ರಾಜಕೀಯ

ಬಣ್ಣದ ಲೋಕಕ್ಕೆ ರಾಜಕೀಯ ಭ್ರಾಂತು!

Published On :

ಕ.ಪ್ರ. ವಾರ್ತೆ ಬೆಂಗಳೂರು ಮಾ.29
ಟಿಕೆಟ್ ಕೊಡಿ, ಟಿಕೆಟ್ ಕೊಡಿ...
ಒಂದು ಕಾಲದಲ್ಲಿ ಇವರನ್ನು ನೋಡಲು ಟಿಕೆಟ್ ಪಡೆಯಬೇಕಿತ್ತು. ಇಂದು ಅವರಿಗೇ ಟಿಕೆಟ್ ಕೊಡಬೇಕಾಗಿದೆ. ಏಕೆಂದರೆ, ಇವರು ತೆರೆ ಬಿಟ್ಟು, ಧರೆಗೆ ಇಳಿದಿದ್ದಾರೆ. ಚಿತ್ರರಂಗದ ಬಣ್ಣದ ಲೋಕದಿಂದ ರಾಜಕೀಯ ರಂಗಕ್ಕೆ ಪ್ರವೇಶಿಸಿರುವುದರಿಂದ ಇವರಿಗೆ ಇಂದು ಟಿಕೆಟ್ ಬೇಕಾಗಿದೆ.
ಯಾವುದೇ ಕ್ಷೇತ್ರದಲ್ಲಿ ಟಿಕೆಟ್ ನೀಡಿದರೂ ಸ್ಪರ್ಧಿಸುತ್ತೇನೆ. ಇಂತಹದ್ದೇ ಕ್ಷೇತ್ರ ಎಂದೇನೂ ಇಲ್ಲ... ಬಣ್ಣದ ಲೋಕದಲ್ಲಿ ಮಾಡಿರುವ ಮೋಡಿ ರಾಜಕೀಯ ಜಗತ್ತಿನಲ್ಲೂ ನಡೆಯುತ್ತದೆ ಎಂಬ ಧಾಟಿಯ ಮಾತು ಅವರದ್ದು. ಆದರೆ ಇದು ಭ್ರಾಂತು ಎಂಬುದನ್ನು ರಾಜ್ಯದ ಜನ ಸಾಕಷ್ಟು ಬಾರಿ ಸಾಬೀತುಪಡಿಸಿದ್ದಾರೆ. ಜನಪ್ರಿಯತೆಯೊಂದೇ ಚುನಾವಣೆ ಗೆಲ್ಲಿಸುವುದಿಲ್ಲ ಎಂಬುದನ್ನು ಒಂದೇ ಒಂದು ಚುನಾವಣೆ ಎದುರಿಸಿದ ಬಣ್ಣದಲೋಕದವರಿಗೆ ಅರ್ಥವಾಗಿದೆ. ಈ ಅನುಭವವಾದರು ಇನ್ನೂ ಆ ಭ್ರಾಂತಿಯಿಂದ ಹೊರಬಂದಿಲ್ಲ. ಅದಕ್ಕೇ ಇದೀಗ ರಾಜಕೀಯ ಪ್ರವೇಶಿಸಿರುವ ಚಿತ್ರರಂಗದವರು ಎಲ್ಲಾದರೂ ಟಿಕೆಟ್ ಕೊಡಿ, ಜನಸೇವೆ ಮಾಡುತ್ತೇನೆ ಎನ್ನುತ್ತಿದ್ದಾರೆ.
ನೆಗೆ ಹುಡುಗಿ: ಇದಕ್ಕೆ ಸ್ಪಷ್ಟ ಉದಾಹರಣೆ 'ಮಳೆ ಹುಡುಗಿ' ಪೂಜಾಗಾಂಧಿ. ಈಗ ಆಕೆಗೆ 'ಮಳೆ' ಖ್ಯಾತಿ ಹೋಗಿ 'ನೆಗೆ' ಖ್ಯಾತಿ ಆವರಿಸಿಕೊಂಡಿದೆ. ಪಕ್ಷದಿಂದ ಪಕ್ಷಕ್ಕೆ ನೆಗೆದಿದ್ದರಿಂದ ಈ ಹೆಗ್ಗಳಿಕೆ. ಕೆಲವೇ ತಿಂಗಳಲ್ಲಿ ಮೂರು ಪಕ್ಷ ಸೇರಿದ ದಾಖಲೆ ಪೂಜಾಗಾಂಧಿಯದ್ದು. ಈ ಅರ್ಥದಲ್ಲಿ ಅವರು 'ಹ್ಯಾಟ್ರಿಕ್ ಹೀರೋಯಿನ್‌'! ಬಹುಶಃ ಇಂತಹದಾಖಲೆ ಚಿತ್ರರಂಗ ಹಾಗೂ ರಾಜಕೀಯರಂಗದಲ್ಲಿ ಇದೇ ಪ್ರಥಮ.
ಜೆಡಿಎಸ್, ಕೆಜೆಪಿ ಇದೀಗ ಬಿಎಸ್‌ಆರ್ ಕಾಂಗ್ರೆಸ್. ಪೂಜಾಗಾಂಧಿ ಅವರು ಜೆಡಿಎಸ್ ಸೇರಿಕೊಂಡಾಗ ಅಲ್ಲಿನ ತತ್ತ್ವ ಸಿದ್ಧಾಂತಗಳು ಸೆಳೆದಿದ್ದವು. ಕೆಲವು ಕಾರಣಕ್ಕೆ ಅದು ಮರೆತುಹೋಗಿ, ಕೆಜೆಪಿ ಸೆಳೆಯಿತು. ಅಲ್ಲೂ ಸರಿಹೋಗಲಿಲ್ಲ. ಬಿಎಸ್‌ಆರ್‌ಗೆ ನೆಗೆದರು. ಇವರು ಎಲ್ಲೆಲ್ಲೂ ಹೇಳಿದ್ದು, ಹೇಳುತ್ತಿರುವುದು 'ಯಾವುದಾದರು ಕ್ಷೇತ್ರವಾಗಲಿ, ಟಿಕೆಟ್ ಕೊಡಿ'. ರಾಜಕೀಯದ ಗಂಧ-ಗಾಳಿಗೆ ಇದೀಗ ತಮ್ಮನ್ನು ಒಡ್ಡಿಕೊಳ್ಳುತ್ತಿರುವ ಪೂಜಾಗಾಂಧಿಗೆ ಅವರನ್ನು ನೋಡಲು ಜನ ಬರುತ್ತಾರೆಯೇ ಹೊರತು, ಅಷ್ಟೂ ಜನ ಅವರಿಗೆ ಮತ ಹಾಕುವುದಿಲ್ಲ ಎಂಬ ಅರಿವಿದ್ದಂತಿಲ್ಲ.
ರಕ್ಷಿತಾರ್ಥ: ಇನ್ನು ರಕ್ಷಿತಾ ಕೂಡ ಬಿಎಸ್‌ಆರ್ ಕಾಂಗ್ರೆಸ್‌ನಲ್ಲಿದ್ದಾರೆ. ಅವರದ್ದೂ ಒಂದು ರೀತಿ ಇದೇ ಮನೋಭಾವ. ಮೊದಲು ರಾಜರಾಜೇಶ್ವರಿನಗರ ಕ್ಷೇತ್ರವೇ ಬೇಕು ಎಂದರು. ಇದೀಗ ಯಾವುದಾದರೂ ಸರಿ ಎಂದಿದ್ದಾರೆ. ಸ್ಥಳೀಯಸಂಸ್ಥೆ ಚುನಾವಣೆ ಸಂದರ್ಭದಲ್ಲಿ ರಾಜಕೀಯದ ಒರೆತ ಒಂದಷ್ಟು ಇವರಿಗೆ ಅರ್ಥವಾಗಿದೆ.
ನಡೆಯದ ರಮ್ಯಾಟ: ಇನ್ನು ನಟಿ ರಮ್ಯಾ ಕಾಂಗ್ರೆಸ್‌ನ ಯೂಥ್ ಐಕಾನ್... ಇವರೇ ಯುವ ಕಾಂಗ್ರೆಸ್ ಅಧ್ಯಕ್ಷೆ.. ಇಂತಹದ್ದೊಂದು ಬೃಹತ್ ಅಲೆ ಕಾಂಗ್ರೆಸ್‌ನಲ್ಲಿ ಅಬ್ಬರವಾಗಿ ತೇಲಿ, ದಡಕ್ಕೆ ಸಾಕಷ್ಟು ದೂರವೇ ತಿಳಿಯಾಯಿತು. ಅವರು ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸಲೂ ಸಾಧ್ಯವಾಗಲಿಲ್ಲ. ರಾಜಕೀಯ ರಂಗ ತಾನಂದುಕೊಂಡಷ್ಟು ಸುಲಭವಲ್ಲ ಎಂದು ರಮ್ಯಾಗೆ ಮನವರಿಕೆಯಾದಂತಿದೆ. ಅದಕ್ಕೇ, ಅವರು ಟಿಕೆಟ್ ಕೊಡಿ, ಟಿಕೆಟ್ ಕೊಡಿ ಎನ್ನುತ್ತಿಲ್ಲ. ರಾಜಕೀಯದಲ್ಲಿ ಪರಿಪಕ್ವವಾಗಿ ಚಿತ್ರರಂಗ-ರಾಜಕೀಯ ಎರಡೂ ಬೇರೆ ಬೇರೆ ಎಂಬುದನ್ನು ಅರಿತುಕೊಂಡವರಲ್ಲಿ ಅಗ್ರಮಹಿಳೆ ಉಮಾಶ್ರೀ. ವಿಧಾನಪರಿಷತ್ ಸದಸ್ಯೆಯಾದ ನಂತರ ಶಾಸಕಿಯಾಗಬೇಕೆಂಬ ಅವರ ಉತ್ಸಾಹ ತೇರದಾಳದಲ್ಲಿ ನಾಲ್ಕು ವರ್ಷಗಳಿಂದ ಅನಾವರಣಗೊಂಡಿದೆ. ಇದಕ್ಕೆ ಅವರ ಪರಿಶ್ರಮ ರಾಜಕೀಯದ ಅಪ್ಪಟ ಪ್ರಕ್ರಿಯೆಯಲ್ಲೇ ಆಗಿದೆ. ಅದಕ್ಕೇ ಅವರು ಎಲ್ಲಾದರೂ ಗೆಲ್ಲಬಹುದು ಎಂಬ ಭಾವದಲ್ಲಿಲ್ಲ.
ಇನ್ನು ತೆರೆ ಹಿಂದಿನ ಶಕ್ತಿಗಳಾದ ಎಸ್.ನಾರಾಯಣ್, ಟಿ.ಎನ್. ಸೀತಾರಾಂ ಅವರು ಟಿಕೆಟ್ ಮೊದಲು ಸ್ಪಷ್ಟವಾಗಲಿ ಎಂದು ಜೆಡಿಎಸ್‌ಗೆ ಹೇಳಿದ್ದಾರೆ. ತೆರೆಯ ನಿರ್ದೇಶನ ಧರೆಯ ಮೇಲಿರುವವರಿಗೆ ನಿದರ್ಶನವಾದೀತೇ ಎಂಬುದೇ ಯಕ್ಷಪ್ರಶ್ನೆ. ಏಕೆಂದರೆ, ಮುಖ್ಯಮಂತ್ರಿ ಚಂದ್ರು ಒಂದು ಬಾರಿ ಗೌರಿಬಿದನೂರಿನಲ್ಲಿ ಸ್ಪರ್ಧೆ ಮಾಡಿ ಜಯಿಸಿದ್ದು ಬಿಟ್ಟರೆ ನಂತರ ಈ ಚುನಾವಣೆ ನಮಗಲ್ಲ ಎನ್ನುತ್ತಿದ್ದಾರೆ. ಈ ಕಾಲದ ಚುನಾವಣೆ ನಡೆಸಲು ನಮಗೆ ಸಾಮರ್ಥ್ಯ ಇಲ್ಲ ಎಂದೂ ಹೇಳಿದ್ದಾರೆ.
ಅಂಬಿಗೂ ಸೋಲು: ಎಲ್ಲಕ್ಕಿಂತ ಮುಖ್ಯವೆಂದರೆ, ರೆಬಲ್ ಸ್ಟಾರ್ ಅಂಬರೀಶ್. ದಾನಶೂರ ಕರ್ಣನೆಂದೇ ಪ್ರಖ್ಯಾತಿಯಾದ ಅಂಬರೀಶ್‌ಗೆ ರಾಜಕೀಯದಲ್ಲಿ ಸತತ ಗೆಲವು ಸಾಧ್ಯವಾಗಿಲ್ಲ. ರಾಜಕೀಯದಾಟದಲ್ಲಿ ಸೋಲೂ ಆವರಿಸಿದೆ. ಕ್ಷೇತ್ರ ಆಯ್ಕೆಗೂ ವಿರೋಧ ಇರುತ್ತದೆ. ಇದೆಲ್ಲವನ್ನು ತಾರಾ ವರ್ಚಸ್ಸಿನಿಂದ ನಿವಾರಿಸಲು ಸಾಧ್ಯ ಇಲ್ಲ.
ಅನಂತ್‌ನಾಗ್ ವಿಷಯವೂ ಇದೇ. ಜನತಾದಳದ ಅಲೆಯಲ್ಲಿ ಮಲ್ಲೇಶ್ವರದಲ್ಲಿ ಅನಂತ್‌ನಾಗ್ ಜಯಸಾಧಿಸಿದ್ದರು. ಸಚಿವರೂ ಆದರು. ನಂತರ ರಾಜಕೀಯದಿಂದ ದೂರ ದೂರ.
ದೂರವೇ ಉಳಿದ ರಾಜ್, ವಿಷ್ಣು: ಚಿತ್ರರಂಗದವರು ರಾಜಕೀಯದಲ್ಲಿ ಯಶ ಸಾಧಿಸಿಲ್ಲ ಎಂದೇನೂ ಇಲ್ಲ. ಸೋಲು-ಗೆಲವು ಎರಡೂ ಕಡೆ ಇದ್ದೇ ಇರುತ್ತದೆ. ಆದರೆ, ತಾರಾ ವರ್ಚಸ್ಸೇ ಎಲ್ಲದಕ್ಕೂ ಕಾರಣವಲ್ಲ ಎಂಬುದು ಚಿತ್ರರಂಗದ ಕೆಲವರಿಗೆ ಮಾತ್ರ ಅರಿವಾಗಿತ್ತು. ಆದ್ದರಿಂದಲೇ ವರನಟ ಡಾ. ರಾಜ್‌ಕುಮಾರ್ ರಾಜಕೀಯದತ್ತ ಸುಳಿಯಲೇ ಇಲ್ಲ. ಸಾಹಸಸಿಂಹ ಡಾ. ವಿಷ್ಣುವರ್ಧನ್ ಆಪ್ತಮಿತ್ರ ಅಂಬರೀಶ್‌ಗಾಗಿ ಪ್ರಚಾರದಲ್ಲಿ ಕಾಣಿಸಿಕೊಂಡರೇ ಹೊರತು ರಾಜಕೀಯದಲ್ಲಲ್ಲ.
ನೆರೆ ರಾಜ್ಯಗಳಲ್ಲಿ ಚಿತ್ರರಂಗದವರೇ ರಾಜಕೀಯದಲ್ಲಿ ಮೆರೆದಿದ್ದು. ಅವರದ್ದೇ ಪಾರುಪತ್ಯ. ಆದರೆ ಕರ್ನಾಟಕದಲ್ಲಿ ಚಿತ್ರರಂಗದ ತಾರಾವರ್ಚಸ್ಸು ರಾಜಕೀಯಕ್ಕೆ ಸೇರಿದ ಮೇಲೆ ಕುಗ್ಗಿದೆ, ಕಳೆಗುಂದಿದೆ. ಸಿನಿಮಾ ಫೈಟುಗಳಿಗಿಂತ ರಾಜಕೀಯ ಪಟ್ಟುಗಳೇ ಇಲ್ಲಿ ಹೈಲೈಟು. ಈ ಪಟ್ಟು ಹಾಕುವುದನ್ನು ಹೇಳಿಕೊಡಲು ಫೈಟ್ ಮಾಸ್ಟರ್ ಅಥವಾ ಡೈರೆಕ್ಟರ್ ಇರುವುದಿಲ್ಲ. ಮತದಾರನನ್ನು ಓಲೈಸಲು ಅಭಿನಯ ಇಲ್ಲಿ ಲೆಕ್ಕಕ್ಕೇ ಬರುವುದಿಲ್ಲ. ಇದರ ವಾಸ್ತವ ಈ ಬಾರಿ ಸಾಕಷ್ಟು ತಾರೆಯರಿಗೆ ಅರಿವಾಗಲಿದೆ.
-ಕೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.