ಟಿಕೆಟ್ ಕಸರತ್ತು, ಬಂದಿಲ್ಲ ಗತ್ತು
ಕ.ಪ್ರ. ವಾರ್ತೆ ರಾಯಚೂರು ಮಾ.27-
ಟಿಕೆಟ್ ಪಡೆಯಲು ಪ್ರಭಾವದ ಬಳಕೆ. ಚುನಾವಣೆ ಸಮೀಪಿಸಿದರೂ ಅಂತಿಮಗೊಳ್ಳದ ಅಭ್ಯರ್ಥಿಗಳ ಹೆಸರು. ವೇಗ ಪಡೆಯದ ಪ್ರಚಾರ. ಕೆಲವರು ಟಿಕೆಟ್ಗಾಗಿಯೇ ವಲಸೆ ಹೋಗುವ ಭೀತಿ. ಗುಂಪುಗಾರಿಕೆ, ಭಿನ್ನಮತದ ಆತಂಕ ಎಲ್ಲ ಪಕ್ಷಗಳಲ್ಲೂ ಇದೆ.
ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳಲ್ಲಿ ಸದ್ಯದ ರಾಜಕೀಯ ಸ್ಥಿತಿಯಿದು. ಚುನಾವಣೆ ದಿನಾಂಕ ಘೋಷಣೆ ನಂತರ ಆಕಾಂಕ್ಷಿಗಳು ಟಿಕೆಟ್ಗೆ ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಟಿಕೆಟ್ ನೀಡಿಕೆ ಎಂದಿನಂತೆ ವಿಳಂಬ, ನಿಗೂಢ. ಜೆಡಿಎಸ್ ಅಭ್ಯರ್ಥಿಗಳ ಹೆಸರು ಕೆಲ ಕ್ಷೇತ್ರಗಳಲ್ಲಿ ಅಂತಿಮಗೊಳಿಸಿದ್ದರೂ ಘೋಷಿಸಿಲ್ಲ.
ತಲೆಬಿಸಿ: ಕಳೆದ ಬಾರಿ ಬಿಜೆಪಿಯಿಂದ ಗೆದಿದ್ದ ದೇವದುರ್ಗದ ಶಿವನಗೌಡ ನಾಯಕರನ್ನು ಹೊರತುಪಡಿಸಿ, ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ಜೆಡಿಎಸ್ನಿಂದ ಮತ್ತು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಕಾಂಗ್ರೆಸ್ನಿಂದ ಸ್ಪರ್ಧಿಸುವುದು ಖಚಿತವಾಗಿದೆ. ಬಿಜೆಪಿಗೆ ಮಾತ್ರ ಈ ಕ್ಷೇತ್ರಗಳಲ್ಲಿ ಅಭ್ಯರ್ಥಿ ಹುಡುಕಾಟದ ತಲೆ ಬಿಸಿ ಇದೆ.
ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳು ಸಾಮಾನ್ಯ, ಒಂದು ಎಸ್ಸಿ, ನಾಲ್ಕು ಕ್ಷೇತ್ರಗಳು ಎಸ್ಟಿಗೆ ಮೀಸಲು. ಸಾಮಾನ್ಯ ಮೀಸಲು ಕ್ಷೇತ್ರಗಳಾದ ರಾಯಚೂರು ಮತ್ತು ಸಿಂಧನೂರಿನಲ್ಲಿ ಸ್ಪರ್ಧೆಗೆ ತೀವ್ರ ಪೈಪೋಟಿಯಿದೆ. ಕಳೆದ ಬಾರಿ ದೇವದುರ್ಗ, ಲಿಂಗಸ್ಗೂರು ಮತ್ತು ಮಸ್ಕಿಯಲ್ಲಿ ಬಿಜೆಪಿ, ರಾಯಚೂರು, ರಾಯಚೂರು ಗ್ರಾಮೀಣ ಮತ್ತು ಮಾನವಿಯಲ್ಲಿ ಕಾಂಗ್ರೆಸ್, ಸಿಂಧನೂರಿನಲ್ಲಿ ಜೆಡಿಎಸ್ ಗೆದ್ದಿತ್ತು. ಜಿಲ್ಲಾ ಕಾಂಗ್ರೆಸ್ನಲ್ಲಿನ ಗುಂಪುಗಾರಿಕೆ, ಭಿನ್ನಮತದ ಮಧ್ಯೆಯೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಕಂಡಿದೆ. ಅದೇ ಸ್ಫೂರ್ತಿಯಲ್ಲಿ ಈ ಚುನಾವಣೆಗೆ ಸಜ್ಜಾಗಿದೆ.
ಮಸ್ಕಿಯಲ್ಲಿ ಮುಂದುವರಿದಿದೆ ಹುಡುಕಾಟ: ರಾಯಚೂರು ನಗರ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಪೈಪೋಟಿಗೆ ಮತ್ತು ದೇವದುರ್ಗದಲ್ಲಿ ಪಕ್ಷದ ದುಸ್ಥಿತಿಗೆ ಜೆಡಿಎಸ್ ಕಂಗೆಟ್ಟಿದೆ. ಆದರೆ ರಾಯಚೂರು ಗ್ರಾಮೀಣ, ಲಿಂಗಸ್ಗೂರು, ಮಾನವಿ ಮತ್ತು ಸಿಂಧನೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮವಾಗಿದ್ದರೂ ಪ್ರಕಟಿಸಿಲ್ಲ. ಮಸ್ಕಿಯಲ್ಲಿ ಹುಡುಕಾಟ ಸಾಗಿದೆ. ಜಿಲ್ಲೆಯಲ್ಲಿ ಈ ಚುನಾವಣೆ ಬಿಜೆಪಿಗೆ ಕಬ್ಬಿಣದ ಕಡಲೆ. ಸಿಎಂ ರಾಜಕೀಯ ಕಾರ್ಯದರ್ಶಿ ಶಿವನಗೌಡ ನಾಯಕ ಬಿಜೆಪಿ ತೊರೆಯುವುದಿಲ್ಲ ಎಂದಿದ್ದರೂ, ನಾಯಕರಿಗೆ ಅವರ ಮಾತಿನಲ್ಲಿ ನಂಬಿಕೆಯಿಲ್ಲ. ಆದರೂ ಬಿಜೆಪಿಗೆ ದೇವದುರ್ಗದಲ್ಲಿ ಸದ್ಯಕ್ಕೆ ಅವರೇ ಗತಿ. ಲಿಂಗಸ್ಗೂರು, ಮಸ್ಕಿ, ಮಾನವಿ ಮತ್ತು ಸಿಂಧನೂರಿನಲ್ಲಿ ಅಭ್ಯರ್ಥಿಗಳು ಅಂತಿಮಗೊಂಡಿಲ್ಲ. ರಾಯಚೂರು ನಗರ ಕ್ಷೇತ್ರದಲ್ಲಿ ಮಾಜಿ ಶಾಸಕ ಪಾಪಾರೆಡ್ಡಿಗೆ ತ್ರಿವಿಕ್ರಮ್ ಜೋಶಿ ಅವರಿಂದ ತೀವ್ರ ಪೈಪೋಟಿ ಇದೆ.
ಈಚೆಗೆ ಅಸ್ತಿತ್ವಕ್ಕೆ ಬಂದಿರುವ ಕೆಜೆಪಿ ಜಿಲ್ಲೆಯ ಕೆಲ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಉಳಿದೆಡೆ ಹುಡುಕಾಟ ನಡೆಸಿದೆ. ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಕಾಯುತ್ತಿದೆ. ಬಿಎಸ್ಪಿ ರಾಯಚೂರಿನಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಸಿಪಿಎಂಎಲ್ ಸಹ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇರಾದೆ ತೋರಿದೆ. ಜಿಲ್ಲೆಯ ರಾಜಕೀಯ ಸದ್ಯ ಬೆಂಗಳೂರಿಗೆ ಶಿಫ್ಟ್ ಆಗಿದೆ. ಸ್ಪರ್ಧೆ ಖಚಿತವಾಗಿದ್ದರೂ ಕೆಲವರು ನೀತಿ ಸಂಹಿತೆ ಭೀತಿಯಲ್ಲಿದ್ದಾರೆ.
-ಜಗನ್ನಾಥ ಆರ್.ದೇಸಾಯಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

