ಮೋದಿ ರ್ಯಾಲಿಯಲ್ಲಿ ಬಿಎಸ್‌ವೈ...
ಬೆಂಗಳೂರು: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನ.16ರಂದು ಬೆಂಗಳೂರಿನಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆಯೇ?
ಹೌದು ಎನ್ನುತ್ತವೆ ಅವರ ಆಪ್ತ ಮೂಲಗಳು. ರ್ಯಾಲಿಯಲ್ಲಿ ಭಾಗವಹಿಸಿ ವೇದಿಕೆ ಮೇಲೆ ಕಾಣಿಸಿಕೊಳ್ಳಬೇಕು ಎಂಬ ಉದ್ದೇಶದಿಂದಲೇ ಎನ್‌ಡಿಎ ಮೈತ್ರಿಕೂಟದ ಆಗುಹೋಗುಗಳಲ್ಲಿ ತಮ್ಮನ್ನೂ ತೊಡಗಿಸಿಕೊಳ್ಳಿ ಎಂದು ಸ್ವತಃ ಯಡಿಯೂರಪ್ಪ ಅವರೇ ಎನ್‌ಡಿಎ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ ಎನ್ನುವುದು ಅವರ ಆಪ್ತ ವಲಯದ ಅಭಿಪ್ರಾಯ.
ನರೇಂದ್ರ ಮೋದಿ ನೇತೃತ್ವದ ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕು ಎಂಬ ಯಡಿಯೂರಪ್ಪ ಅವರ ಉದ್ದೇಶದ ಹಿಂದೆ ಎರಡು ಕಾರಣಗಳಿವೆ. ಮೋದಿ ಅವರ ಸಮ್ಮುಖದಲ್ಲಿ ತಮ್ಮ ಬಲಪ್ರದರ್ಶನ ಮಾಡುವುದು ಮತ್ತು ಮುಂದಿನ ದಿನಗಳಲ್ಲಿ ತಾವು ಬಿಜೆಪಿಗೆ ಸೇರದೇ ಇದ್ದರೂ ಬಿಜೆಪಿ- ಕೆಜೆಪಿ ಹೊಂದಾಣಿಕೆ ಬಗ್ಗೆ ಜನರಲ್ಲಿ ಗೊಂದಲ ಉಂಟಾಗದಂತೆ ಸ್ಪಷ್ಟತೆ ಮೂಡಿಸುವುದು. ಈ ಕಾರಣದಿಂದಲೇ ಯಡಿಯೂರಪ್ಪ ಅವರು, ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಎನ್‌ಡಿಎಗೆ ಕೆಜೆಪಿ ಬೆಂಬಲ ಸೂಚಿಸಿದೆ. ನಮ್ಮ ಪಕ್ಷವನ್ನು ಎನ್‌ಡಿಎ ಅಂಗಪಕ್ಷವಾಗಿ ಪರಿಗಣಿಸಿ ಸಭೆಗಳಿಗೆ ಆಹ್ವಾನಿಸುವ ಮೂಲಕ ಮೈತ್ರಿಕೂಟದ ಆಗುಹೋಗುಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದು ಕೋರಿ ಎನ್‌ಡಿಎ ಅಧ್ಯಕ್ಷರೂ ಆಗಿರುವ ಬಿಜೆಪಿ ಹಿರಿಯ ನಾಯಕ ಲಾಲ್‌ಕೃಷ್ಣ ಆಡ್ವಾಣಿ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ. ಈ ಮೂಲಕ ಮೋದಿ ಅವರ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಬಲಪ್ರದರ್ಶನಕ್ಕೆ ವೇದಿಕೆ: ಮೋದಿ ಅವರ ಕಾರ್ಯಕ್ರಮಕ್ಕೆ ಆಹ್ವಾನ ಬಂದರೆ ಯಡಿಯೂರಪ್ಪ ಅವರು ಪಾಲ್ಗೊಳ್ಳಲಿದ್ದಾರೆ. ಆ ಸಂದರ್ಭದಲ್ಲಿ ವೇದಿಕೆ ಏರಲೂ ಅವಕಾಶ ಸಿಗುತ್ತದೆ. ಯಡಿಯೂರಪ್ಪ ರ್ಯಾಲಿಗೆ ಬರುತ್ತಾರೆ ಎಂದಾದರೆ ಅಪಾರ ಸಂಖ್ಯೆಯಲ್ಲಿ ಅವರ ಬೆಂಬಲಿಗರು ಕೂಡ ಪಾಲ್ಗೊಳ್ಳುವುದು ಸಹಜ. ಈ ಸಂದರ್ಭದಲ್ಲಿ ತಮ್ಮ ಶಕ್ತಿ ಪ್ರದರ್ಶನವನ್ನು ಮೋದಿ ಅವರ ಮುಂದೆ ಪ್ರದರ್ಶಿಸಿ ಬಿಜೆಪಿಗೆ ಇನ್ನಷ್ಟು ಹತ್ತಿರವಾಗಲುಅವರು ಮುಂದಾಗಿದ್ದಾರೆ. ಯಡಿಯೂರಪ್ಪ ಅವರನ್ನು ಬಿಜೆಪಿಗೆ ಆಹ್ವಾನಿಸುತ್ತಿರುವ ಪಕ್ಷದ ರಾಜ್ಯ ಮುಖಂಡರು ಅವರ ಕಟ್ಟಾ ಅನುಯಾಯಿಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ಮೇಲಾಗಿ ಸೋತವರಿಗೆ ಸ್ಥಾನಮಾನವಿಲ್ಲ ಎಂದು ಹೇಳುತ್ತಾ, ಯಡಿಯೂರಪ್ಪ ಬೆಂಬಲಿಗರು ಪಕ್ಷಕ್ಕೆ ಬಂದರೆ ಅವರಿಗೆ ಪಕ್ಷದಲ್ಲಿ ಅಧಿಕಾರ ಸಿಗುವುದಿಲ್ಲ ಎಂಬ ಸಂದೇಶ ರವಾನಿಸುತ್ತಿದ್ದಾರೆ.
ಹೀಗಿರುವಾಗ ರ್ಯಾಲಿಯಲ್ಲಿ ಯಡಿಯೂರಪ್ಪ ಅವರು ತಮ್ಮ ಶಕ್ತಿ ಪ್ರದರ್ಶನ ಮಾಡಿದರೆ ಸ್ವತಃ ನರೇಂದ್ರ ಮೋದಿ ಅವರೇ ತಮ್ಮನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಆಸಕ್ತಿ ತೋರಿಸಬಹುದು. ಆಗ ರಾಜ್ಯ ಮುಖಂಡರು ಮೌನವಾಗಬೇಕಾಗುತ್ತದೆ. ಇದರಿಂದ ತಮ್ಮ ಬೆಂಬಲಿಗರಿಗೂ ಸೂಕ್ತ ಸ್ಥಾನಮಾನ ಸಿಗಲು ಸಾಧ್ಯವಾಗುತ್ತದೆ ಎಂಬುದು ಯಡಿಯೂರಪ್ಪ ಅವರ ಅಭಿಪ್ರಾಯ ಎನ್ನಲಾಗಿದೆ.
ಗೊಂದಲ ನಿವಾರಣೆ: ದಿನಕಳೆದಂತೆ ಯಡಿಯೂರಪ್ಪ ಅವರು ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ. ಆದರೆ, ಈ ವೇಳೆ ತಮಗೆ ಮಾತ್ರವಲ್ಲ, ಬೆಂಬಲಿಗರಿಗೂ ಗೌರವದ ಸ್ವಾಗತ ಸಿಗಬೇಕು ಮತ್ತು ಈ ಗೌರವ ಅದೇ ರೀತಿ ಮುಂದುವರಿಯಬೇಕು. ಇಲ್ಲದೇ ಇದ್ದರೆ ಎನ್‌ಡಿಎ ಮೈತ್ರಿಕೂಟದಲ್ಲಿ ಮುಂದುವರಿದು ರಾಜ್ಯದಲ್ಲಿ ಪ್ರತ್ಯೇಕವಾಗಿ ಉಳಿಯುವುದಾಗಿ ಸ್ಪಷ್ಟ ಸಂದೇಶವನ್ನು ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ರವಾನಿಸಿದ್ದಾರೆ. ಒಂದು ವೇಳೆ ಬಿಜೆಪಿಯಲ್ಲಿ ಸೂಕ್ತ ಗೌರವ ಸಿಗದೇ ಇದ್ದರೆ ಕೆಜೆಪಿ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತದೆ. ಆದರೆ, ಹೊಂದಾಣಿಕೆ ಮುಂದುವರಿಯಲಿದೆ.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಕೆಜೆಪಿ ಹೊಂದಾಣಿಕೆ ಮಾಡಿಕೊಂಡಿದ್ದರೂ ಈ ಕುರಿತಂತೆ ಗೊಂದಲ ಇದ್ದುದರಿಂದ ನಿರೀಕ್ಷಿತ ಫಲಿತಾಂಶ ಬಂದಿರಲಿಲ್ಲ. ಆಗ ಎರಡೂಪಕ್ಷದ ಮತ ವಿಭಜನೆಯಾಗುವುದಿಲ್ಲ ಎಂಬ ಕಾರಣದಿಂದ ಅವರು ಮೋದಿ ಅವರ ಜತೆ ವೇದಿಕೆ ಏರಲು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ, ಇದಕ್ಕೆ ಬಿಜೆಪಿ ಕಡೆಯಿಂದ ಯಾವ ಪ್ರತಿಕ್ರಿಯೆ ಬರುತ್ತದೆ ಎಂದು ಕಾದು ನೋಡಬೇಕಾಗಿದೆ.
ಏನಿದು ಫ್ರೆಂಡ್ಸ್ ಆಫ್ ಬಿಜೆಪಿ?
ಬಿಜೆಪಿಯನ್ನು ಬೆಂಬಲಿಸುವ ವೈದ್ಯರು, ಎಂಜಿನಿಯರ್, ಪ್ರಾಧ್ಯಾಪಕರು ಸೇರಿದಂತೆ ವೃತ್ತಿಪರರಿಗಾಗಿ ಹುಟ್ಟಿಕೊಂಡಿರುವುದೇ ಫ್ರೆಂಡ್ಸ್ ಆಫ್ ಬಿಜೆಪಿ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 272ಕ್ಕೂ ಹೆಚ್ಚು ಸ್ಥಾನ ತಂದುಕೊಡುವುದು, ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವುದು ಇದರ ಉದ್ದೇಶ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

