'ಬೆಲ್ಲ'ದ ಹ್ವಾದಮ್ಯಾಲ ರುಚಿ ಎಲ್ಲದ?
ರಾಜಕೀಯದಾಗ ಇನ್ನ ಟೇಸ್ಟ್ ಇರಂಗಿಲ್ಲ ನೋಡಪ ತಮ್ಮ ಅಂತ ಧಾರವಾಡದ ಮಂದಿಗ ಒಬ್ಬಾಂವ ಹೇಳ್ದ. ಅದ್ಯಾಕ ಇರಂಗಿಲ್ಲೋ ಮಂಗ್ಯಾನ ಮಗನ? ಅಂತ ಇನ್ನೊಬ್ಬ ಕೇಳ್ದ.
ನಮ್ ಶಾಸಕ್ರು, ಅದಾ ಬೆಲ್ಲದ್ ಸಾವ್ಕಾರ್ರು ರಾಜ್ಕೀಯ ನನಗ ಸಾಕಾಗೈತಿ. ನಾ ವೊಲ್ಲೆ, ರಿಟೈರ್‌ಮೆಂಟ ತಗಳಾವ ಅದೀನಿ ಅಂದಾರ್ರೀ. ಬೆಲ್ಲ ಹ್ವಾದಮ್ಯಾಲ ರಾಜ್ಕೀಯ ಹೆಂಗ್ ಟೇಸ್ಟ್ ಬರ್ತೈತಿ ಅಂದ ಒಬ್ಬಾಂವ. ಸುಮ್ಕ ನಿಂದ್ರಲೇ, ನಮ್ ಬೆಲ್ಲದ್ ಶ್ಯಾಣ ಅದಾರ. ಅವ್ರು ಕೆಜೆಪಿಗೆ ಜೈ ಅಂದ್ರು. ಆದ್ರ ಬರ್‌ಬರ್ತಾ ಕೆಜೆಪಿ ಹವಾ ಕಮ್ಮಿ ಆಗೈತಿ ಅಂತ ಗೊತ್ತಾಗಿದ್ದೇ ತಡ, ಸಿಎಂ ಶೆಟ್ಟರ್ ಮನಿ ಮುಂದ ಓಡ್ಯಾಡಾಕ್ ಶುರು ಮಾಡಿ ಬಿಜೆಪಿಗೆ ಜೈ ಅಂದ್ರು. ಎಲ್ಡೂ ಪಕ್ಷದ ಮುಖಂಡರ ಮುಂದ ಹೋಗಿ ನನ್ನ ಮಗನಿಗೆ ಟಿಕೆಟ್ ಕೊಡ್ಲಿಕ್ಕೇ ಬೇಕು ಅಂತಾ ಹಟಾ ಹಿಡಿಯಾಕ ಶುರು ಮಾಡಿದ್ರು. ಹುಬ್ಬಳ್ಯಾಗ ಪಶ್ಚಿಮ ಕ್ಷೇತ್ರದ ಬಿಜೆಪಿ ಟಿಕೆಟ್ ಬೆಲ್ಲದ ಅವರಿಗಾಗಲಿ ಅವರ ಮಗ ಅರವಿಂದಗಾಗಲಿ ಕೊಡ್ಲೇಬಾರ್ದು. ಕೆಜೆಪಿ-ಬಿಜೆಪಿ ಮಧ್ಯೆ ಓಡಾಡಿಕೊಂಡು ಬ್ಲಾಕ್‌ಮೇಲ್ ಮಾಡಾಕತ್ತಾರ, ಒಂದೊಮ್ಮಿ ಬೆಲ್ಲದ ಫ್ಯಾಮಿಲಿಗೆ ಟಿಕೆಟ್ ಕೊಟ್ರ ನೋಡ್ರೀ ಮತ್ತ ಎಂದು ಆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಶೆಟ್ಟರ್ ಹಾಗೂ ಜೋಶಿಯವರಿಗೆ ಖಡಕ್ ಅವಾಜ್ ಹಾಕಿದ್ರು. ಈ ವಿಷಯ ತಿಳಿದ ಚಂದ್ರಕಾಂತ ಬೆಲ್ಲದ ಸಾಹೆಬ್ರು ಯಡಿಯೂರಪ್ಪ ಅವರನ್ನ ಭೇಟಿಯಾಗಕಾ ಬೆಂಗಳೂರಿಗೆ ಹೋಗ್ಯಾರ್. ಅಲ್ಲಿ ಕಾದ್ರು ಯಡಿಯೂರಪ್ಪನವರ್ರು ಸಿಕ್ಕಿಲ್ಲ.
ಟಿಕೆಟ್ ಗಟ್ಟಿ ಮಾಡ್ಕೊಳ್ಳಾಕ ಹೋಗಿದ್ದ ಬೆಲ್ಲದ ಹೊಳ್ಳಿ ಸುಮ್ಕ್ ಧಾರವಾಡಕ್ಕೆ ಬಂದ್ರು. ಇಷ್ಟರ ಮಧ್ಯೆ ಮೋಹನ ಲಿಂಬಿಕಾಯಿ ಬುಧವಾರ ಬೆಳಗ್ಗೆ ಗುಟ್ಟಾಗಿ ಬೆಲ್ಲದ ಮನಿಗೆ ಹೋಗಿ ಅಜ್ಜಾರ ನೀವು ಒಲ್ಲೆ ಅಂದ್ರ ನಾನು ಕೆಜೆಪಿಯಿಂದ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೇನಿ ಹ್ಯಾಂಗ್ರಿ ಮತ್ತ ಅಂದ್ರು. ನಂದನನಗ ಖಬರ್ ಇಲ್ಲಾ. ಕೆಜೆಪಿ- ಬಿಜೆಪಿ ಮಾಡಾಕ ಹೋಗಿ ಮುಳಗಾಕತ್ತೇನಿ, ಅಂತಾದ್ರಾಗ ನೀವು ಹಿಂದ ಸರೀರಿ ಅಂತ ಬಂದೀರಲ್ಲಾ ಎಂದು ಗುಡುಗಿದ್ದಾರೆ.
ಇಷ್ಟಾಗಿದ್ದೇ ತಡಾ ಬೆಲ್ಲದ ಒಲ್ಲೆಪ್ಪೋ ಈರಾಜಕೀಯದಸಹವಾಸಾ ಅಂದು ಮಾಧ್ಯಮದವರನ್ನು ಕರೆಸಿ ರಾಜಕೀಯ ನಿವೃತ್ತಿ ಘೋಷಿಸಿ ಬಿಟ್ಯಾರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

