ರಾಜಕೀಯ

ಗದಗದಲ್ಲಿ ಗುದ್ದಾಟ

ಗದಗ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ. ಕೆಜೆಪಿ ಎಂಟ್ರಿಯಿಂದ ಲೆಕ್ಕಾಚಾರದಲ್ಲಿ ಏರಿಳಿತವಾಗುವ ಸಾಧ್ಯತೆ ಇದೆ. ಅದೇನು ಅಂತಾ ಗೊತ್ತಾಗಬೇಕಾದರೆ ಇದನ್ನೆಲ್ಲಾ ಓದಿ..

Published On :

ರೋಣದಲ್ಲಿ ಯಾರ ಆರೋಹಣ?
ಗದಗ ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡ ಕ್ಷೇತ್ರ ರೋಣ. ಹಾಲಿ ಶಾಸಕ ಬಿಜೆಪಿಯ ಕಳಕಪ್ಪ ಬಂಡಿ. ಈ ಬಾರಿಯೂ ಅವರೇ ಬಿಜೆಪಿ ಹುರಿಯಾಳು. ಕಾಂಗ್ರೆಸ್‌ನಿಂದ ಕಳೆದ ಬಾರಿ ಸೋತಿದ್ದ ಜಿ.ಎಸ್. ಪಾಟೀಲ್ ಸ್ಪರ್ಧಿಸುವ ಸಾಧ್ಯತೆ ಇದೆ. ಜೆಡಿಎಸ್‌ನಿಂದ ಇತ್ತೀಚೆಗೆ ಕಾಂಗ್ರೆಸ್ ಬಿಟ್ಟು ಬಂದಿರುವ ಹೇಮಗಿರೀಶ ಹಾವಿನಾಳ, ಎಚ್.ಎಸ್. ಸೋಂಪೂರ, ಮಲ್ಲಿಕಾರ್ಜುನ ಬೂದಿಹಾಳ ಹೆಸರು ಕೇಳಿ ಬರುತ್ತಿವೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ವೈ.ಎನ್.ಗೌಡರ, ಮೋಹನ ರಾಯಭಾಗಿ, ರೋಣದ ಶಿವಣ್ಣ ನವಲಗುಂದ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಕೆಜೆಪಿ ಅತೃಪ್ತರನ್ನು ಸೆಳೆಯುವ ಕೆಲಸ ಮಾಡುತ್ತಿದೆ.

ನರಗುಂದದಲ್ಲಿ ನಾಯಕರ್ಯಾರು?
ರೈತ ಹೋರಾಟಕ್ಕೆ ಸಾಕ್ಷಿಯಾದ ನೆಲ ನರಗುಂದ ಕ್ಷೇತ್ರ. ಹಾಲಿ ಶಾಸಕ ಬಿಜೆಪಿಯ ಸಿ.ಸಿ. ಪಾಟೀಲ್. ಈಗ ಕೆಜೆಪಿಯತ್ತ ಮುಖ ಮಾಡಿದ್ದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ಅವರು ಕೆಜೆಪಿ ಸೇರಿದರೆ ಅವರೇ ಆ ಪಕ್ಷದ ಹುರಿಯಾಳು. ಆಗ ಬಿಜೆಪಿ ಅಭ್ಯರ್ಥಿಗಳ ಹುಡುಕಾಟ ಆರಂಭಿಸಬೇಕಾಗುತ್ತದೆ. ಕಾಂಗ್ರೆಸ್‌ನಿಂದ ಕಳೆದ ಬಾರಿ ಟಿಕೆಟ್ ಸಿಗಲಿಲ್ಲವೆಂದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಆರ್. ಯಾವಗಲ್, ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಕೆಂಗಾರ, ದಶರಥ ಗಾಣಿಗೇರ, ಪ್ರೊ.ಎಸ್.ಎನ್. ಕಾತರಕಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಎಚ್.ಎಸ್. ಶಿವನಗೌಡ್ರ, ದೇಸಾಯಿಗೌಡ ಪಾಟೀಲ, ಲೀಲಕ್ಕ ಹಸಬಿ ಹೆಸರು ಕೇಳಿ ಬರುತ್ತಿವೆ. ಜೆಡಿಎಸ್‌ನಲ್ಲಿ ಪ್ರೊ. ಹನುಮಂತಗೌಡ ಕಲ್ಮನಿ, ವೆಂಕನಗೌಡ ಗೋವಿಂದಗೌಡ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ.

ಗದಗದಲ್ಲಿ ಹಳೆ ಹುಲಿಗಳ ಕಾಳಗ
ಗದಗ ವಿಧಾನಸಭೆ ಕ್ಷೇತ್ರ ಹಳೆ ಹುಲಿಗಳ ಕಾದಾಟಕ್ಕೆ ಹೆಸರುವಾಸಿ. ಹಾಲಿ ಶಾಸಕ ಬಿಜೆಪಿಯ ಶ್ರೀಶೈಲಪ್ಪ ಬಿದರೂರು. ಈಗ ಅವರು ಕೆಜೆಪಿ ಸೇರುವ ತವಕದಲ್ಲಿದ್ದಾರೆ. ಕೆಜೆಪಿಯಿಂದ ಅವರೇ ಹುರಿಯಾಳು. ಹೀಗಾಗಿ ಬಿಜೆಪಿಯಿಂದ ಎಸ್.ಬಿ. ಸಂಕಣ್ಣವರ, ವಿಜಯಕುಮಾರ ಗಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀಕಾಂತ ಖಟವಟೆ, ಸಂಗಮೇಶ ದುಂದೂರ ಹೆಸರು ಕೇಳಿ ಬರುತ್ತಿವೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಎಚ್.ಕೆ. ಪಾಟೀಲ್ ಸ್ಪರ್ಧಿಸುವುದು ಖಚಿತ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಅನಿಲ್ ಮೆಣಸಿನಕಾಯಿ ಹೆಸರು ಈಗಾಗಲೇ ಘೋಷಿಸಲಾಗಿದೆ. ಜೆಡಿಎಸ್‌ನಿಂದ ಜಾಕೀರ ಮುಜಾವರ ಹೆಸರು ಕೇಳಿ ಬರುತ್ತಿದೆ.

ಶಿರಹಟ್ಟಿಯಲ್ಲಿ ಯಾರು ಗಟ್ಟಿ?
ಶಿರಹಟ್ಟಿ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ರಾಮಣ್ಣ ಲಮಾಣಿ. ಬಿಎಸ್‌ವೈ ಆಪ್ತರಾಗಿದ್ದರಿಂದ ಈ ಬಾರಿ ಕೆಜೆಪಿಯಿಂದ ಸ್ಪರ್ಧಿಸುವುದು ಖಚಿತವಾಗಿದೆ. ಹೀಗಾಗಿ ಬಿಜೆಪಿಯಿಂದ ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್‌ನಿಂದ ಕಳೆದ ಬಾರಿ ಸೋತಿದ್ದ ಎಚ್.ಆರ್. ನಾಯಕ ಸೇರಿದಂತೆ 16 ಜನ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸು ಹೊಂದಿರುವ ಸಣ್ಣೀರಪ್ಪ ಹಳ್ಳೆಪ್ಪನವರ ಕುಟುಂಬದ ಸೊಸೆ ಜಯಶ್ರೀ ಹಳ್ಳೆಪ್ಪನವರ ಹೆಸರು ಘೋಷಿಸಲಾಗಿದೆ. ಜೆಡಿಎಸ್‌ನಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದು ಹೆಸರು ಬಹಿರಂಗಗೊಳಿಸಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.