ರೇಣು ಆಯ್ತು, ಈಗ ರಾಘು ಸರದಿ!
ನಾಯಕರ ವಿರುದ್ಧ ಬಹಿರಂಗವಾಗಿ ಟೀಕಿಸಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರನ್ನು ಒಂದೇ ಹೊಡೆತಕ್ಕೆ...

ಕ.ಪ್ರ. ವಾರ್ತೆ ಶಿವಮೊಗ್ಗ ಮಾ.28-
ನಾಯಕರ ವಿರುದ್ಧ ಬಹಿರಂಗವಾಗಿ ಟೀಕಿಸಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರನ್ನು ಒಂದೇ ಹೊಡೆತಕ್ಕೆ ಪಕ್ಷದ ಸದಸ್ಯತ್ವ ಹಾಗೂ ಸಚಿವ ಸ್ಥಾನದಿಂದ ಉಚ್ಚಾಟಿಸಿದ ಬಿಜೆಪಿಯ ಮುಂದಿನ ಬಲಿಗಾಗಿ ರಂಗ ಸಜ್ಜುಗೊಳ್ಳುತ್ತಿದೆ!
ಪ್ರಬಲ ಕೋಮಿನ ಪ್ರಬಲ ನಾಯಕನನ್ನೇ ಉಚ್ಛಾಟಿಸುವ ಮೂಲಕ ಮುಂದಿನ ಸವಾಲು ಎದುರಿಸಲು ಸಜ್ಜಾದ ಬಿಜೆಪಿ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ, ಸಂಸದ ಬಿ.ವೈ. ರಾಘವೇಂದ್ರ ಅವರಿಗೂ ಒಂದು ಶಾಕ್ ನೀಡುವ ಯತ್ನಕ್ಕೆ ಮುಂದಾಗುತ್ತಿದೆ.
'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಪಕ್ಷದ ಹಿರಿಯ ಮುಖಂಡರೊಬ್ಬರು, ಪಕ್ಷದ ರಾಜ್ಯ ಘಟಕ ರಾಘವೇಂದ್ರ ಅವರ ಮೇಲೆ ಕ್ರಮಕ್ಕೆ ಶಿಫಾರಸು ಮಾಡಿದೆ. ಕೇಂದ್ರದ ಸಂಸದೀಯ ಮಂಡಳಿ ವಿವಿಧ ಚಟುವಟಿಕೆಯಲ್ಲಿ ತೊಡಗಿದ್ದರಿಂದ ತೀರ್ಮಾನಕ್ಕೆ ಬಂದಿರಲಿಲ್ಲ. ಶೀಘ್ರವೇ ಪ್ರಕಟವಾಗುವ ಫಲಿತಾಂಶಕ್ಕೆ ಕಾದು ನೋಡಿ ಎಂದರು.
ಬಿಎಸ್‌ವೈ ಆತ್ಮಸ್ಥೈರ್ಯ ಕುಗ್ಗಿಸಲು ಕ್ರಮ: ಯಡಿಯೂರಪ್ಪನವರ ಆತ್ಮಸ್ಥೈರ್ಯ ಕುಗ್ಗಿಸಲು ರಾಘವೇಂದ್ರ ಅವರನ್ನು ಉಚ್ಚಾಟಿಸುವ ತಂತ್ರಕ್ಕೆ ಬಿಜೆಪಿ ಮುಂದಾಗಿದೆ. ಅಲ್ಲದೇ ಇಂಥ ಕ್ರಮಗಳು ಪಕ್ಷದ ಸಂಘಟನೆಗೂ ನೆರವಾಗಲಿದೆ ಎಂಬ ನಂಬಿಕೆಯೂ ಪಕ್ಷದ ನಾಯಕರಲ್ಲಿದೆ.
ಪಕ್ಷದಿಂದ ಉಚ್ಚಾಟಿಸಿದರೂ ರಾಘವೇಂದ್ರ ಅವರ ಸಂಸದ ಸ್ಥಾನಕ್ಕೆ ಅಡ್ಡಿಯಾಗುವುದಿಲ್ಲ. ಸಂಸದರಾಗಿ ಮುಂದುವರಿದು, ಕೆಜೆಪಿ ಸಂಘಟನೆಯಲ್ಲಿ ಅವರು ರಾಜಾರೋಷವಾಗಿಯೇ ತೊಡಗಬಹುದು. ಹೀಗಾಗಿ ಉಚ್ಚಾಟನೆಯ ಬದಲು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ರಾಘವೇಂದ್ರ ಅವರನ್ನು ಸಿಕ್ಕಿಸುವ ಯತ್ನವೂ ನಡೆಯುತ್ತಿದೆ.
ಕೆಜೆಪಿ ಚಟುವಟಿಕೆಯಲ್ಲಿ ರಾಘವೇಂದ್ರ ಅವರ ಪಾತ್ರ ಮತ್ತು ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಮುಖಂಡರು ಕಲೆ ಹಾಕಿರುವ ದಾಖಲೆಗಳನ್ನು ಪಕ್ಷದ ಕೇಂದ್ರ ಸಂಸದೀಯ ಮಂಡಳಿಗೂ ಆಗಾಗ ರವಾನಿಸಿದ್ದಾರೆ.
'ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ಕಾಣುವುದಿಲ್ಲವೇ? ನಾವು ಮಾಹಿತಿ ಕಲೆ ಹಾಕುತ್ತಿದ್ದೇವೆ. ಎಲ್ಲವನ್ನೂ ಗಂಭೀರವಾಗಿ ಗಮನಿಸಿ ಸೂಕ್ತ ಸಂದರ್ಭದಲ್ಲಿ ಉತ್ತರಿಸುತ್ತೇವೆ' ಎಂದು ಬಿಜೆಪಿ ನಾಯಕರೊಬ್ಬರು 'ಕನ್ನಡಪ್ರಭ' ತಿಳಿಸಿದ್ದಾರೆ.
ರಾಘವೇಂದ್ರ ಏನು ಮಾಡ್ತಿದ್ದಾರೆ?: ಬಿಜೆಪಿ ಚಾಪೆ ಕೆಳಗೆ ನುಸುಳಿದರೆ, ರಾಘವೇಂದ್ರ ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಬುಧವಾರ ಯಡಿಯೂರಪ್ಪ ಶಿಕಾರಿಪುರ ತಾಲೂಕಿನ 14 ಹಳ್ಳಿಗಳನ್ನು ಸುತ್ತಿದಾಗ, ಅವರೊಂದಿಗೆ ಇವರೂ ಇದ್ದರು. ಆದರೆ, ಪ್ರಚಾರ ಸಭೆಯಲ್ಲಿ ಮಾತ್ರ ಪಾಲ್ಗೊಳ್ಳಲಿಲ್ಲ. ಬದಲಾಗಿ ಸಭೆ ನಡೆಯುತ್ತಿದ್ದ ಸ್ಥಳದಲ್ಲಿ ಕಾರಿನಲ್ಲೇ ಕುಳಿತು ಕಾರ್ಯತಂತ್ರ ರೂಪಿಸುತ್ತಿದ್ದರು.
ಕೆಜೆಪಿ ಹುಟ್ಟಿದ ಆರಂಭದಲ್ಲಿ ಕೆಲವು ಸಮಾವೇಶ, ಸಭೆಗಳಲ್ಲಿ ಕಾಣಿಸಿಕೊಂಡಿದ್ದ ರಾಘವೇಂದ್ರ ಮತ್ತೆ ಪರದೆ ಹಿಂದಿನ ಚಟುವಟಿಕೆ ನಡೆಸಿದ್ದೇ ಹೆಚ್ಚು. ಇನ್ನೊಂದೆಡೆ ಶಿಕಾರಿಪುರದಲ್ಲಿ ಬಿರುಸಿನ ಚಟುವಟಿಕೆ ನಡೆಸಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಪಕ್ಷ ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಅವರ ಪಕ್ಷದ ನಾಯಕರು ಹೇಳುತ್ತಾರೆ. ಸೂಕ್ತ ಸಂದರ್ಭದಲ್ಲಿ ಅವರೂ ಕೆಜೆಪಿ ಸೇರುತ್ತಾರೆನ್ನುತ್ತಿದ್ದಾರೆ.
ತುರ್ತು ಕ್ರಮ ಆಗಬೇಕು: ರಾಘವೇಂದ್ರ ವಿರುದ್ಧ ತಕ್ಷಣವೇ ಶಿಸ್ತು ಕ್ರಮ ಕೈಗೊಂಡರೆ ಮಾತ್ರ ಸೂಕ್ತ ಸಂದೇಶ ರವಾನೆಯಾದಂತೆ ಆಗುತ್ತದೆ. ಶಿಸ್ತಿನ ಪಕ್ಷವೆಂಬ ಹೆಗ್ಗಳಿಕೆಗೂ ಅರ್ಥ ಬರುತ್ತದೆ ಎಂಬುದು ಬಿಜೆಪಿ ಶಿವಮೊಗ್ಗ ಜಿಲ್ಲಾ ಘಟಕದ ಮುಖಂಡರ ಅಭಿಪ್ರಾಯ.
- ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


