ಕೋಮು ಸಾಮರಸ್ಯ ಕದಡಲಿದೆ ಬಿಜೆಪಿ: ದಿಗ್ವಿಜಯ್
ಕ.ಪ್ರ. ವಾರ್ತೆ, ಬೆಂಗಳೂರು, ಜು.2-
ರಾಜ್ಯದಲ್ಲಿ ಹೀನಾಯವಾಗಿ ಸೋತಿರುವ ಬಿಜೆಪಿ ಮತ್ತೆ ಮೇಲೆದ್ದು ಬರುವುದಕ್ಕಾಗಿ ಕೋಮು ಸಾಮರಸ್ಯ ಕದಡುವ ಪ್ರಯತ್ನ ಮಾಡಲಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ರಾಜ್ಯದಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.
ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದೆ ಅಧಿಕಾರ ನಡೆಸಿದ ಬಿಜೆಪಿ ತನ್ನದೇ ಆದ ತಪ್ಪುಗಳಿಂದ ಹೀನಾಯವಾಗಿ ಸೋತಿದೆ. ಕೋಮು ವಿಚಾರ ಇಲ್ಲದೇ ಇದ್ದರೆ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಿ ಮತ್ತೆ ರಾಜ್ಯದಲ್ಲಿ ಗೆಲ್ಲುವ ಪ್ರಯತ್ನಕ್ಕೆ ಕೈಹಾಕಲಿದೆ ಎಂದು ಅವರು ಆರೋಪಿಸಿದರು. ಆದ್ದರಿಂದ ಕೋಮುವಾದಿ ಸಂಘಟನೆಗಳ ವಿರುದ್ಧ ಸರ್ಕಾರ ಕಠಿಣವಾದ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಹಿಂದೂ ಮಹಾಸಭಾ, ಸಂಘ ಮುಂತಾದ ಕೋಮು ಸಂಘಟನೆಗಳ ಬಗ್ಗೆ ಜಾಗ್ರತೆಯಿಂದ ಇರಬೇಕು. ಅದು ಹಿಂದೂ ಸಂಘಟನೆಯಾಗಲಿ, ಮುಸ್ಲಿಂ ಸಂಘಟನೆಯಾಗಲಿ ಸಾಮರಸ್ಯಕ್ಕೆ ಧಕ್ಕೆ ತರಲು ಅವಕಾಶ ಮಾಡಿಕೊಡಬಾರದು ಎಂದು ದಿಗ್ವಿಜಯ್ ಸಿಂಗ್ ಹೇಳಿದರು. ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕೋಮುವಾದಿ ಶಕ್ತಿಗಳು ತಲೆ ಎತ್ತಲು ಅವಕಾಶ ನೀಡುವುದಿಲ್ಲ. ಮತೀಯ ಗಲಭೆ ಸೃಷ್ಟಿಸುವ ಮೂಲಕ ಕೋಮು ಸಾಮರಸ್ಯ ಹಾಳು ಮಾಡಲು ಬಿಜೆಪಿ ಪ್ರಯತ್ನಿಸಿದರೆ ಅದಕ್ಕೆ ತಡೆ ಹಾಕುತ್ತೇವೆ. ಈ ನಿಟ್ಟಿನಲ್ಲಿ ಅಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಕೋಮು ಸಂಘರ್ಷ ನಡೆದರೆ ಅದಕ್ಕೆ ಸಂಬಂಧಿಸಿದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

