'ರಾಜಕೀಯದಲ್ಲಿ 60 ವರ್ಷ ಕಳೆದಿದ್ದೇನೆ, ಹಾಗಂದ ಮಾತ್ರಕ್ಕೆ ಪಕ್ಷ ಬಿಡುತ್ತೇನೆ ಎಂದಲ್ಲ': ಬಿಜೆಪಿ ಬಗ್ಗೆ 'ಅಸಮಾಧಾನ' ಕುರಿತು ಅಮರಿಂದರ್ ಸಿಂಗ್
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರಲ್ಲದೆ, ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್, ಸೈಯದ್ ಕಿರ್ಮಾನಿ ಮತ್ತು ಮದನ್ ಲಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನವದೆಹಲಿ: ಪಂಜಾಬ್‌ನ ಬಗ್ಗೆ ತಮಗಿರುವ ಅಭಿಪ್ರಾಯವನ್ನು ತಮ್ಮ ಪಕ್ಷಕ್ಕೆ (ಬಿಜೆಪಿ) ತಿಳಿಸುವುದು ತಮ್ಮ ಕರ್ತವ್ಯ. ಹಾಗಂದ ಮಾತ್ರಕ್ಕೆ ತಾವು ಪಕ್ಷವನ್ನು ತೊರೆಯುತ್ತಿಲ್ಲ ಎಂದು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ತಾವು ಕಠಿಣ ಸಮಯವನ್ನು ಎದುರಿಸುತ್ತಿರುವುದಾಗಿಯೂ ಅವರು ತಿಳಿಸಿದ್ದು, ಆದರೆ ಆ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.
ತಮಗೆ 84 ವರ್ಷ ವಯಸ್ಸಾಗಿದ್ದರೂ ತಾವು ಇನ್ನೂ ವೃದ್ಧರಾಗಿಲ್ಲ ಎಂದ ಸಿಂಗ್, ತೀರಾ ತಡವಾದ ವಯಸ್ಸಿನಲ್ಲಿ ಪ್ರಧಾನಿಯಾದ ಮೊರಾರ್ಜಿ ದೇಸಾಯಿ ಅವರ ಉದಾಹರಣೆಯನ್ನು ಪ್ರಸ್ತಾಪಿಸಿದರು.
ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ಅವರ ಸ್ಮರಣಾರ್ಥ 'ಬಿಷನ್ ವಿತ್ ಲವ್' (Bishan with Love) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದ ಅವರು, 'ನನಗೆ 84 ವರ್ಷ, ಆದರೆ ಮೊರಾರ್ಜಿ ದೇಸಾಯಿ ಅವರಿಗೆ 92 ವರ್ಷವಾಗಿತ್ತು...' ಎಂದು ಹೇಳಿದರು. ಇದೇ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಅಮರಿಂದರ್ ಸಿಂಗ್ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂದು ತಾವು ಬಯಸುವುದಾಗಿ ಹೇಳಿ ಅವರಿಗೆ ಶುಭ ಹಾರೈಸಿದರು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರಲ್ಲದೆ, ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್, ಸೈಯದ್ ಕಿರ್ಮಾನಿ ಮತ್ತು ಮದನ್ ಲಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
'ಕ್ರಿಕೆಟ್ ಸಜ್ಜನರ ಆಟ... ಇದನ್ನು ಯಾವಾಗಲೂ ಪ್ರೋತ್ಸಾಹಿಸಬೇಕು. ಇಂದು ನಮ್ಮ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ನನಗಿಂತ ಹೆಚ್ಚಾಗಿ 'ಡಾಕ್ಟರ್ ಸಾಹೇಬ್' ಅವರು ನಿಮಗೆ ವಿವರಿಸಬಲ್ಲರು... ಆದರೆ ನಾವೀಗ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಮತ್ತು ನಮಗೆ ಇಲ್ಲಿ ಜನರ ಅಗತ್ಯವಿದೆ...' ಎಂದು ಅಮರಿಂದರ್ ಸಿಂಗ್ ಹೇಳಿದರು.
'ನಾನು ಈಗಾಗಲೇ ಸಂಕಷ್ಟದಲ್ಲಿದ್ದೇನೆ, ಹಾಗಾಗಿ ನನ್ನ ಬಗ್ಗೆ ಚಿಂತಿಸಬೇಡಿ' ಎಂದರು.
ಬಿಜೆಪಿ ಬಗ್ಗೆ ಏಕೆ ಅಸಮಾಧಾನಗೊಂಡಿದ್ದೀರಿ ಎಂದು ಕೇಳಿದಾಗ, 'ನಾನು ಪಂಜಾಬ್ ರಾಜಕೀಯದಲ್ಲಿ 60 ವರ್ಷಗಳನ್ನು ಕಳೆದಿದ್ದೇನೆ. ಆದರೆ, ನಮ್ಮ ನಂತರ ಬಂದ ಕೆಲವರು ಅಲ್ಲಿ ಒಂದು ವರ್ಷವನ್ನೂ ಪೂರೈಸಿಲ್ಲ... ಇಷ್ಟು ವರ್ಷಗಳಲ್ಲಿ ಪಂಜಾಬ್‌ನ ಪರಿಸ್ಥಿತಿಯನ್ನು ನಾವು ನೋಡಿದ್ದೇವೆ, ಆದರೂ ಅವರು ನಮ್ಮನ್ನು ಒಮ್ಮೆಯೂ ಕೇಳಿಲ್ಲ' ಎಂದು ಹೇಳಿದರು.
'ನನ್ನ ಅಭಿಪ್ರಾಯಗಳು ಮತ್ತು ಭಾವನೆಗಳು ಏನೆಂದು ಅವರಿಗೆ ತಿಳಿಸುವುದು ನನ್ನ ಕರ್ತವ್ಯ. ಕಾಂಗ್ರೆಸ್ ಅಥವಾ ಬಿಜೆಪಿಯಲ್ಲಿ ನನಗಿನ್ನು ಯಾವುದೇ ಪ್ರಸ್ತುತತೆ ಇಲ್ಲ ಎಂದು ನಾನು ಹೇಳಿಲ್ಲ. ಪಕ್ಷಗಳು ಬದಲಾಗುತ್ತಲೇ ಇರುತ್ತವೆ. ನಾನು ಕಾಂಗ್ರೆಸ್‌ನಲ್ಲಿದ್ದಾಗ 'ಆಪರೇಷನ್ ಬ್ಲೂ ಸ್ಟಾರ್' ಕಾರಣದಿಂದ ಅಕಾಲಿದಳಕ್ಕೆ ಸೇರಿದ್ದೆ ಮತ್ತು ನಂತರ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದೆ. ಹಾಗಂದ ಮಾತ್ರಕ್ಕೆ ಈಗ ನಾನು ಪಕ್ಷ ತೊರೆದು ಮತ್ತೊಂದು ಪಕ್ಷಕ್ಕೆ ಸೇರುತ್ತೇನೆ ಎಂದಲ್ಲ. ಆದರೆ, ನನ್ನ ಅಭಿಪ್ರಾಯಗಳು ಮತ್ತು ಭಾವನೆಗಳನ್ನು ಅವರಿಗೆ (ಬಿಜೆಪಿ ನಾಯಕರಿಗೆ) ತಿಳಿಸುವುದು ನನ್ನ ಕರ್ತವ್ಯ' ಎಂದು ಸಿಂಗ್ ಪ್ರತಿಪಾದಿಸಿದರು.
ಸಿಂಗ್ ಅವರು ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್‌ಗೆ ಸೇರಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



