ರಾಜ್ಯದ ಸಿದ್ದು ಸರ್ಕಾರದ್ದು ತುಘಲಕ್ ದರ್ಬಾರು
ಸಿದ್ಧರಾಮಯ್ಯ ಸರ್ಕಾರ ತುಘಲಕ್ ದರ್ಬಾರ್ ನಡೆಸುತ್ತಿದ್ದು, ಇದರ ವಿರುದ್ಧ ಮುಂದಿನ ಐದಾರು ತಿಂಗಳಲ್ಲಿ ಉಗ್ರ ಹೋರಾಟ ...

ಬೆಳಗಾವಿ: ಸಿದ್ಧರಾಮಯ್ಯ ಸರ್ಕಾರ ತುಘಲಕ್ ದರ್ಬಾರ್ ನಡೆಸುತ್ತಿದ್ದು, ಇದರ ವಿರುದ್ಧ ಮುಂದಿನ ಐದಾರು ತಿಂಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ, ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ಸುವರ್ಣ ವಿಧಾನಸೌಧ ಸಮೀಪದ ಕೊಂಡಸಕೊಪ್ಪ ಗ್ರಾಮದಲ್ಲಿ ಮಂಗಳವಾರ ಬಿಜೆಪಿ ಏರ್ಪಡಿಸಿದ್ದ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಗೂ ಭ್ರಷ್ಟ ಸಚಿವರನ್ನು ತೊಲಗಿಸಿ ಸಮಾವೇಶದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿಲ್ಲ, ಬದಲಾಗಿ ಸಿಎಂ ಸಿದ್ಧರಾಮಯ್ಯ ಗುಂಪಿನ ತುಘಲಕ್ ಸರ್ಕಾರ ಅಧಿಕಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವ ಮೂಲಕ ಸರ್ಕಾರವನ್ನು ಕಿತ್ತು ಹಾಕಲಿದೆ ಎಂದು ಗುಡುಗಿದರು.
ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ ರು.400 ಕೋಟಿ ವೆಚ್ಚ ಮಾಜಿ ಸುವರ್ಣ ವಿಧಾನಸೌಧ ನಿರ್ಮಿಸಲಾಗಿದೆ. ಆದರೆ ಕಾಂಗ್ರೆಸ್ ಸುವರ್ಣ ಸೌಧವನ್ನು ನಿರ್ಲಕ್ಷಿಸುತ್ತಿದೆ. ರಾಜ್ಯ ಸರ್ಕಾರ ಪ್ರತಿ ವರ್ಷ ಮಂಡಿಸುವ ಬಜೆಟ್‌ನಲ್ಲಿ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ರು.5,000 ಕೋಟಿ ತೆಗೆದಿಡಬೇಕು. ಸರ್ಕಾರ ಘೋಷಿಸಿದಂತೆ ಪ್ರತಿ ಟನ್ ಕಬ್ಬಿನ ರು. 2,650ಗಳನ್ನು ಸರ್ಕಾರವೇ ರೈತರ ಖಾತೆಗೆ ಜಮಾ ಮಾಡುವ ಮೂಲಕ ಕಬ್ಬು ಬೆಳೆಗಾರರ ಬೇಡಿಕೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ ಸಿಎಂ ಸಿದ್ಧರಾಮಯ್ಯ ಅವರದ್ದು ಹೇಡಿ ಸರ್ಕಾರ. ಅದು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಮತ್ತು ಮರಳು ಮಾಫಿಯಾದಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆಸಿದ್ದಲ್ಲದೇ, ಬಿಜೆಪಿ ಸರ್ಕಾರದಲ್ಲಿ ಜಾರಿಗೊಳಿಸಿ ಎಲ್ಲ ಜನಪರ ಯೋಜನೆಗಳನ್ನು ಸ್ಥಗಿತಗೊಳಿಸಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಮಾತನಾಡಿ, ಲೋಕಸಭೆಯಲ್ಲಿ ರಾಹುಲ್ ಗಾಂಧಿ, ವಿಧಾನಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ನಿದ್ದೆ ಮಾಡುತ್ತಾರೆ. ಈ ಸರ್ಕಾರದಿಂದ ರೈತರು ಕಷ್ಟ ಅನುಭವಿಸುತ್ತಿದ್ದಾರೆ. ಅನೇಕ ಉದ್ಯಮಗಳು ರಾಜ್ಯದಿಂದ ಕಾಲು ಕೀಳುತ್ತಿವೆ ಎಂದು ಕಿಡಿಕಾರಿದರು.
ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರ್ ರಾವ್ ಮಾತನಾಡಿ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಮಾಧಿ ಗ್ಯಾರಂಟಿ. ಕಾಂಗ್ರೆಸ್ ಅಧಿಕಾರದಲ್ಲಿದ್ದ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿ ಧರ್ಮ, ಸತ್ಯವನ್ನು ನಂಬಿರುವ ರೈತ ಪಕ್ಷ. ಅರಾಜಕತೆ ನಡೆಸುತ್ತಿರುವ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಿಸುವ ಪಣವನ್ನು ಜನರು ಮಾಡಬೇಕೆಂದು ಕರೆ ನೀಡಿದರು.
ಸಂಸದರಾದ ಸಂಗಣ್ಣ ಕರಡಿ, ಭಗವಂತ ಖೂಭಾ, ಶಿವಕುಮಾರ ಉದಾಸಿ, ಸುರೇಳ ಅಂಗಡಿ, ಬಿ. ಶ್ರೀರಾಮುವಲು, ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ದುರಾಡಳಿತ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಂಸದರಾದ ಪ್ರತಾಪ ಸಿಂಹ, ನಳಿನ ಕುಮಾರ್ ಕಟೀಲ್, ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್. ಸುರೇಶಕುಮಾರ, ಲಕ್ಷ್ಮಣ ಸವದಿ, ಸಂಜಯ ಪಾಟೀಲ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


