ರಾಜಕೀಯ

ವಿವಿಗಳಿಗೆ ಮೂಗುದಾರ

Published On :

ಕರ್ನಾಟಕ ರಾಜ್ಯ ವಿವಿಗಳ ವಿಧೇಯಕಕ್ಕೆ ಮಹತ್ವದ ತಿದ್ದುಪಡಿ
ವಿಧಾನಪರಿಷತ್: ಹದಗೆಟ್ಟಿರುವ ರಾಜ್ಯದ ವಿಶ್ವವಿದ್ಯಾಲಯಗಳನ್ನು ಸರಿದಾರಿಗೆ ತರಲು ಸರ್ಕಾರ ಮುಂದಾಗಿದ್ದು,
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕಕ್ಕೆ ಮಹತ್ವದ ತಿದ್ದುಪಡಿ ತರಲು ಹೊರಟಿದೆ.
ಉದ್ದೇಶಿತ ತಿದ್ದುಪಡಿ ಪ್ರಕಾರ ವಿವಿಗಳಿಗೆ ಸಮ ಕುಲಾಧಿಪತಿಯಾಗಿರುವ ಉನ್ನತ ಶಿಕ್ಷಣ ಸಚಿವರು ಹಾಗೂ ರಾಜ್ಯ ಸರ್ಕಾರಕ್ಕೆ ಕೆಲ ಅಧಿಕಾರ ನೀಡಲಾಗಿದೆ. ಮತ್ತೊಂದೆಡೆ ಕುಲಪತಿ ನೇಮಕಕ್ಕೆ ಸಂಬಂಧಿಸಿ ಪ್ರಮುಖ ಬದಲಾವಣೆಯನ್ನು ತರಲಾಗಿದೆ.
ವಿವಿಯ ಸಿಂಡಿಕೇಟ್‌ಗೆ ವಿಧಾನ ಸಭೆಯ ಇಬ್ಬರು ಹಾಗೂ ವಿಧಾನ ಪರಿಷತ್‌ನ ಒಬ್ಬ ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಅಂಶವನ್ನೂ ತಿದ್ದುಪಡಿಯಲ್ಲಿ ಸೇರಿಸಿರುವ ವಿಧೇಯಕಕ್ಕೆ ವಿಧಾನ ಪರಿಷತ್ ಅನುಮೋದನೆ ನೀಡಿದೆ. ವಿವಿಗಳ ಗುಣಮಟ್ಟ ಹೆಚ್ಚಿಸಲು ಮತ್ತು ಪಾರದರ್ಶಕತೆ ತರಲು ಈ ತಿದ್ದುಪಡಿ ಅನಿವಾರ್ಯವಾಗಿದೆ ಎಂದು ವಿಧೇಯಕ ಮಂಡಿಸಿ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟರು.
ತಿದ್ದುಪಡಿ ವಿಧೇಯಕದಲ್ಲೇನಿದೆ?:  ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿ ಶೋಧನಾ ಸಮಿತಿಯ ಶಿಫಾರಸಿನ ಮೇರೆಗೆ ಕುಲಪತಿ ನೇಮಕ, ಇದಕ್ಕೆ ರಾಜ್ಯ ಸರ್ಕಾರದ ಸಹಮತವೂ ಇರಬೇಕು. ಕುಲಪತಿಯಾಗುವ ವ್ಯಕ್ತಿ ಅದೇ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರಬಾರದು. ಇದಲ್ಲದೇ 5 ವರ್ಷ ಪ್ರಾಧ್ಯಾಪಕರಾಗಿ, ಐವರು ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರಬೇಕು. ಕುಲಪತಿ ಹುದ್ದೆ ಖಾಲಿಯಾದರೆ ವಿವಿಯಲ್ಲಿನ ಹಿರಿಯ ಪ್ರಾಧ್ಯಾಪಕರು ಹಂಗಾಮಿಯಾಗಿ ಹುದ್ದೆಯನ್ನು ಅಲಂಕರಿಸಬೇಕು.
ಕುಲಸಚಿವರ ನೇಮಕ: ಕುಲಸಚಿವರ ನೇಮಕದ ಸಂದರ್ಭದಲ್ಲಿ ಅಖಿಲ ಭಾರತ ಸೇವೆಯ (ಐಎಎಸ್, ಐಪಿಎಸ್, ಐಎಫ್‌ಎಸ್) ಅಥವಾ ಕರ್ನಾಟಕ ಆಡಳಿತ ಸೇವೆಗಳಿಗೆ (ಕೆಎಎಸ್) ಸೇರಿದ ಅಧಿಕಾರಿಗೆ ಮೊದಲ ಆದ್ಯತೆ ನೀಡಬೇಕು. ಅವರು ಲಭ್ಯವಿರದಿದ್ದಲ್ಲಿ ಮಾತ್ರ ವಿವಿಯ ಪ್ರಾಧ್ಯಾಪಕರಿಗೆ ಅವಕಾಶ ನೀಡಬೇಕು. ಆದರೆ ಅದು ಕೊನೆಯ ಅವಕಾಶವಾಗಿರಬೇಕು. ಈ ತಿದ್ದುಪಡಿ ಮೌಲ್ಯಮಾಪನ ಕುಲಸಚಿವರ ಹುದ್ದೆಗೆ ಅನ್ವಯಿಸುವುದಿಲ್ಲ.
ಸಿಂಡಿಕೇಟ್‌ಗೆ ಜನಪ್ರತಿನಿಧಿಗಳು: ರಾಜ್ಯದ ಎಲ್ಲ ವಿವಿಗಳ ಸಿಂಡಿಕೇಟ್‌ಗೆ ಕಡ್ಡಾಯವಾಗಿ ಇಬ್ಬರು ವಿಧಾನ ಸಭೆ ಸದಸ್ಯರು ಹಾಗೂ ಒಬ್ಬ ವಿಧಾನ ಪರಿಷತ್ ಸದಸ್ಯರ ನಾಮ ನಿರ್ದೇಶನ. ಇದರಿಂದ ರಾಜ್ಯದ ಎಲ್ಲ ವಿವಿಗಳ ವ್ಯಾಪ್ತಿಯಲ್ಲಿನ ಒಟ್ಟು ಮೂವರು ಶಾಸಕರು ಸಿಂಡಿಕೇಟ್ ಸದಸ್ಯರಾಗಿ ನೇಮಕವಾಗಲಿದ್ದಾರೆ. ರಾಜ್ಯ ಸರ್ಕಾರದ ಪರವಾಗಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ , ಕಾರ್ಯದರ್ಶಿ ಅಥವಾ ಉಪ ಕಾರ್ಯದರ್ಶಿಗಳು ಸಿಂಡಿಕೇಟ್‌ಗೆ ನಾಮನಿರ್ದೇಶನವಾಗಲಿದ್ದಾರೆ. ಮತ್ತೊಂದೆಡೆ ವಿಶೇಷ ಹಾಗೂ ಸುತ್ತೋಲೆ ಸಭೆಯನ್ನು ಹೊರತುಪಡಿಸಿ ವರ್ಷದಲ್ಲಿ ಕಡ್ಡಾಯವಾಗಿ 8 ಸಿಂಡಿಕೇಟ್ ಸಭೆ ನಡೆಸಲೇಬೇಕು ಎಂದು ತಿದ್ದುಪಡಿ ಕಾಯಿದೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ವರ್ಗಾವಣೆಗೆ ಸ್ಥಾಪನಾ ಮಂಡಳಿ: ವಿವಿಯಲ್ಲಿನ ಸಿಬ್ಬಂದಿ ವರ್ಗಾವಣೆಗೆ ರಾಜ್ಯ ಸರ್ಕಾರ ವಿಶೇಷ ಸ್ಥಾಪನಾ ಮಂಡಳಿ ಸ್ಥಾಪನೆ. ಅಂತರ್ ವಿವಿಗೆ ವರ್ಗಾವಣೆ ಮಾಡಲು ಈ ಸ್ಥಾಪನಾ ಮಂಡಳಿ ಪರಿಶೀಲನೆ ನಡೆಸಲಿದೆ. ಇದರಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ, ಕಾರ್ಯನಿರ್ವಾಹಣಾ ನಿರ್ದೇಶಕ ಹಾಗೂ ಸಂಬಂಧಪಟ್ಟ ವಿವಿಯ ಕುಲಪತಿ ಈ ಮಂಡಳಿಯಲ್ಲಿರುತ್ತಾರೆ.
ವಿದ್ಯಾರ್ಥಿಗಳಿರದಿದ್ದರೆ ಪೀಠ ಬಂದ್: ಸತತ ಎರಡು ವರ್ಷಗಳ ಕಾಲ ವಿದ್ಯಾರ್ಥಿಗಳ ಪ್ರವೇಶವಿಲ್ಲದಿದ್ದರೆ ಅಂತಹ ಅಧ್ಯಯನ ಪೀಠಗಳನ್ನು ಮುಚ್ಚಲಾಗುತ್ತದೆ. ಇದಲ್ಲದೆ ಯಾವುದಾದರೂ ವಿಭಾಗದಲ್ಲಿ 10ಕ್ಕೂ ಕಡಿಮೆ ವಿದ್ಯಾರ್ಥಿಗಳಿದ್ದರೆ ಬೇರೆ ವಿವಿಯೊಂದಿಗೆ ವಿಲೀನ ಮಾಡಲಾಗುವುದು.
ಅಕ್ರಮಗಳ ವಿರುದ್ಧ 30 ದಿನದಲ್ಲಿ ಕ್ರಮ
ಕುಲಪತಿ ಅಥವಾ ವಿವಿಯ ವಿರುದ್ಧ ಯಾವುದೇ ದೂರುಗಳು ಬಂದರೂ 3 ತಿಂಗಳಲ್ಲಿ ತನಿಖೆ ನಡೆಸಿ ವರದಿ ನೀಡಬೇಕು. ಈ ವರದಿಯ ಶಿಫಾರಸುಗಳನ್ನು ನಂತರದ 30 ದಿನದಲ್ಲಿ ಕಡ್ಡಾಯವಾಗಿ ಜಾರಿ ಮಾಡಬೇಕು.  ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಹಾಗೂ ಬಿಜಾಪುರ ಮಹಿಳಾ ವಿವಿಯ ಕುಲಪತಿಗಳ ವಿರುದ್ಧದ ದೂರುಗಳಿಗೆ ಸಂಬಂಧಿಸಿ ವರದಿ ಬಂದಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ತನಿಖೆಗೆ ಸಮಯ ನಿಗದಿ ಮಾಡಿದಂತೆ, ಕ್ರಮ ಜಾರಿಗೂ ಕಾಲಾವಕಾಶ ನಿಗದಿಮಾಡಬೇಕೆಂಬ ಸದಸ್ಯರ ಒತ್ತಡಕ್ಕೆ ಮಣಿದು ಸರ್ಕಾರ ಈ ತಿದ್ದುಪಡಿಗೂ ಒಪ್ಪಿಗೆ ಸೂಚಿಸಿ ಅನುಮೋದನೆ ಪಡೆದಿದೆ.
ಕುಲಪತಿ ನೇಮಕಕ್ಕೆ 6 ಕೋಟಿ...
ವಿಧಾನ ಪರಿಷತ್ ಸದಸ್ಯ ಪ್ರೊ.ಪಿ.ವಿ.ಕೃಷ್ಣ ಭಟ್ ಅವರು ಸದನದಲ್ಲಿ ಈ ಹೇಳಿಕೆ ನೀಡಿದ್ದಾರೆ. 'ಇತ್ತೀಚೆಗೆ ರಾಜ್ಯದ ಪ್ರತಿಷ್ಠಿತ ವಿವಿಗೆ ಕುಲಪತಿ ನೇಮಕ ನಡೆಯಿತು. ಈ ಸಂದರ್ಭದಲ್ಲಿ ಒಬ್ಬ ಮಹಿಳೆಯ ಹೆಸರು ಅಂತಿಮ ಪಟ್ಟಿಗೆ ಆಯ್ಕೆಯಾಗಿತ್ತು. ಆಗ ಆಕೆ ನನ್ನ ಬಳಿ ಬಂದು ಹೀಗೆ ಅಲವತ್ತುಕೊಂಡರು, 'ನೇಮಕಕ್ಕೆ 6 ಕೋಟಿ ಕೇಳುತ್ತಿದ್ದಾರೆ. ನಾನೇನು ಮಾಡಲಿ?'. ಆದರೆ ಇದಕ್ಕೆ ನನ್ನ ಬಳಿ ಉತ್ತರವಿರಲಿಲ್ಲ. ಕೊನೆಗೆ ಆಕೆಯ ನೇಮಕವಾಗಲಿಲ್ಲ. ಹಾಗಿದ್ದರೆ ನೇಮಕಕ್ಕೆ ಇದಕ್ಕೂ ದೊಡ್ಡ ಡೀಲ್ ನಡೆಯಿತೇ? ಕುಲಪತಿ ಹುದ್ದೆಗಳು ಹೀಗೆ ಬಿಕರಿಯಾದರೆ ಹೇಗೆ?' ಎಂದು ಕಟುವಾಗಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಈ ಮೂಲಕ ರಾಜ್ಯದ ವಿವಿಗಳ ಕುಲಪತಿಗಳ ನೇಮಕಕ್ಕೆ ವ್ಯವಹಾರ ನಡೆಯುತ್ತಿದೆ ಎನ್ನುವುದನ್ನು ವಿಧಾನಪರಿಷತ್‌ನಲ್ಲಿಯೇ ಬಹಿರಂಗಪಡಿಸಿದಂತಾಗಿದೆ. ಇದಕ್ಕೆ ಸದಸ್ಯರಾದ ಬಸವರಾಜ್ ಹೊರಟ್ಟಿ, ಪುಟ್ಟಣ್ಣ, ಮರಿತಿಬ್ಬೇಗೌಡ ಸೇರಿದಂತೆ ಇತರರು ಸಹಮತ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.