ಕೋಟೆ ಕಟ್ಟಲು 'ಕೈ' ಹವಣಿಕೆ
ಕ.ಪ್ರ. ವಾರ್ತೆ ಚಿತ್ರದುರ್ಗ ಮಾ.28-
ಚಿತ್ರದುರ್ಗ ಜಿಲ್ಲೆ ಆರಂಭದಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಕಳೆದ ಚುನಾವಣೆಯಲ್ಲಿ ಕ್ಷೇತ್ರ ಮರು ವಿಂಗಡಣೆ ಮತ್ತು ಟಿಕೆಟ್ ನೀಡುವಲ್ಲಿ ಉಂಟಾದ ಲೋಪದೋಷಗಳಿಂದಾಗಿ ಕಾಂಗ್ರೆಸ್ ಛಿದ್ರವಾಯಿತು.
ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ಚಿತ್ರದುರ್ಗ ನಗರಸಭೆ ಹೊರತುಪಡಿಸಿ ಉಳಿದ ಐದು ಸ್ಥಳೀಯ ಸಂಸ್ಥೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಮುಂಚೂಣಿಯ ಪಕ್ಷವಾಗಿ ಹೊರ ಹೊಮ್ಮಿದೆ. ಬಿಜೆಪಿ ಸರ್ಕಾರದಲ್ಲಿ ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವರಾಗದೆ ಹೊರಗಿನವರೇ ಆಗಿದ್ದರಿಂದ ಜಿಲ್ಲೆಯ ಜನರ ಸಮಸ್ಯೆಗಳನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗದ್ದರಿಂದ ಸಮರ್ಪಕ ಆಡಳಿತ ನಡೆಯಲಿಲ್ಲ. ಹಾಗಾಗಿ ಇದರ ಲಾಭ ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ವಿಳಂಬವಾದರೆ ಭಿನ್ನಾಭಿಪ್ರಾಯ ಉಂಟಾಗಿ ಪಕ್ಷದವರೇ ಬಂಡಾಯ ಅಭ್ಯರ್ಥಿಗಳಾಗಿ ನಿಲ್ಲಬಹುದು. ಆದರೆ, ಎರಡು ಬಾರಿ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಿರುವ ಕಾಂಗ್ರೆಸ್ ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಡಬಹುದು ಎಂಬ ನಿರೀಕ್ಷೆಯಿದೆ.
ಜಾತ್ಯತೀತ ಜನತಾದಳ ಜಿಲ್ಲೆಯಲ್ಲಿ ನಿರಂತರವಾಗಿ ಒಬ್ಬ ಶಾಸಕನನ್ನು ಕಾಯ್ದುಕೊಂಡು ಬಂದಿದೆ. ಹಿರಿಯೂರಿನಲ್ಲಿ ಡಿ. ಮಂಜುನಾಥ್ ಅವರು ಕಾಂಗ್ರೆಸ್‌ನ ಕೆ.ಎಚ್. ರಂಗನಾಥ್ ವಿರುದ್ಧ ಗೆಲವು ಸಾಧಿಸುತ್ತಿದ್ದವರು. ಕಳೆದ ಬಾರಿ ಚಿತ್ರದುರ್ಗದಲ್ಲಿ ಜೆಡಿಎಸ್‌ನ ಎಸ್.ಕೆ. ಬಸವರಾಜನ್ ಶಾಸಕರಾದರು. ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಚಿತ್ರದುರ್ಗ ನಗರಸಭೆಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಜೆಡಿಎಸ್ ವಿಧಾನಸಭಾ ಚುನಾವಣೆಯಲ್ಲೂ ಅಂಥದೇ ಪ್ರದರ್ಶನ ನೀಡುವ ಸಾಧ್ಯತೆಯಿದೆ. ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿ ವಿಧಾನ ಪರಿಷತ್ ಸದಸ್ಯರಾಗಿರುವ ಹಿರಿಯ ಮುಖಂಡ ಜಿ.ಎಚ್. ತಿಪ್ಪಾರೆಡ್ಡಿ ಅವರು ಹಿರಿಯೂರಿನಿಂದ ಜೆಡಿಎಸ್ ಪರವಾಗಿ ಸ್ಫರ್ಧಿಸುವ ಸಾಧ್ಯತೆಗಳ ಬಗ್ಗೆ ಜಿಲ್ಲೆಯಲ್ಲಿ ವದಂತಿಗಳಿವೆ. ಅದೇನಾದರೂ ನಿಜವಾದಲ್ಲಿ ಹಿರಿಯೂರಿನಲ್ಲಿ ತಿಪ್ಪಾರೆಡ್ಡಿ ಜೆಡಿಎಸ್ ಖಾತೆಯನ್ನು ಮತ್ತೆ ತೆರೆಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಬಿಜೆಪಿ ಕಷ್ಟದ ದಿನಗಳು: ಜಿಲ್ಲೆಯಲ್ಲಿ ಬಿಜೆಪಿ ಕಳೆದ ಬಾರಿ ಮಾತ್ರ ಖಾತೆ ತೆರೆಯಿತು. ಚಳ್ಳಕೆರೆ ಮತ್ತು ಹೊಳಲ್ಕೆರೆಯಲ್ಲಿ ಪಕ್ಷದ ಶಾಸಕರು ಆಯ್ಕೆಯಾದರು. ಈ ಬಾರಿ ಪರಿಸ್ಥಿತಿ ಬದಲಾಗಿದೆ. ಶಾಸಕರಾದ ತಿಪ್ಪೇಸ್ವಾಮಿ, ಚಂದ್ರಪ್ಪ ಬಿಜೆಪಿ ತ್ಯಜಿಸಿ ಕರ್ನಾಟಕ ಜನತಾ ಪಕ್ಷ ಸೇರಿದ್ದಾರೆ. ಹೀಗಾಗಿ ಬಿಜೆಪಿ ಈ ಬಾರಿ ಜಿಲ್ಲೆಯಲ್ಲಿ ಯಾವುದಾದರೂ ಕ್ಷೇತ್ರದಲ್ಲಿ ಗೆಲವು ಸಾಧಿಸುವುದೇ ಎಂಬುದೇ ಅನುಮಾನ. ಬಿಜೆಪಿ ಶಕ್ತಿ ಕುಂದಲು ಪಕ್ಷದಲ್ಲಿ ವರ್ಚಸ್ವಿ ನಾಯಕರಿಲ್ಲದಿರುವುದು ಪ್ರಮುಖ ಕಾರಣ. ಈ ಬಾರಿ ಕೆಜೆಪಿ ಮತ್ತು ಬಿಎಸ್‌ಆರ್ ಪಕ್ಷಗಳು ಹೊಸದಾಗಿ ಬಂದಿರುವುದರಿಂದ ಈ ಎರಡೂ ಪಕ್ಷಗಳು ಬಿಜೆಪಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣವಿದ್ದು, ಅದನ್ನು ಪಕ್ಷ ಹೇಗೆ ಸದುಪಯೋಗ ಪಡಿಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.
-ಕ.ಮ. ರವಿಶಂಕರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

