ರಾಜಕೀಯ

ಬೀ'ದರ್‌ಬಾರ್‌' ಯಾರ್ದು?

Published On :

ಭಾಲ್ಕಿಯಲ್ಲಿ 'ಖಂಡ್ರೆ' ಕಾಳಗ
ಭಾಲ್ಕಿ ವಿಧಾನಸಭಾ ಕ್ಷೇತ್ರ ಖಂಡ್ರೆ ಸಹೋದರರ ಕಾಳಗಕ್ಕೆ ಹೆಸರುವಾಸಿ. ಎರಡು ದಶಕಗಳಿಂದ ಮಾಜಿ ಸಚಿವ ಭೀಮಣ್ಣ ಖಂಡ್ರೆ ಪುತ್ರರು ಹಾಗೂ ಸಹೋದರನ ಪುತ್ರನ ಮಧ್ಯದ ರಾಜಕೀಯ ತಿಕ್ಕಾಟವೇ ಎಲ್ಲಕ್ಕೂ ಲೆಕ್ಕ ಎಂಬಂತಿತ್ತು. ಸದ್ಯ ಕಾಂಗ್ರೆಸ್‌ನ ಈಶ್ವರ ಖಂಡ್ರೆ ಹಾಲಿ ಶಾಸಕ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಪ್ರಕಾಶ ಖಂಡ್ರೆ ಅವರನ್ನು ಸೋಲಿಸಿದ್ದರು. ಕೆಜೆಪಿ ಅಭ್ಯರ್ಥಿ ಡಿ.ಕೆ ಸಿದ್ರಾಮ್ ಅವರು ಈಶ್ವರ ಖಂಡ್ರೆ ಹಾಗೂ ಪ್ರಕಾಶ ಖಂಡ್ರೆ ಮಧ್ಯ ನುಸುಳಿಕೊಂಡಿದ್ದಾರೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದ್ದರಿಂದ ಲಿಂಗಾಯತರೊಂದಿಗೆ ಮರಾಠ ಸಮುದಾಯದವರೂ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಬಿಜೆಪಿಯಿಂದ 1999, 2004ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಪ್ರಕಾಶ ಖಂಡ್ರೆ ಈ ಬಾರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯಬಹುದು. ಜೆಡಿಎಸ್, ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಗಳ ಹುಡುಕಾಟದಲ್ಲಿವೆ.

ಬೀದರ್‌ನಲ್ಲಿ ಯಾರ ಖದರ್?
ಒಂದೇ ಅವಧಿಯಲ್ಲಿ 2 ಚುನಾವಣೆ ಕಂಡ ಬೀದರ್ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ. ಹಾಲಿ ಶಾಸಕ ಕಾಂಗ್ರೆಸ್‌ನ ರಹೀಮ್ ಖಾನ್. 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಗುರುಪಾದಪ್ಪ ನಾಗಮಾರಪಳ್ಳಿ ಗೆಲವು ಸಾಧಿಸಿದ್ದರು. ಬಳಿಕ ಒಂದು ವರ್ಷದ ಅಂತರದಲ್ಲಿ ಎದುರಾದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರಾಜಿನಾಮೆ ನೀಡಿದರು. ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಗಮಾರಪಳ್ಳಿ ಪುತ್ರ ಸೂರ್ಯಕಾಂತ ನಾಗಮಾರಪಳ್ಳಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ರಹೀಮ್ ಖಾನ್ ವಿರುದ್ಧ ಸೋತಿದ್ದರು. ಕೆಜೆಪಿಯಿಂದ ಗುರುಪಾದಪ್ಪ ನಾಗಮಾರಪಳ್ಳಿ, ಕಾಂಗ್ರೆಸ್‌ನಿಂದ ಮತ್ತೊಮ್ಮೆ ರಹೀಮ್ ಖಾನ್ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಬಿಜೆಪಿಯಿಂದ ಹಾಲಿ ಎಂಎಲ್‌ಸಿ ರಘುನಾಥ ಮಲ್ಕಾಪುರೆ, ಮಾಜಿ ಶಾಸಕ ರಮೇಶಕುಮಾರ್ ಪಾಂಡೆ ಹೆಸರು ಕೇಳಿ ಬರುತ್ತಿವೆ. ಜೆಡಿಎಸ್, ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟದಲ್ಲಿವೆ.

ಹುಮನಾಬಾದ್ ಯಾರಿಗೆ ನಸೀಬ್?
ಹುಮನಾಬಾದ್ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್‌ನ ರಾಜಶೇಖರ ಪಾಟೀಲ್. 2008ರಲ್ಲಿ ಬಿಜೆಪಿ ಅಭ್ಯರ್ಥಿ ಸುಭಾಷ ಕಲ್ಲೂರ್ ವಿರುದ್ಧ ಜಯ ಗಳಿಸಿದ್ದರು. 2003ರಲ್ಲಿ ಜೆಡಿಎಸ್‌ನ ದಿ. ಮಿರಾಜುದ್ದೀನ್ ಪಟೇಲ್ ವಿರುದ್ಧ ರಾಜಶೇಖರ ಜಯ ಗಳಿಸಿದ್ದರೆ 2004ರಲ್ಲಿ ಅದೇ ಮಿರಾಜುದ್ದೀನ್ ವಿರುದ್ಧ ಸೋಲುಂಡಿದ್ದರು. ಈಗ ಚಿತ್ರಣ ಬದಲಾಗಿದ್ದು ಬಿಜೆಪಿಯ ಸುಭಾಷ ಕಲ್ಲೂರ್ ಕೆಜೆಪಿ ಸೇರಿದ್ದು ಈ ಬಾರಿ ಚುನಾವಣಾ ಕಣದಿಂದ ಹೊರಗಿದ್ದಾರೆ. ಬಿಜೆಪಿ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದರೆ ಕೆಜೆಪಿ ಚಿಟಗುಪ್ಪ ಮೂಲದ ಮೀರ್ ಅಶ್ರಫ್ ಅಲಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಮಿರಾಜುದ್ದೀನ್ ಸಹೋದರ, ಜೆಡಿಎಸ್ ಜಿಲ್ಲಾಧ್ಯಕ್ಷ ನಸೀಮುದ್ದೀನ್ ಪಟೇಲ್ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಪದ್ಮಾಕರ್ ಪಾಟೀಲ್, ಶಿವಾನಂದ ಮಂಠಾಳಕರ್ ಹೆಸರು ಚಾಲ್ತಿಯಲ್ಲಿವೆ. ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಘೋಷಿಸಿಲ್ಲ.

ದಕ್ಷಿಣದಲ್ಲಿ ಯಾರಣ್ಣ?
ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ಹೊಸ ಕ್ಷೇತ್ರವಾಗಿ ಹೊರ ಹೊಮ್ಮಿದ ಬೀದರ್ ದಕ್ಷಿಣ ಕ್ಷೇತ್ರಕ್ಕೆ ಬೀದರ್ ತಾಲೂಕು ಅಲ್ಲದೆ ಹುಮನಾಬಾದ್‌ನ ಹಲವು ಗ್ರಾಮಗಳೂ ಸೇರಿಕೊಂಡಿವೆ. 2008ರ ಚುನಾವಣೆಯಲ್ಲಿ ಜೆಡಿಎಸ್ ಶಾಸಕ ಬಂಡೆಪ್ಪ ಖಾಶೆಂಪೂರ್ ಬಿಜೆಪಿಯ ಸಂಜಯ ಖೇಣಿ ಅವರನ್ನು ಸೋಲಿಸಿದ್ದರು. ಈ ಬಾರಿಯೂ ಜೆಡಿಎಸ್‌ನಿಂದ ಖಾಶೆಂಪೂರ್, ಬಿಜೆಪಿಯಿಂದ ಸಂಜಯ ಖೇಣಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್‌ನಿಂದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೀನಾಕ್ಷಿ ಸಂಗ್ರಾಮ್ ಟಿಕೆಟ್ ಪಡೆಯುವ ಯತ್ನದಲ್ಲಿದ್ದರೆ, ಜಿಪಂ ಸದಸ್ಯ ಡಾ. ಶೈಲೇಂದ್ರ ಬೆಲ್ದಾಳೆ ಕೆಜೆಪಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಸಂಜಯ ಖೇಣಿ ಬಿಜೆಪಿಯಿಂದ ಮತ್ತೊಮ್ಮೆ ಕಣಕ್ಕಿಳಿಯಬಹುದು. ಬಿಎಸ್‌ಆರ್ ಕಾಂಗ್ರೆಸ್ ಇಲ್ಲಿಯೂ ಕೂಡ ಅಭ್ಯರ್ಥಿ ಹುಡುಕಾಟದಲ್ಲಿದೆ.

ಔರಾದ್‌ನಲ್ಲಿ ಎಲ್ಲವೂ ಗೊಂದಲ
ಪರಿಶಿಷ್ಟ ಜಾತಿಗೆ ಮೀಸಲಾದ ಔರಾದ್ ಕ್ಷೇತ್ರ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಲಂಬಾಣಿ ತಾಂಡಾಗಳೇ ಹೆಚ್ಚಾಗಿದ್ದು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದೆ. 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ ಅವರನ್ನು ಬಿಜೆಪಿಯ ಪ್ರಭು ಚವ್ಹಾಣ್ ಸೋಲಿಸಿದ್ದರು. ಈ ಬಾರಿ ಬಿಜೆಪಿಯಿಂದ ಚವ್ಹಾಣ್ ಅಥವಾ ಮಾಜಿ ಶಾಸಕ, ಹಾಲಿ ಲಿಡ್ಕರ್ ಅಧ್ಯಕ್ಷ ರಾಜೇಂದ್ರ ವರ್ಮಾ ಸ್ಪರ್ಧಿಸುವ ಸಾಧ್ಯತೆ ಇದೆ. ಆದರೆ, ಚವ್ಹಾಣ್ ಕೆಜೆಪಿಯಿಂದ ಸ್ಪರ್ಧಿಸುತ್ತಾರೆ ಎಂಬ ಮಾತಿದ್ದರೂ ಸ್ಪಷ್ಟವಾಗಿಲ್ಲ. ಕಾಂಗ್ರೆಸ್‌ನಿಂದ ಮತ್ತೊಮ್ಮೆ ಸ್ಪರ್ಧಿಸಲು ಸೂರ್ಯವಂಶಿ ಸಜ್ಜಾಗಿದ್ದಾರೆ. ಜೆಡಿಎಸ್‌ನಿಂದ ಐಪಿಎಸ್ ನಿವೃತ್ತ ಅಧಿಕಾರಿಗಳಾದ ಜಿ.ಎಂ ಯಾತನೂರ್ ಹಾಗೂ ಬಾಬುರಾವ್ ಮುಡಬಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಬಿಎಸ್‌ಆರ್ ಅಭ್ಯರ್ಥಿ ಹುಡುಕಾಟದಲ್ಲಿದೆ.

ಬಸವಕಲ್ಯಾಣ: ಯಾರಿಗೆ ಗೆಲವಿನ ಕಂಕಣ?
ಬಸವಣ್ಣನ ಕಾರ್ಯಕ್ಷೇತ್ರ, ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬಸವಕಲ್ಯಾಣ ಕ್ಷೇತ್ರದ ಹಾಲಿ ಶಾಸಕ ಬಸವರಾಜ ಪಾಟೀಲ್ ಅಟ್ಟೂರ್. 1983, 1985ರ ಚುನಾವಣೆಗಳಲ್ಲಿ ಜನತಾ ಪಕ್ಷದಿಂದ, 1989 ಮತ್ತು 1994ರಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಜಯ ದಾಖಲಿಸಿದ್ದರು. ಆಗ ಮೂರು ಚುನಾವಣೆಗಳಲ್ಲಿ ಮಾರುತಿರಾವ್ ಮೂಳೆ ಕಾಂಗ್ರೆಸ್‌ನಿಂದ ಸೋತಿದ್ದರು. 1999ರಲ್ಲಿ ಜೆಡಿಎಸ್ ತೊರೆದ ಅಟ್ಟೂರ್ ಜೆಡಿಯುನಿಂದ ಸ್ಪರ್ಧಿಸಿದರೆ ಮಾರುತಿರಾವ್ ಮೂಳೆ ಜೆಡಿಎಸ್‌ನಿಂದ ಸ್ಪರ್ಧಿಸಿ ಜಯ ಸಾಧಿಸಿದ್ದರು. 2004ರಲ್ಲಿ ಮಾರುತಿರಾವ್ ಮೂಳೆ ಜೆಡಿಎಸ್ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ, ಅಟ್ಟೂರ್ ಸ್ವತಂತ್ರ ಅಭ್ಯರ್ಥಿಯಾಗಿದ್ದರು. ಆದರೆ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ್ ಖೂಬಾ ಗೆದ್ದಿದ್ದರು. ಈಗ ಅಟ್ಟೂರ್ ಕೆಜೆಪಿ, ಮಾರುತಿರಾವ್ ಮೂಳೆ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿಗಳು. ಬಿಜೆಪಿ ಟಿಕೆಟ್‌ಗಾಗಿ ಬಸವಕಲ್ಯಾಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿ ಚಂದನಕೇರೆ, ಬಿಜೆಪಿ ತಾಲೂಕಾಧ್ಯಕ್ಷ ಸುನೀಲ್ ಕಾಡಾದಿ, ಈಗಷ್ಟೇ ಪಕ್ಷ ಸೇರಿರುವ ಶಾಂತಪ್ಪ ಪಾಟೀಲ್ ಪೈಟೋಟಿ ನಡೆಸಿದ್ದಾರೆ. ಕಾಂಗ್ರೆಸ್‌ನಿಂದ ಹಿರಿಯ ಮುಖಂಡ ಬಿ. ನಾರಾಯಣ, ಮರಾಠಾ ಸಮುದಾಯದ ಪ್ರಕಾಶ ಪಾಟೀಲ್, ಆನಂದ ದೇವಪ್ಪ ಆಕಾಂಕ್ಷಿಗಳು.

ಶಹಾಪುರದಲ್ಲಿ 'ದರ್ಶನ'ಕ್ಕೆ ಈ ಬಾರಿ ಅಡ್ಡಿ ಇಲ್ಲವೆ?
ಶಹಾಪುರ ಕ್ಷೇತ್ರದಲ್ಲಿ ಪಕ್ಷಕ್ಕಿಂತ ಹೆಚ್ಚಾಗಿ ವೈಯಕ್ತಿಕ ವರ್ಚಸ್ಸು ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ನ ಹಾಲಿ ಶಾಸಕ ಶರಣಬಸವಪ್ಪಗೌಡ ದರ್ಶನಾಪುರ ಅವರನ್ನು ಎದುರಿಸಲು ಸಮರ್ಥ ಎದುರಾಳಿಗಳು ಸದ್ಯ ಕಂಡು ಬರುತ್ತಿಲ್ಲ. ಆದರೆ ಈ ಬಾರಿಯ ಚುನಾವಣೆಯಲ್ಲಿ ಬಿಎಸ್ಸಾರ್ ಹಾಗೂ ಕೆಜೆಪಿ ಇರುವುದರಿಂದ ಹಗುರವಾಗಿ ಪರಿಗಣಿಸಿದರೆ ಅಪಾಯ ತಪ್ಪಿದ್ದಲ್ಲ. ಬಿಜೆಪಿಯಿಂದ ಗುರು ಪಾಟೀಲ ಶಿರವಾಳ ಹೆಸರು ಕೇಳಿಬರುತ್ತಿದೆ. ಜೆಡಿಎಸ್‌ನಿಂದ ಶರಣಪ್ಪ ಸಲಾದಪುರ ಅವರು ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಿಂದ ಈಚೆಗಷ್ಟೇ ಹೊರಬಂದಿರುವ ಡಾ. ಚಂದ್ರಶೇಖರ ಸುಬೇದಾರ ಕೆಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿಎಸ್ಸಾರ್ ಕಾಂಗ್ರೆಸ್‌ನಿಂದ ಶಂಕ್ರಣ್ಣ ವಣಿಕ್ಯಾಳ, ಚನ್ನಬಸ್ಸು ವನದುರ್ಗ ಇತರರು ಆಕಾಂಕ್ಷಿಗಳು. ನಾಯಕ ಜನಾಂಗದ ಮತ ಹೆಚ್ಚಿರುವುದರಿಂದ ಕ್ಷೇತ್ರದಲ್ಲಿ ಶ್ರೀರಾಮುಲು ಅವರ ಪಕ್ಷವನ್ನು ಕಡೆಗಣಿಸುವಂತಿಲ್ಲ.

ಯಾದಗಿರಿ: 'ಡಾಕ್ಟರ್‌'ಗಳ ಪೈಪೋಟಿ
ಕಳೆದ ಬಾರಿ ಪ್ರಯಾಸದ ಗೆಲವು ಸಾಧಿಸಿದ್ದ ಕಾಂಗ್ರೆಸ್‌ನ ಹಾಲಿ ಶಾಸಕ ಡಾ.ಎ.ಬಿ. ಮಾಲಕರೆಡ್ಡಿ ಅವರಿಗೆ ಈ ಬಾರಿ ಮತ್ತಿಬ್ಬರು ಡಾಕ್ಟರ್‌ಗಳು ಎದುರಾಳಿಯಾಗುವ ಸಾಧ್ಯತೆಯಿದೆ. ಕಾಂಗ್ರೆಸ್ ಕಡೆಗಣನೆಯಿಂದ ಮೌಲಾಲಿ ಅನಪುರ ಬಿಎಸ್ಸಾರ್ ಕಾಂಗ್ರೆಸ್ ಸೇರಿದ್ದರೆ, ಡಾ. ಶರಣಭೂಪಾಲರೆಡ್ಡಿ ನಾಯ್ಕಲ್ ಕೆಜೆಪಿ ಸೇರಿದ್ದು ಅಖಾಡಕ್ಕೆ ಸಜ್ಜಾಗಿದ್ದಾರೆ. ಅಲ್ಲದೇ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಮಾಜಿ ಶಾಸಕ ಡಾ. ವೀರಬಸವಂತರೆಡ್ಡಿ ಮುದ್ನಾಳ ಕೂಡ ಕೆಜೆಪಿ ಟಿಕೆಟ್‌ಗೆ ಓಡಾಡುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್‌ನ ಮಾಜಿ ಎಂಎಲ್‌ಸಿ ಚೆನ್ನಾರೆಡ್ಡಿ ತುನ್ನೂರು ಈ ಬಾರಿ ನನಗೇ ಟಿಕೆಟ್ ಬೇಕು ಎನ್ನುತ್ತಿದ್ದಾರೆ. ಒಂದು ವೇಳೆ ಸಿಗದಿದ್ದರೆ ಜೆಡಿಎಸ್ ಸೇರುವ ಸಾಧ್ಯತೆ ಇದೆ. ಬಿಜೆಪಿಯಿಂದ ತೊಗರಿ ಮಂಡಳಿ ಅಧ್ಯಕ್ಷ ಡಾ. ವೆಂಕಟೇಶ ಗಡ್ಡಿಮನಿ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದ್ದು, ದೇವೇಂದ್ರನಾಥ ನಾದ್, ದೇವರಾಜ ನಾಯಕ, ಸಿದ್ದಾರೆಡ್ಡಿ ಬಲಕಲ್ ಇತರರೂ ಪಟ್ಟಿಯಲ್ಲಿದ್ದಾರೆ. ಜೆಡಿಎಸ್‌ನಿಂದ ಎ.ಸಿ. ಕಾಡ್ಲೂರ, ಶ್ರೀನಿವಾಸರೆಡ್ಡಿ ಚೆನ್ನೂರ ಹೆಸರು ಕೇಳಿ ಬರುತ್ತಿವೆ. ಹೀಗಾಗಿ ಯಾದಗಿರಿ ಕ್ಷೇತ್ರದಲ್ಲಿ ಮೂವರು ಡಾಕ್ಟರ್‌ಗಳು (ಡಾ.ಎ.ಬಿ. ಮಾಲಕರೆಡ್ಡಿ, ಡಾ. ವೀರಬಸವಂತರೆಡ್ಡಿ ಮುದ್ನಾಳ, ಡಾ. ವೆಂಕಟೇಶ ಗಡ್ಡಿಮನಿ) ಸ್ಪರ್ಧಿಸುವ ಸಾಧ್ಯತೆ ಇದೆ.

ಸುರಪುರದಲ್ಲಿ 'ನಾಯಕ'ರ ಕಾದಾಟ
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಸುರಪುರ ಕ್ಷೇತ್ರದಲ್ಲಿ 'ನಾಯಕ'ರದ್ದೇ ದರ್ಬಾರ್. ಬಿಜೆಪಿ ಶಾಸಕ ರಾಜುಗೌಡ (ನರಸಿಂಹ ನಾಯಕ) ಹಾಗೂ ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ ಇವರಿಬ್ಬರೇ ಇಲ್ಲಿನ ಚುನಾವಣಾ ಕಣದಲ್ಲಿ ಕಾಣುವ ಕಲಿಗಳು. ಸಚಿವ ರಾಜುಗೌಡ ಕಾಂಗ್ರೆಸ್‌ಗೆ ಸೇರಲು ಹವಣಿಸುತ್ತಿದ್ದಾರೆ. ಆದರೆ ಇದಕ್ಕೆ ಮಾಜಿ ಶಾಸಕ, ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ ರಾಜುಗೌಡ ಕಾಂಗ್ರೆಸ್ ಸೇರಿದರೆ ವೆಂಕಟಪ್ಪ ನಾಯಕ್ ಜೆಡಿಎಸ್ ಅಥವಾ ಕೆಜೆಪಿ ಸೇರುವ ಸಾಧ್ಯತೆ ಇದೆ. ರಾಜುಗೌಡರಿಗೆ ಕಾಂಗ್ರೆಸ್ ಮಣೆ ಹಾಕದಿದ್ದರೆ ಅವರಿಗೂ ಬಿಜೆಪಿ ಅಥವಾ ಕೆಜೆಪಿ ಅನಿವಾರ್ಯವಾಗುತ್ತದೆ. ಸುರಪುರ ಅರಸು ಮನೆತನದ ಕೃಷ್ಣಪ್ಪ ನಾಯಕ ಇತ್ತೀಚೆಗೆ ಬಿಎಸ್‌ಆರ್ ಕಾಂಗ್ರೆಸ್ ಸೇರಿದ್ದಾರೆ. ರಾಜುಗೌಡ ಬಿಜೆಪಿ ತ್ಯಜಿಸಿದರೆ ವೇಣುಗೋಪಾಲ ಜೇವರ್ಗಿ ಬಿಜೆಪಿ ಹುರಿಯಾಳು. ಸದ್ಯ ಬಿಜೆಪಿಯಲ್ಲಿರುವ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ತಮ್ಮ ಪುತ್ರ ಹರ್ಷವರ್ಧನ ಅವರಿಗೆ ಕೆಜೆಪಿ ಟಿಕೆಟ್ ಕೊಡಿಸಲು ಓಡಾಡುತ್ತಿದ್ದಾರೆ. ರಾಜುಗೌಡ ಮಂತ್ರಿಯಾಗಿ ಕೊಂಚ ಮಟ್ಟಿನ ಕೆಲಸ ಮಾಡಿದ್ದಾರೆ. ಅಲ್ಲದೇ ವೈಯಕ್ತಿಕ ವರ್ಚಸ್ಸು ಕೂಡ ಇದೆ.

ಗುರುಮಠಕಲ್ ಕಾಂಗ್ರೆಸ್‌ನಲ್ಲಿ ಶುರುವಾಗಿದೆ ಅಭದ್ರ ಆತಂಕ
ಮಲ್ಲಿಕಾರ್ಜುನ ಖರ್ಗೆ ಅವರನ್ನು ಸತತ 8 ಬಾರಿ ಆಯ್ಕೆ ಮಾಡಿದ್ದ ಗುರುಮಠಕಲ್ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್‌ನ ಬಾಬುರಾವ ಚಿಂಚನ್ಸೂರ್. ಕಾಂಗ್ರೆಸ್‌ನ ಒಳಜಗಳ ಹೆಚ್ಚಾಗಿದ್ದು ಚಿಂಚನ್ಸೂರ್ ವಿರುದ್ಧ  ಬೋರಬಂಡಾ ಬಣ ವ್ಯವಸ್ಥಿತ ಕೆಲಸ ಮಾಡುತ್ತಿದೆ. ಮತ್ತೊಬ್ಬ ಪ್ರಮುಖ ವೆಂಕಟರೆಡ್ಡಿ ಮುದ್ನಾಳ ಕಳೆದ ಬಾರಿ ಸ್ವತಂತ್ರವಾಗಿ ಸ್ಪರ್ಧಿಸಿ ನಂತರ ಬಿಜೆಪಿ ಸೇರಿದ್ದವರು ಈಗ ಕೆಜೆಪಿಗೆ ಬಂದಿದ್ದಾರೆ. ಇವರ ಜತೆಯಲ್ಲೇ ಬಿಜೆಪಿಯಿಂದ ಕೆಜೆಪಿಗೆ ಸೇರಿರುವ ನಾಗರತ್ನಾ ಕುಪ್ಪಿ ಕೂಡ ಟಿಕೆಟ್ ಆಕಾಂಕ್ಷಿ. ಗುಲ್ಬರ್ಗ ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ್ ಬಿಜೆಪಿಯಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಜೆಡಿಎಸ್ ಜಿಲ್ಲಾಧ್ಯಕ್ಷ ನಾಗನಗೌಡ ಕಂದಕೂರಗೆ ಟಿಕೆಟ್ ಖಚಿತ ಎನ್ನಲಾಗಿದೆ. ಬಿಎಸ್ಸಾರ್ ಕಾಂಗ್ರೆಸ್‌ನಿಂದ ಅಂಬರೀಷ್ ರಾಠೋಡ ಹಾಗೂ ಬಾಬು ಚವ್ಹಾಣ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.