ಅಧಿವೇಶನ 'ಕಬ್ಬು'ಣದ ಕಡಲೆ

ಹುಬ್ಬಳ್ಳಿ: ಬೆಳಗಾವಿ ಅಧಿವೇಶನ ಸರ್ಕಾರದ ಪಾಲಿಗೆ ಕಬ್ಬಿಣದ ಕಡಲೆಯಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಕಬ್ಬಿನ ಬೆಲೆ ವಿಚಾರದಲ್ಲಿ ಸಿಟ್ಟಿಗೆದ್ದಿರುವ ರೈತ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿದೆ. ಈಗ ಬಿಜೆಪಿ ಸಹ 50 ಸಾವಿರ ರೈತರೊಡಗೂಡಿ ಅಧಿವೇಶನದ ಮೊದಲ ದಿನದ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಘೋಷಿಸಿದೆ.
ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ, ಸಂಸದ ಬಿ.ಎಸ್ ಯಡಿಯೂರಪ್ಪ ಈ ವಿಷಯ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಎಂದು ಸ್ವತಃ ಕಾಂಗ್ರೆಸ್ ಮುಖಂಡರಿಗೆ ಅನಿಸುತ್ತಿಲ್ಲ. ಸಿದ್ದರಾಮಯ್ಯ ನೇತೃತ್ವದ ಒಂದು ಗುಂಪು ಸರ್ಕಾರ ನಡೆಸುತ್ತಿದೆ. ಗುಂಪುಗಾರಿಕೆಗೇ ಈ ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸಲಾಗುತ್ತಿದೆ. ಅದರ ಭಾಗವಾಗಿ ಬೆಳವಾಗಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುತ್ತಿದೆ ಎಂದು ಹೇಳಿದರು.
ತಪ್ಪಿಸಲಾಗದು: ರಾಜ್ಯ ಸರ್ಕಾರ ಬಿಜೆಪಿ ಹೋರಾಟ ದಮನಿಸುತ ಪ್ರಯತ್ನ ಆರಂಭಿಸಿದೆ. ಸರ್ಕಾರ ಎಷ್ಟೇ ಅಡ್ಡಿಪಡಿಸಿದರೂ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವುದನ್ನು ತಪ್ಪಿಸಲಾಗದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದರು.
ಸೌಧದ ನಾಲ್ಕೂ ದ್ವಾರಗಳಲ್ಲಿ ಪ್ರವೇಶ ನಿರ್ಬಂಧಿಸುವ ತಯಾರಿ ನಡೆದಿದೆ. ಜತೆಗೆ ಬೆಳಗಾವಿಗೆ ಹೋಗುವ ಹೋರಾಟಗಾರರನ್ನು ಅಲ್ಲಲ್ಲಿ ತಡೆಯುವ ಯತ್ನವನ್ನೂ ಸರ್ಕಾರ ಮಾಡಲಿದೆ ಎಂಬುದು ತಿಳಿದು ಬಂದಿದೆ. ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು. ಸುವರ್ಣಸೌಧದ ಪಕ್ಷದ ಮೈದಾನದಲ್ಲಿಯಾದರೂ ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಕು. ಸುಖಾಸುಮ್ಮನೇ ಪ್ರತಿಭಟನೆಗೆ ಅಡ್ಡಿ ಪಡಿಸಿದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆಯಾಗುತ್ತೆದ ಎಂದು ಎಚ್ಚರಿಸಿದರು.
ಮುಖಂಡರ ಪ್ರವಾಸ
ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಾದ್ಯಂತ ಪಕ್ಷ ಸಿದ್ಧತೆ ನಡೆಸಿದೆ. ಮುಖಂಡರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಡಿ.6ರಂದು ಕೇಂದ್ರ ಸಚಿವ ಅನಂತಕುಮಾರ ಧಾರವಾಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಡಿ.ವಿ ಸದಾನಂದಗೌಡ ಉತ್ತರ ಕನ್ನಡ ಜಿಲ್ಲೆ, ಜಗದೀಶ್ ಶೆಟ್ಟರ್ ಬೆಳಗಾವಿ, ಕೆ.ಎಸ್ ಈಶ್ವರಪ್ಪ ಚಿಕ್ಕೋಡಿ, ಬಿಜಾಪುರದಲ್ಲಿ ಜಿ.ಎಂ ಸಿದ್ದೇಶ, ಬಾಗಲಕೋಟೆಯಲ್ಲಿ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಶ್ರೀರಾಮುಲು ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.
ಯಡಿಯೂರಪ್ಪ ಗುಡುಗು
ಸಿದ್ದರಾಮಯ್ಯನವರ ಮಾತಿಗೂ ಕೃತಿಗೂ ತಾಳೆಯೇ ಇಲ್ಲ. ಕಲಬುರಗಿ ಸಚಿವ ಸಂಪುಟಕ್ಕೂ ಮೊದಲು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲ, ಹೀಗಾಗಿ ಅಲ್ಲಿ ಸಭೆ ಏಕೆ ನಡೆಸಬೇಕೆಂದು ಅವರೇ ಪ್ರಶ್ನಿಸಿದ್ದರು. ನಂತರ ಅವರೇ ಸಭೆ ನಡೆಸಿದ್ದಾರೆ. ಇಂಥ ಸುಳ್ಳು ಹೇಳುವ ಮುಖ್ಯಮಂತ್ರಿಯಿಂದ ಏನು ನಿರೀಕ್ಷಿಸಲಾದೀತು?
ಕಸದ ಬುಟ್ಟಿ ಸೇರಿದ್ದ ನಂಜುಂಡಪ್ಪ ವರದಿಗೆ ಮುಖ್ಯಮಂತ್ರಿಯಾಗಿದ್ದಾಗ ಜೀವ ತುಂಬಿದ್ದೆ. ಬಿಜೆಪಿ ವರದಿ ಅನುಷ್ಠಾನಕ್ಕೆ ಪ್ರತಿವರ್ಷ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಗೆ ಒತ್ತು ನೀಡಿದ್ದೇವು. ಈಗಿನ ಸರ್ಕಾರ ನಂಜುಂಡಪ್ಪ ವರದಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಈ ಹಿಂದೆ ಘೋಷಣೆ ಮಾಡಿದ ಅನುದಾನವನ್ನೇ ಬಿಡುಗಡೆ ಮಾಡಲಾಗದ ಸರ್ಕಾರದಿಂದ ಹೊಸದಾಗಿ ರು. 400 ಕೋಟಿ ಬಿಡುಗಡೆ ಮಾಡಲು ಸಾಧ್ಯವೇ? ಇದು ಯಾರ ಕಣ್ಣೋರೆಸುವ ತಂತ್ರ?
ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ ರು. 10 ಸಾವಿರ ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದ ಸರ್ಕಾರ, ಇದೀಗ ಎಲ್ಲ ಯೋಜನೆ ಸೇರಿ ರು.10 ಸಾವಿರ ಬಿಡುಗಡೆ ಮಾಡ ಹೊರಟಿದೆ. ಬೆಳಗಾವಿ ಗಡ ಹೋರಾಟಕ್ಕೆ ಸಂಬಂಧಿಸಿದಂತೆ ಸರ್ಕಾರ ಕಾನೂನಾತ್ಮಕ ಹೋರಾಟ ಕೈಗೊಳ್ಳತ್ತಿಲ್ಲ.
ಸಂಧ್ಯಾ ಸುರಕ್ಷಾ, ವಿಧವಾ ವೇತನ ಸೇರಿದಂತೆ ಭಾಗ್ಯಲಕ್ಷ್ಮಿ ಯೋಜನೆ ಹಳಿ ತಪ್ಪಿವೆ. ಭಾಗ್ಯ ಲಕ್ಷ್ಮಿ ಯೋಜನೆಯ ಒಂದು ಲಕ್ಷ ಫಲಾನುಭವಿಗಳಿಗೆ ಇನ್ನೂ ಬಾಂಡ್ ವಿತರಣೆಯಾಗಿಲ್ಲ. ಈರುಳ್ಳಿ, ಮೆಕ್ಕೆಜೋಳ, ಕಬ್ಬು ಬೆಳಗಾರರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ.
ರಾಜ್ಯ ಸರ್ಕಾರದ ಮರಳು ನೀತಿಯೇ ತಿಳಿಯದಾಗಿದೆ. ಮರಳಿನ ಬೆಲೆ ಗಗನಕ್ಕೇರಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ. ಮರಳು ಮಾಫಿಯಾದಲ್ಲಿ ಸಚಿವ ಶಾಸಕರು ನೇರವಾಗಿ ಭಾಗಿಯಾಗಿದ್ದಾರೆ. ಸರ್ಕಾರ ಅವರ ರಕ್ಷಣೆಗೆ ನಿಂತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


