ರಾಜಕೀಯ

ಗುಲ್ಬರ್ಗದಲ್ಲಿ ಪಕ್ಷಾಂತರ ಪರ್ವ

Published On :

ಕ.ಪ್ರ. ವಾರ್ತೆ  ಗುಲ್ಬರ್ಗ ಮಾ.29
ಜಿಲ್ಲೆಯ 9 ಕ್ಷೇತ್ರಗಳಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಅತೃಪ್ತರು ತಮಗೆ ಅನುಕೂಲವಾಗುವ ಪಕ್ಷದಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಇದಕ್ಕೆ ಪಕ್ಷಭೇದವೇ ಇಲ್ಲ!
ಜೆಡಿಎಸ್ ಬಿಟ್ಟು ರಾಜಕೀಯ ಸನ್ಯಾಸದ ಮಾತನಾಡಿದ್ದ ಹೋರಾಟಗಾರ ಎಸ್.ಕೆ. ಕಾಂತಾ ಕೆಜೆಪಿಯಿಂದ ಸ್ಪರ್ಧಿಸಲು ಅಣಿಯಾಗಿದ್ದರೆ, ಶಹಾಬಾದ್‌ನಲ್ಲಿ ಸಿ. ಗುರುನಾಥ ಕಾಂಗ್ರೆಸ್ ಬಿಟ್ಟು ಕೆಜೆಪಿ ಸೇರಲು ಸಜ್ಜಾಗಿದ್ದಾರೆ. ಚಿಂಚೋಳಿಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಾಬುರಾವ ಚವ್ಹಾಣ್ ಟಿಕೆಟ್ ಸಿಗುವುದಿಲ್ಲ ಎಂಬುದು ಅರಿವಾಗುತ್ತಿದ್ದಂತೆ ಕೆಜೆಪಿ ಸೇರಿ ಗುಲ್ಬರ್ಗ ಗ್ರಾಮೀಣ ಅಭ್ಯರ್ಥಿಯಾಗುವ ತವಕದಲ್ಲಿದ್ದಾರೆ. ಕುಸ್ತಿಪಟು ರೇವು ನಾಯಕ ಬೆಳಮಗಿ ಇನ್ನೂ ನಿಲವು ಪ್ರಕಟಿಸಿಲ್ಲ. ಸೇಡಂನ ಚಂದ್ರಶೇಖರರೆಡ್ಡಿ ಮದನಾ ದೇಶಮುಖ, ಸತೀಶರೆಡ್ಡಿ ಜಿಲೇಡ ಪಲ್ಲಿ, ನರೇಶ ಮಲ್ಕೂಡ್, ವೆಂಕಟರೆಡ್ಡಿ ಕೋಲ್ಕುಂದಾ ಮುಂತಾದವರು ಜೆಡಿಎಸ್‌ಗೆ ರಾಜಿನಾಮೆ ನೀಡಿದ್ದು ಏಪ್ರಿಲ್ ಮೊದಲ ವಾರದಲ್ಲಿ ತಮ್ಮ ನಿರ್ಧಾರ ಪ್ರಕಟಿಸುವ ಸೂಚನೆ ನೀಡಿದ್ದಾರೆ.
ಜೇವರ್ಗಿಯಲ್ಲಂತೂ ಮಲ್ಲೀನಾಥಗೌಡ ಪಾಟೀಲ್ ಯಲಗೋಡು ಬಿಜೆಪಿ ತ್ಯಜಿಸಿ ಕೆಜೆಪಿಯತ್ತ ದಾಪುಗಾಲು ಹಾಕುತ್ತಿದ್ದರೆ ಅತ್ತ ಬಸವಣ್ಣೆಪ್ಪ ಗೌನಳ್ಳಿ ಅವರೂ ಬಿಜೆಪಿ ಬಿಟ್ಟು 'ಕೈ' ಹಿಡಿದಿದ್ದಾರೆ. ಇನ್ನು ಕಾಂಗ್ರೆಸ್‌ನ ಅಪ್ಪಾಸಾಹೇಬ ಪಾಟೀಲ್ ರದ್ದೇವಾಡಗಿ, ಸತ್ತಾರಸಾಬ್ ಗಿರಣಿ, ಗುಳಗಿ ವಕೀಲರು ಸೇರಿದಂತೆ ಇತರರು ಬಿಎಸ್‌ವೈ ಅವರನ್ನು ಭೇಟಿಯಾಗಿ ಕುತೂಹಲ ಕೆರಳಿಸಿದ್ದಾರೆ.
ಮಾಜಿ ಸಚಿವ ಸಿ. ಗುರುನಾಥ ಕಾಂಗ್ರೆಸ್ ಬಿಟ್ಟು ಕೆಜೆಪಿ ಸೇರುವ ಮೂಲಕ ಚಿತ್ತಾಪುರ ಮೀಸಲು ಮತಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ಇಲ್ಲಿ ಹಾಲಿ ಬಿಜೆಪಿ ಶಾಸಕರಾಗಿದ್ದ ವಾಲ್ಮೀಕಿ ನಾಯಕ ಬಿಜೆಪಿಯಲ್ಲಿರಬೇಕೋ, ಕೆಜೆಪಿ ಸೇರಬೇಕೋ ಎಂಬ ಗೊಂದಲದಲ್ಲಿರುವದರಿಂದ ಕಮಲ ಪಾಳಯದಲ್ಲಿ ರಾಜಕೀಯ ಅಷ್ಟಾಗಿ ಗರಿಗೆದರಿಲ್ಲ. ಜೆಡಿಎಸ್ ಸಹ ಚಿತ್ತಾಪುರದತ್ತ ಚಿತ್ತ ನೆಡದೆ ಮೌನವಾಗಿದೆ.
ಗುಲ್ಬರ್ಗ ಉತ್ತರದಲ್ಲಿ ನಾಸೀರ್ ಹುಸೇನ್ ಕೆಜೆಪಿ ಸೇರಿ ಅಭ್ಯರ್ಥಿಯಾಗಿದ್ದಾರೆ. ಇದರಿಂದ ಕೋಪಗೊಂಡ ಉದ್ಯಮಿ, ಯಡಿಯೂರಪ್ಪ ಬೆಂಬಲಿಗರಲ್ಲಿ ಪ್ರಮುಖರಾಗಿದ್ದ ಬಿ.ಜಿ. ಪಾಟೀಲ್ ಕೆಜೆಪಿಯಿಂದ ಸಿಡಿದೆದ್ದು ಮತ್ತೆ ಬಿಜೆಪಿ ಸೇರಿ ಸುದ್ದಿ ಮಾಡಿದ್ದಾರೆ. ಕಾಂಗ್ರೆಸ್‌ನಿಂದ ಖಮರುಲ್ ಇಸ್ಲಾಂ ಕಣಕ್ಕಿಳಿಯುವ ಸಾಧ್ಯತೆ ಇದೆ. ಗುಲ್ಬರ್ಗ ದಕ್ಷಿಣದಲ್ಲಿ ವಿಪ್ರರ ಸಮುದಾಯದ ಕೂಗಾಗಿ ಟಿಕೆಟ್ ಕೇಳುವಲ್ಲಿ ಮುಂಚೂಣಿಯಲ್ಲಿದ್ದ ಕೃಷ್ಣ ಕುಲ್ಕರ್ಣಿ ತಮಗೆ ಕೊನೆ ಕ್ಷಣದಲ್ಲಿ ಅದೆಲ್ಲಿ ಕಾಂಗ್ರೆಸ್ ಕೈ ಕೊಡುವುದೋ ಎಂಬ ಆತಂಕದಲ್ಲಿದ್ದಾರೆ. ವಿರೇಂದ್ರ ಪಾಟೀಲರ ಪುತ್ರ ಕೈಲಾಸ ಪಾಟೀಲರ ಹೆಸರು ಬಲವಾಗಿ ಕೇಳಿಬರುತ್ತಿರುವದರಿಂದ ಕೃಷ್ಣಾಜಿ ಬಿಎಸ್‌ಆರ್ ಪಕ್ಷದಿಂದ ಸ್ಪರ್ಧಿಸುವ ಒಲವು ತೋರುತ್ತಿದ್ದಾರೆ. ಜೆಡಿಎಸ್‌ನಿಂದ ಅರುಣಾ ಪಾಟೀಲರ ಪುತ್ರ ದತ್ತು ಪಾಟೀಲ್‌ರನ್ನು ದಕ್ಷಿಣದಿಂದ ಅಖಾಡಕ್ಕಿಳಿಸುವ ಸಂಭವಗಳಿವೆ. ಅಫಜಲ್ಪೂರದಲ್ಲಿ ಕೆಜೆಪಿಯಿಂದ ಎಂ.ವೈ. ಪಾಟೀಲ, ಕಾಂಗ್ರೆಸ್‌ನಿಂದ ಮಾಲೀಕಯ್ಯ ಗುತ್ತೇದಾರರನ್ನು ಅಭ್ಯರ್ಥಿಯಾಗಿಸಿದೆ. ಆಳಂದದಲ್ಲಿ ಕೆಜೆಪಿ ಬಿ.ಆರ್. ಪಾಟೀಲರಿಗೆ ಕಣಕ್ಕಿಳಿಸಿದರೆ, ಜೆಡಿಎಸ್ ಸುಭಾಷ್ ಗುತ್ತೇದಾರ್‌ರೊಂದಿಗೆ ಚುನಾವಣೆ ಎದುರಿಸಲಿದೆ. ಸೇಡಂನಲ್ಲಿ ಕಾಂಗ್ರೆಸ್ ಡಾ. ಶರಣಪ್ರಕಾಶರನ್ನು ಕಣಕ್ಕಿಳಿಸಿದರೆ ಬಿಜೆಪಿ ಇಲ್ಲಿ ರಾಜಕುಮಾರ ಅವರನ್ನು ಕಣಕ್ಕಿಳಿಸುವ ಸಿದ್ಧತೆಯಲ್ಲಿದೆ. ಚಿತ್ತಾಪುರ ಮೀಸಲು ಕ್ಷೇತ್ರದಿಂದ ಕೇಂದ್ರ ಮಂತ್ರಿ ಮಲ್ಲಿಕಾರ್ಜು ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ, ಧರಂಸಿಂಗ್ ಪುತ್ರ ಡಾ. ಅಜಯ್ ಸಿಂಗ್ ಜೇವರ್ಗಿಯಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಜೇವರ್ಗಿಯಲ್ಲಿ ಬಿಜೆಪಿಯ ದೊಡ್ಡಪ್ಪಗೌಡ ನರಿಬೋಳ್, ಚಿತ್ತಾಪುರದಲ್ಲಿ ಕೆಜೆಪಿಯ ಸಿ. ಗುರುನಾಥ ಸ್ಪರ್ಧಿಸಲಿದ್ದಾರೆ.
-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.