ದಾವಣಗೆರೆ: ಯಾರಿಗೆ ಧಮಾಕಾ?
ಕ.ಪ್ರ. ವಾರ್ತೆ ದಾವಣಗೆರೆ ಮಾ.29
ದಾವಣಗೆರೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬದ್ಧ ವೈರಿಗಳಾದ ಕಾಂಗ್ರೆಸ್, ಬಿಜೆಪಿಗೆ ಇದೀಗ ಜೆಡಿಎಸ್ ಜೊತೆ ಹೊಸ ವೈರಿ ಕೆಜೆಪಿ ಪೈಪೋಟಿ ಒಡ್ಡುತ್ತಿದೆ. ಪ್ರತಿ ಕ್ಷೇತ್ರವೂ ಎಲ್ಲ ಪಕ್ಷ, ಅಭ್ಯರ್ಥಿಗಳ ಪಾಲಿಗೆ ಅಳಿವು- ಉಳಿವಿನ ಪ್ರಶ್ನೆಯಾಗಿವೆ. 2008ರ ಸಾರ್ವತ್ರಿಕ, ನಂತರದ ಉಪ ಚುನಾವಣೆಗಳಲ್ಲಿ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರದಲ್ಲಿ ಅಭೂತಪೂರ್ವ ಜಯ ಕಂಡಿದ್ದ ಬಿಜೆಪಿ ಈಗ ಮೆತ್ತಗಾಗಿದೆ.
ಹರಿಹರ ಮಾಜಿ ಶಾಸಕ ಬಿ.ಪಿ. ಹರೀಶ, ಚನ್ನಗಿರಿ ಶಾಸಕ ಮಾಡಾಳ ವಿರುಪಾಕ್ಷಪ್ಪ ಬಿಜೆಪಿ ತೊರೆದು ಕೆಜೆಪಿ ಸೇರಿದ್ದಾರೆ. ಯಡಿಯೂರಪ್ಪ ಅವರ ಕೆಜೆಪಿಯಿಂದ ಮುಂದಿನ ಚುನಾವಣೆ ಎದುರಿಸುವುದೂ ಖಚಿತವಾಗಿದೆ. ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ ದಾವಣಗೆರೆ ಉತ್ತರ ಕ್ಷೇತ್ರ, ಶಾಸಕ ಎಂ. ಬಸವರಾಜನಾಯ್ಕ ಮತ್ತೆ ಅದೇ ಕ್ಷೇತ್ರದಿಂದ ಕಣಕ್ಕಿಳಿಯುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಕರುಣಾಕರರೆಡ್ಡಿ, ಎಸ್.ವಿ. ರಾಮಚಂದ್ರ ಬಿಜೆಪಿ ಬಿಡುವುದಿಲ್ಲ ಎಂಬುದಾಗಿ ಹೇಳಿದ್ದರೂ, ಅದಿನ್ನೂ ಸ್ಪಷ್ಟವಾಗಿಲ್ಲ. ರೇಣುಕಾಚಾರ್ಯ ಕೆಜೆಪಿ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ.
ಕಳೆದ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಮತ್ತು ಜಗಳೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ರಾಮಚಂದ್ರ 'ಆಪರೇಷನ್ ಕಮಲ'ಕ್ಕೊಳಗಾಗಿ ಬಿಜೆಪಿ ಪಾಲಾಗಿದ್ದರು. ದಕ್ಷಿಣದಿಂದ ಆಯ್ಕೆಯಾಗಿದ್ದ ಕೆಪಿಸಿಸಿ ಖಜಾಂಚಿ ಡಾ. ಶಾಮನೂರು ಶಿವಶಂಕರಪ್ಪ ಇಡೀ 8 ಕ್ಷೇತ್ರಗಳ ಪೈಕಿ ಕಾಂಗ್ರೆಸ್ನ ಏಕೈಕ ಶಾಸಕರಾಗಿದ್ದರು. ಈಗಲೂ ಕಾಂಗ್ರೆಸ್ ಟಿಕೆಟ್ ವಿಚಾರ ಅಂತ್ಯಗೊಂಡಿಲ್ಲ.
ತೆರೆದ ಬಿಜೆಪಿ ಬಾಗಲು: ದಾವಣಗೆರೆ ಉತ್ತರದಲ್ಲಿ ಮಾಜಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಹೆಸರು ಪ್ರಬಲವಾಗಿದ್ದರೆ, ಪ್ರೇಮಾ ಚನ್ನಪ್ಪ, ಕೆಂ.ಗೋ. ಹನುಮಂತಪ್ಪ ಹೆಸರುಗಳೂ ಓಡುತ್ತಿವೆ. ಹರಿಹರದಿಂದ ಮಾಜಿ ಸಚಿವ ಡಾ. ವೈ. ನಾಗಪ್ಪ, ಹರಪನಹಳ್ಳಿಯಲ್ಲಿ ಎಂ.ಪಿ. ರವೀಂದ್ರ, ವಕೀಲ ಚಂದ್ರಶೇಖರ ಭಟ್, ಬೆಟ್ಟನಗೌಡ ಪಾಟೀಲ್ ಇತರೆ ಆಕಾಂಕ್ಷಿಗಳಿದ್ದಾರೆ. ಚನ್ನಗಿರಿಯಲ್ಲಿ ವಡ್ನಾಳ್ ರಾಜಣ್ಣ ಮತ್ತು ಮಹಿಮಾ ಪಟೇಲ್ ಮಧ್ಯೆ ಪೈಪೋಟಿ ಇದ್ದು, ಇಬ್ಬರಲ್ಲಿ ಯಾರಿಗೆ ಟಿಕೆಟ್ ತಪ್ಪಿದರೂ ಅವರಿಗೆ ಬಿಜೆಪಿ ಬಾಗಿಲು ತೆರೆದಿರುತ್ತದೆ. ಸ್ವತಂತ್ರವಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು.
ಪರಿಶಿಷ್ಟ ಜಾತಿಗೆ ಮೀಸಲಾದ ಮಾಯಕೊಂಡದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಡಾ.ವೈ. ರಾಮಪ್ಪ, ಕೆ. ಶಿವಮೂರ್ತಿ ನಾಯ್ಕ, ಡಿ. ಬಸವರಾಜ, ಬಿ.ಎಚ್. ವೀರಭದ್ರಪ್ಪ, ಕೆ.ಎಚ್. ಬಸವರಾಜ, ಕೆ.ಎಸ್. ಬಸವರಾಜ, ಜಲಜಾನಾಯ್ಕ ಹೀಗೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತದೆ. ಎಸ್ಟಿಗೆ ಮೀಸಲಾದ ಜಗಳೂರಿನಲ್ಲಿ ಕಾಂಗ್ರೆಸ್ ಟಿಕೆಟಿಗೆ ಎಚ್.ಪಿ. ರಾಜೇಶ ಹಾಗೂ ದೇವೇಂದ್ರಪ್ಪ, ಕೆ.ಪಿ. ಪಾಲಯ್ಯ ಯತ್ನಿಸುತ್ತಿದ್ದಾರೆ. ಹೊನ್ನಾಳಿಯಲ್ಲಿ ಡಿ.ಜಿ. ಶಾಂತನಗೌಡ, ಎಚ್.ಬಿ. ಮಂಜಪ್ಪ, ಬಿ. ಸಿದ್ದಪ್ಪ ಇತರರು ಆಕಾಂಕ್ಷಿಯಾಗಿದ್ದಾರೆ.
ಕೆಜೆಪಿಯಿಂದ ಹರಿಹರಕ್ಕೆ ಬಿ.ಪಿ. ಹರೀಶ್, ಚನ್ನಗಿರಿಗೆ ಮಾಡಾಳ ವಿರುಪಾಕ್ಷಪ್ಪ ಕಣಕ್ಕಿಳಿಯಲಿದ್ದಾರೆ. ಮಾಯಕೊಂಡ, ದಾವಣಗೆರೆ ಉತ್ತರ, ದಕ್ಷಿಣ, ಹೊನ್ನಾಳಿ, ಜಗಳೂರು, ಹರಪನಹಳ್ಳಿಗೆ ಇನ್ನೂ ಅಭ್ಯರ್ಥಿ ಘೋಷಣೆಯಾಗಿಲ್ಲ. ಅದೂ ಶೀಘ್ರ ಘೋಷಣೆಯಾಗುವ ಸಾಧ್ಯತೆ ಇದೆ. ಜೆಡಿಎಸ್ನಿಂದ ಹರಿಹರಕ್ಕೆ ವಿಪ ಮಾಜಿ ಸದಸ್ಯ ಎಚ್.ಎಸ್. ಶಿವಶಂಕರ ಹೆಸರು ಕೇಳಿ ಬರುತ್ತಿದೆ. ಚನ್ನಗಿರಿಗೆ ಹೊದಿಗೆರೆ ರಮೇಶ, ಜಗಳೂರು ಕ್ಷೇತ್ರಕ್ಕೆ ಹುಚ್ಚವ್ವನಹಳ್ಳಿ ಮಂಜುನಾಥ, ಡಾ. ರಂಗಪ್ಪ ಇತರರು ಹೆಸರು ಚಾಲ್ತಿಯಲ್ಲಿದೆ.
-ನಾಗರಾಜ ಬಡದಾಳ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

