಗೇಳುವ ಸಾಧ್ಯತೆ ಇದೆ. ಇನ್ನು ಕಾಂಗ್ರೆಸ್ ಟಿಕೆಟ್‍ಗಾಗಿ ಪ್ರತಿ ವಾರ್ಡ್‍ನಲ್ಲಿ ಐದು ಮಂದಿ ಆಕಾಂಕ್ಷಿಗಳಿದ್ದು, ಅವರು ಕೊನೆ ಕ್ಷಣದವರೆಗೂ ವಿವಿಧ ರೀತಿಯ ಒತ್ತಡ ಹೇಳುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧ್ಯಕ್ಷರ ಸಭೆ ನಡೆಸಿ ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ತಂತ್ರ ರೂಪಿಸಿದ್ದಾರೆ. ಒಟ್ಟಾರೆ ಭಾನುವಾರದ ಒಳಗಾಗಿ ಎಲ್ಲಾ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಬೇಕಿದ್ದು, ಅಷ್ಟರೊಳಗೆ ಬಹುತೇಕ ಎಲ್ಲಾ ಅಭ್ಯರ್ಥಿಗಳ ಪಟ್ಟಿಗಳು ಹೊರ ಬೀಳಲಿವೆ. ಹಾಗೆಯೇ ಎಲ್ಲ ಪಕ್ಷಗಳಲ್ಲೂ ಬಂಡಾಯದ ಬಿಸಿ ಬೆಂಕಿಯಾಗಿ ಉರಿಯುವುದನ್ನೂ ಅಲ್ಲಗಳೆಯಲಾಗದು. ಮಾಜಿ ಮೇಯರ್‍ಗಳಿಗೆ ಟಿಕೆಟ್ ನೀಡಬಾರದೆಂದು ಪಕ್ಷದಲ್ಲಿ ತೀರ್ಮಾನವಾಗಿಲ್ಲ. ಆದ್ದರಿಂದ ನನಗೆ ಅವಕಾಶ ಸಿಗುತ್ತದೆ ಎಂದು ಭಾವಿಸಿದ್ದೇನೆ.

ಏಕೆಂದರೆ ಈಗಾಗಲೇ ಮಾಜಿ ಮೇಯರ್ ಎಸ್.ಕೆ.ನಟರಾಜ್ ಅವರ ಪತ್ನಿಗೆ ಟಿಕೆಟ್ ನೀಡಲಾಗಿದೆ. ಆದ್ದರಿಂದ ನನಗೂ ಟಿಕೆಟ್ ನೀಡಬೇಕಾಗುತ್ತದೆ. ವೆಂಕಟೇಶ್‍ಮೂರ್ತಿ, ಮಾಜಿ ಮೇಯರ್, ನಾವು ಪಕ್ಷಕ್ಕಾಗಿ ದುಡಿದವರು. ಆದರೆ ಟಿಕೆಟ್ ನೀಡಿರುವುದು ಮಾಜಿ ಸೋಮಣ್ಣ ಅವರು ಅಭಿಮಾನಿಗಳಿಗೆ. ಇದನ್ನು ನಾನು ಪ್ರಕಟಿಸಿದ್ದೇನೆ. ಆದ್ದರಿಂದ ಪಕ್ಷದ ನಾಯಕರು ಎರಡು ದಿನ ಅವಕಾಶ ಕೇಳಿದ್ದಾರೆ. ಅವರು ತೀರ್ಮಾನ ಪ್ರಕಟಿಸಿದ
ನಂತರ ನಾನು ನನ್ನ ತೀರ್ಮಾ ನ ಪ್ರಕಟಿಸುತ್ತೇನೆ.
ಚಂದ್ರಶೇಖರಯ್ಯ, ಟಿಕೆಟ್ ವಂಚಿತ ಮಾಜಿ ಕಾರ್ಪೋರೇಟರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.