ರಾಜಕೀಯ

ಲೋಕೇಶ್ವರ್ ಪರ ಅಲೆಗೆ ನಾಗೇಶ್ ತರಗೆಲೆ

Published On :

ಕ.ಪ್ರ. ವಾರ್ತೆ ಬೆಂಗಳೂರು ಮಾ.28-
ತಿಪಟೂರು ವಿಧಾನ ಸಭಾ ಕ್ಷೇತ್ರದ 21 ಕೆರೆಗಳಿಗೆ ನೀರು ತುಂಬಿಲ್ಲ, ಆದರೆ ಶಾಸಕ ಬಿ.ಸಿ. ನಾಗೇಶ್ ಜೇಬಿಗೆ ಮಾತ್ರ ಹಣ ನೀರಿನಂತೆ ಹರಿಯುತ್ತದೆ..!
ಇಂಥದೊಂದು ಮಾತು ಕ್ಷೇತ್ರದ ತುಂಬೆಲ್ಲ ಹರಿದಾಡುತ್ತಿದೆ. ಬಿ.ಎಸ್. ಯಡಿಯೂರಪ್ಪನವರ ಪ್ರಭಾವದಿಂದ ಲಿಂಗಾಯತ ಸಮುದಾಯದಪ್ರಾಬಲ್ಯ ಇರುವ ತಿಪಟೂರಿನಲ್ಲಿ ಗೆದ್ದು ಬಂದ ನಾಗೇಶ್ ಈ ಬಾರಿ ಮತದಾರರ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಸರ್ಕಾರದ ಅವಧಿ ಮುಗಿಯುವ ಹೊತ್ತಿಗೆ ನಾಗೇಶ್ ತೆರೆಮರೆಯಲ್ಲಿ ಎಸಗಿದ ಅವ್ಯವಹಾರಗಳು ಮತದಾರನ ಬಾಯಲ್ಲಿ ಬಹಿರಂಗವಾಗುತ್ತಿದೆ.
ಹೀಗಾಗಿ ಇದೇ ಮೊದಲ ಬಾರಿಗೆ ಕೆಜೆಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿರುವ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ ಪರವಾದ ಅಲೆ ಎದ್ದಿದೆ. ಹೊಸ ಮುಖಕ್ಕೆ ಅವಕಾಶ ನೀಡಲು ಮತದಾರರು ಕಾತರರಾಗಿರುವ ಹಿನ್ನೆಲೆಯಲ್ಲಿ ಲೋಕೇಶ್ವರ ಅವರ ಹಾದಿ ಸುಗಮವಾಗಿದೆ. ಇದಲ್ಲದೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದ ವೇಳೆ ತಿಪಟೂರು ಪುರಸಭೆಯ ಏಳು ಸ್ಥಾನಗಳು ಕೆಜೆಪಿ ಪಾಲಾಗಿದ್ದವು. ಇದಕ್ಕೆ ಲೋಕೇಶ್ವರ ಅವರ ಪ್ರಭಾವವೇ ಕಾರಣ.
ಕ್ಷೇತ್ರದಲ್ಲಿ ಲೋಕೇಶ್ವರ ಅವರು ಬಿರುಗಾಳಿಯಂತೆ ಪ್ರಚಾರ ಕೈಗೊಂಡಿದ್ದು, ಪ್ರಚಾರಕ್ಕೆ ಜನ ಸಿಗದೆ ನಾಗೇಶ್ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೋದಲ್ಲಿ ಬಂದಲ್ಲೆಲ್ಲ ನಾಗೇಶ್ ನಿಷ್ಕ್ರಿಯತೆಯೇ ಲೋಕೇಶ್ವರ ಪರ ಮತಗಳಾಗಿ ಪರಿವರ್ತನೆ ಆಗುತ್ತಿದೆ.  
ಓದುವುದೆಲ್ಲ ಕಾಶಿ ಕಾಂಡ, ತಿನ್ನುವುದು ಮಾತ್ರ ಮಸಿ ಕೆಂಡ ಎಂಬ ಮಾತಿನಂತೆ ಪ್ರಾಮಾಣಿಕತೆ ಮಾತನಾಡುವ ನಾಗೇಶ್ ಎಸಗಿದ ಅವ್ಯವಹಾರಕ್ಕೆ ಹೊನ್ನಾವಳ್ಳಿ ಏತ ನೀರಾವರಿ ಅವ್ಯವಹಾರವೇ ಪ್ರಧಾನ ಸಾಕ್ಷಿ ಎಂಬುದು ಮತದಾರರ ಅಭಿಪ್ರಾಯ.
30 ವರ್ಷಗಳಿಂದ ಜಾರಿಯಾಗದೇ ಉಳಿದಿದ್ದ ಈ ಯೋಜನೆಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಮತಿ ನೀಡಿದ್ದರು. ಆದರೆ ಶಾಸಕ ನಾಗೇಶ್ ಅವರ ನಿರ್ಲಕ್ಷ್ಯದಿಂದ ಕಾಮಗಾರಿಗೆ ಮೂರು ವರ್ಷ ತಡವಾಗಿ ಚಾಲನೆ ನೀಡಲಾಯಿತು. ನಗರಕ್ಕೆ ನೀರುಣಿಸುವ ಪ್ರಜ್ಞೆ ಶಾಸಕರಲ್ಲಿ ಜಾಗೃತವಾಗುವ ಹೊತ್ತಿಗೆ ಮಳೆಗಾಲ ಮುಗಿದು ಹೋಗಿತ್ತು. ಹೀಗಾಗಿ ಈ ಯೋಜನೆ ವ್ಯಾಪ್ತಿಗೆ ಒಳಪಡುವ 21 ಕೆರೆಗಳಲ್ಲಿ ಈ ಬಾರಿ ನೀರು ಸಂಗ್ರಹಿಸುವುದು ಸಾಧ್ಯವಾಗಲಿಲ್ಲ. ಆದರೆ ಭಾರಿ ಅವ್ಯವಹಾರ ನಡೆದಿದ್ದು ಮಾತ್ರ ಸುಳ್ಳಲ್ಲ ಎನ್ನುತ್ತಿದ್ದಾರೆ ಜನ.
ಒಳಚರಂಡಿ ಹಗರಣ: ಅದೇ ರೀತಿ ತಿಪಟೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 6 ಗ್ರಾಮಗಳ ಒಳಚರಂಡಿ ಕಾಮಗಾರಿಯಲ್ಲೂ ಭಾರಿ ಅವ್ಯವಹಾರ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿವೆ. ದುರಂತವೆಂದರೆ ಈ ಕಾಮಗಾರಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಇಲ್ಲದೇ ಆರಂಭಿಸಲಾಗಿತ್ತು. ಈ ಬಗ್ಗೆ ವಿರೋಧ ವ್ಯಕ್ತವಾದಾಗ ಪ್ರಕರಣ ಸುಪ್ರೀಂ ಕೋರ್ಟ್‌ವರೆಗೆ ಹೋಗಿತ್ತು. ಕೊನೆಗೂ ನಾಗೇಶ್ ಈ ಪ್ರಕರಣದಲ್ಲಿ ಹಿನ್ನಡೆ ಅನುಭವಿಸಿದ್ದರು. ಇದರಲ್ಲಿ ಸರ್ಕಾರದ ಹಿರಿಯ ಸಚಿವರೊಬ್ಬರ ಹಿತಾಸಕ್ತಿಯೂ ಇತ್ತು ಎನ್ನಲಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಇದೂ ಒಂದು ಮಹತ್ವದ ವಿಚಾರವಾಗಿ ಪರಿಣಮಿಸಲಿದೆ.
ಜಾಣ ಗುತ್ತಿಗೆ: ಪ್ರತಿಪಕ್ಷಗಳ ಪ್ರಕಾರ ನಾಗೇಶ್ ಅವರು ಇಷ್ಟೆಲ್ಲ ಅವ್ಯವಹಾರ ಎಸಗಿದರೂ ಅದು ಬೆಳಕಿಗೆ ಬಾರದೇ ಇರುವುದಕ್ಕೆ ಅವರು ಅನುಸರಿಸುತ್ತಿರುವ ಜಾಣ ಗುತ್ತಿಗೆ ನೀತಿಯೇ ಕಾರಣ ಎನ್ನಲಾಗಿದೆ. ಯಾವುದೇ ಪ್ರಮುಖ ಯೋಜನೆಗಳಿಗೆ ಸ್ಥಳೀಯ ಗುತ್ತಿಗೆದಾರರಿಗೆ ಟೆಂಡರ್ ಸಿಗದಂತೆ ನೋಡಿಕೊಳ್ಳುವಲ್ಲಿ ನಾಗೇಶ್ ಯಶಸ್ವಿಯಾಗುತ್ತಿದ್ದಾರೆ. ಹೀಗಾಗಿ ಯಾವುದೇ ಅವ್ಯವಹಾರಗಳು ಬೆಳಕಿಗೆ ಬರುತ್ತಿಲ್ಲ. ಆದರೂ ಈ ಬಗ್ಗೆ ಶೀಘ್ರದಲ್ಲೇ ಲೋಕಾಯುಕ್ತದಲ್ಲಿ ದೂರು ನೀಡಲು ಕ್ಷೇತ್ರದ ಕೆಲ ಬಿಜೆಪಿ ಮುಖಂಡರೇ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಠಕ್ಕೆ ಕೊಟ್ಟ ಹಣದಲ್ಲೂ ಖೋತಾ: ಇದೆಲ್ಲಕ್ಕಿಂತ ಮುಖ್ಯವಾಗಿ ಕೆರಗೋಡಿ-ರಂಗಾಪುರ ಸುಕ್ಷೇತ್ರದ 839ನೇ ಸಿದ್ದರಾಮ ಜಯಂತಿಗೆ ಸರ್ಕಾರ ಬಿಡುಗಡೆ ಮಾಡಿದ 2 ಕೋಟಿ ಅನುದಾನದಲ್ಲೂ ಅವ್ಯವಹಾರವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಪೈಕಿ ಕೇವಲ 12.5 ಲಕ್ಷ ಮಾತ್ರ ಅಭಿವೃದ್ಧಿ ಕಾರ್ಯಕ್ಕೆ ಬಳಕೆಯಾಗಿದ್ದು, ಉಳಿಕೆ ಹಣ ಎಲ್ಲಿ ಹೋಯಿತು ಎಂಬ ಪ್ರಶ್ನೆ ಕ್ಷೇತ್ರದ ಜನರನ್ನು ಕಾಡುತ್ತಿದೆ. ಒಟ್ಟಿನಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿ.ಸಿ.ನಾಗೇಶ್ ಗುಟ್ಟಾಗಿ ಎಸಗಿದ ಅವ್ಯವಹಾರಗಳು ರಟ್ಟಾಗಿದ್ದು, ಪ್ರಮುಖ ಚುನಾವಣಾ ವಸ್ತುವಾಗಿ ಪರಿಣಮಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.