ಯಾದಗಿರಿಯಲ್ಲಿ ಕಾಂಗ್ರೆಸ್ ಕಸರತ್ತು
ಕ.ಪ್ರ. ವಾರ್ತೆ ಯಾದಗಿರಿ ಮಾ.28-
ರಾಜಕೀಯ ಜಿದ್ದಾಜಿದ್ದಿಗೆ ಹೆಸರಾಗಿರುವ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ಹೆಚ್ಚಾಗಿದೆ. ಕೆಜೆಪಿ, ಜೆಡಿಎಸ್ ಹಾಗೂ ಬಿಎಸ್‌ಆರ್ ಖಾತೆ ತೆರೆಯಲು ಕಸರತ್ತು ನಡೆಸುತ್ತಿದ್ದರೆ, ಬಿಜೆಪಿ ಅಭ್ಯರ್ಥಿಗಳಿಗಾಗಿ ಕಸರತ್ತು ಇನ್ನೂ ನಡೆಯುತ್ತಿದೆ.
2008ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಲೆ ಇದ್ದರೂ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ 3ರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಸುರಪುರದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಿದ್ದರು. ಆದರೆ ಈ ಬಾರಿ ಕಾಂಗ್ರೆಸ್ ಅಲೆ ಜೋರಾಗಿರುವುದರಿಂದ ಆ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಪೈಪೋಟಿ ಶುರುವಾಗಿದೆ.
ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಮಾಲಕರೆಡ್ಡಿ ಹಾಗೂ ಶಹಾಪುರದಲ್ಲಿ ಕಾಂಗ್ರೆಸ್ ಶಾಸಕ ಶರಣಬಸವಪ್ಪಗೌಡ ದರ್ಶನಾಪುರ ಅವರಿಗೆ ಈ ಬಾರಿಯೂ ಟಿಕೆಟ್ ನಿಶ್ಚಿತ. ಗುರುಮಠಕಲ್ ಕ್ಷೇತ್ರದ ಶಾಸಕ ಬಾಬುರಾವ ಚಿಂಚನಸೂರ ಸ್ವಪಕ್ಷೀಯರಿಂದಲೇ ವಿರೋಧ ಎದುರಿಸುತ್ತಿದ್ದು, ಮಾಜಿ ಎಂಎಲ್‌ಸಿ ಚೆನ್ನಾರೆಡ್ಡಿ ಪಾಟೀಲ ತುನ್ನೂರ ಹೆಸರು ಕೇಳಿಬರುತ್ತಿದೆ. ಆದ್ದರಿಂದ ಚಿಂಚನಸೂರ ಟಿಕೆಟ್‌ಗಾಗಿ ದೆಹಲಿಯಲ್ಲೇ ಠಿಕಾಣಿ ಹೂಡಿದ್ದಾರೆ. ಸುರಪುರ ಕ್ಷೇತ್ರದಲ್ಲಿ ಈ ಬಾರಿ ಮಾಜಿ ಹಾಗೂ ಹಾಲಿ ಶಾಸಕರ ನಡುವೆ ಕೈ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದೆ. ರಾಜುಗೌಡ ಹಾಗೂ ರಾಜಾ ವೆಂಕಟಪ್ಪ ನಾಯಕ ಅವರು ಕಾಂಗ್ರೆಸ್ ಟಿಕೆಟ್‌ಗಾಗಿ ದೆಹಲಿಯಲ್ಲೇ ಕುಳಿತು ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ಸುರಪುರ ಅಭ್ಯರ್ಥಿಗಾಗಿ ಕೆಜೆಪಿ ಹುಡುಕಾಟ: ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಕೆಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಯಾದಗಿರಿಗೆ ಡಾ. ವೀರಬಸವಂತರೆಡ್ಡಿ ಮುದ್ನಾಳ, ಗುರುಮಠಕಲ್‌ಗೆ ವೆಂಕಟರೆಡ್ಡಿ ಮುದ್ನಾಳ, ಶಹಾಪುರದಲ್ಲಿ ಗುರು ಪಾಟೀಲ ಶಿರವಾಳ ಸ್ಪರ್ಧಿಸುತ್ತಿದ್ದಾರೆ. ಈ ಮೂವರೂ ಹಿಂದೆ ಬಿಜೆಪಿಯಲ್ಲಿದ್ದವರು. ಸುರಪುರದಲ್ಲಿ ಮಾತ್ರ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆದಿದೆ.
ಬಿಜೆಪಿಯ ಸ್ಥಿತಿಗತಿ: ಗುರುಮಠಕಲ್ ಕ್ಷೇತ್ರದಿಂದ ಗಿರೀಶ್ ಮಟ್ಟೆಣ್ಣವರ, ಸುರಪುರದಿಂದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ, ಶಹಾಪುರದಿಂದ ಜಿಲ್ಲಾಧ್ಯಕ್ಷ ವೀರನಗೌಡ ಮಲ್ಲಾಬಾದಿ ಅವರ ಹೆಸರು ಅಂತಿಮಗೊಂಡಿವೆ ಎನ್ನಲಾಗುತ್ತಿದೆ. ಗಿರೀಶ್ ಮಟ್ಟೆಣ್ಣವರ್ ಮೂರು ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿದ್ದು ವರವಾಗುವ ಸಾಧ್ಯತೆಯಿದೆ. ಯಾದಗಿರಿ ಕ್ಷೇತ್ರದಲ್ಲಿ ಬಿಜೆಪಿಗೆ ಹೊಸ ಮುಖ ಅನಿವಾರ್ಯವಾಗಿದೆ. ದೇವರಾಜ ನಾಯಕ, ಡಾ. ವೆಂಕಟೇಶ ಗಡ್ಡಿಮನಿ, ಸಿದ್ದಾರೆಡ್ಡಿ ಬಲಕಲ್ ಹೆಸರು ಕೇಳಿಬರುತ್ತಿದೆ. ಜೆಡಿಎಸ್‌ನಿಂದ ಮುಸ್ಲಿಂ ಸಮುದಾಯದ ಮತ ಹೆಚ್ಚಿರುವ ಯಾದಗಿರಿಯಲ್ಲಿ ಎ.ಸಿ. ಕಾಡೂರ ಸೂಕ್ತವೋ ಅಥವಾ ರೆಡ್ಡಿಗಳಿಗೆ ಸೆಡ್ಡು ಹೊಡೆಯಲು ಆ ಸಮಾಜಕ್ಕೆ ಸೇರಿದ ಶ್ರೀನಿವಾಸರೆಡ್ಡಿ ಚೆನ್ನೂರ ಅವರಿಗೆ ಟಿಕೆಟ್ ನೀಡಬೇಕೋ ಎಂಬ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಬಿಎಸ್ಸಾರ್ ಕಾಂಗ್ರೆಸ್ ಕೂಡ ಖಾತೆ ತೆರೆಯಲು ಕಸರತ್ತು ಮಾಡುತ್ತಿದೆ. ಯಾದಗಿರಿಯಲ್ಲಿ ಮೌಲಾಲಿ ಅನಪುರ, ಶಹಾಪುರದಲ್ಲಿ ಶಂಕ್ರಣ್ಣ ವಣಿಕ್ಯಾಳ, ಸುರಪುರದಲ್ಲಿ ರಾಜಾ ಕೃಷ್ಣಪ್ಪ ನಾಯಕ ಹೆಸರು ಕೇಳಿಬರುತ್ತಿದೆ. ಗುರುಮಠಕಲ್‌ನಲ್ಲಿ ಅಂಬರೀಶ ರಾಠೋಡ ಹಾಗೂ ಬಾಬು ಚವ್ಹಾಣ ನಡುವೆ ಪೈಪೋಟಿ ಏರ್ಪಟ್ಟಿದೆ.
-ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

