'ಅಮಾಯಕ ಜೀವಗಳು ಬಲಿಯಾಗುತ್ತಿವೆ, ಇದು ಸಂಪೂರ್ಣ ಅಸಮರ್ಥನೀಯ’; ಹಡಗು, ನಾವಿಕರ ಮೇಲಿನ ದಾಳಿ ಖಂಡಿಸಿದ EAM Jaishankar
ಗಲ್ಫ್, ಕೆಂಪು ಸಮುದ್ರ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಣಿಜ್ಯ ಹಡಗುಗಳು ಪದೇಪದೆ ದಾಳಿಗೆ ಒಳಗಾಗಿವೆ. ಸಮುದ್ರ ವಾಣಿಜ್ಯಕ್ಕೆ ಅಡ್ಡಿಪಡಿಸುವ ಹಾಗೂ ಅಮಾಯಕ ಜೀವಗಳನ್ನು ಬಲಿ ಪಡೆಯುವ ಇಂತಹ ಕೃತ್ಯಗಳನ್ನು ಯಾವುದೇ..

ವಿಶ್ವಸಂಸ್ಥೆ: ವಾಣಿಜ್ಯ ಹಡಗುಗಳು ಹಾಗೂ ಸಮುದ್ರಯಾನಿಕರ ಮೇಲೆ ಪದೇಪದೆ ನಡೆಯುತ್ತಿರುವ ದಾಳಿಗಳನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ತೀವ್ರವಾಗಿ ಖಂಡಿಸಿದ್ದಾರೆ.
ಗಲ್ಫ್, ಕೆಂಪು ಸಮುದ್ರ, ಕಪ್ಪು ಸಮುದ್ರ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಡೆಯುತ್ತಿರುವ ಇಂತಹ ದಾಳಿಗಳು ಸಮುದ್ರ ವಾಣಿಜ್ಯಕ್ಕೆ ಅಡ್ಡಿಪಡಿಸುವುದರ ಜತೆಗೆ ಅಮಾಯಕ ಜೀವಗಳನ್ನೂ ಬಲಿ ಪಡೆಯುತ್ತಿವೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
81ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಹಿನ್ನೆಲೆಯಲ್ಲಿ ನಡೆದ ‘ಹಡಗು ಮತ್ತು ಸಮುದ್ರಯಾನಿಕರ ಸುರಕ್ಷತೆ ಮತ್ತು ಭದ್ರತೆ ಕುರಿತ ಸ್ನೇಹಿತರ ಗುಂಪು’ದ ಸಚಿವ ಮಟ್ಟದ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಜೈಶಂಕರ್, ಇತ್ತೀಚಿನ ತಿಂಗಳುಗಳಲ್ಲಿ ವಾಣಿಜ್ಯ ಹಡಗುಗಳು ಹಾಗೂ ನಾವಿಕರ ಮೇಲೆ ನಡೆದ ಹಲವು ದಾಳಿಗಳನ್ನು ಉಲ್ಲೇಖಿಸಿದರು.
“ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಗಲ್ಫ್, ಕೆಂಪು ಸಮುದ್ರ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಣಿಜ್ಯ ಹಡಗುಗಳು ಪದೇಪದೆ ದಾಳಿಗೆ ಒಳಗಾಗಿವೆ. ಸಮುದ್ರ ವಾಣಿಜ್ಯಕ್ಕೆ ಅಡ್ಡಿಪಡಿಸುವ ಹಾಗೂ ಅಮಾಯಕ ಜೀವಗಳನ್ನು ಬಲಿ ಪಡೆಯುವ ಇಂತಹ ಕೃತ್ಯಗಳನ್ನು ಯಾವುದೇ ರೀತಿಯಲ್ಲೂ ಸಮರ್ಥಿಸಲು ಸಾಧ್ಯವಿಲ್ಲ” ಎಂದು ಜೈಶಂಕರ್ ಹೇಳಿದರು.
ಇತ್ತೀಚೆಗೆ ಓಮನ್ ಕೊಲ್ಲಿಯಲ್ಲಿ ಆಂಟಿಗುವಾ ಮತ್ತು ಬಾರ್ಬುಡಾ ಧ್ವಜ ಹೊಂದಿದ್ದ ಎಂವಿ ಕೇಪ್ ದಾವೋ ಎಂಬ ಬಲ್ಕ್ ಕ್ಯಾರಿಯರ್ ಹಡಗಿನ ಮೇಲೆ ನಡೆದ ದಾಳಿಯನ್ನು ಅವರು ಉಲ್ಲೇಖಿಸಿದರು. ಈ ಘಟನೆಯಲ್ಲಿ ಭಾರತೀಯ ನಾವಿಕರೊಬ್ಬರು ಮೃತಪಟ್ಟಿದ್ದರು.
ನಾವಿಕರ ಮೇಲೂ ಮಾನಸಿಕ ಒತ್ತಡ
ದಾಳಿಗಳಿಂದ ಉಂಟಾಗುತ್ತಿರುವ ಅಡಚಣೆಗಳಿಂದ ಸಮುದ್ರಯಾನಿಕರು ಹಡಗುಗಳಲ್ಲೇ ದೀರ್ಘಕಾಲ ಸಿಲುಕಿಕೊಳ್ಳುವಂತಾಗಿದೆ. ಸಿಬ್ಬಂದಿ ಬದಲಾವಣೆ ಹಾಗೂ ಸ್ವದೇಶಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ.
ಕುಟುಂಬಗಳಿಂದ ದೂರ ಉಳಿಯುವುದರ ಜತೆಗೆ ನಾವಿಕರು ಮಾನಸಿಕ ಒತ್ತಡವನ್ನೂ ಎದುರಿಸುತ್ತಿದ್ದಾರೆ ಎಂದು ಜೈಶಂಕರ್ ಗಮನ ಸೆಳೆದರು. ಇಂತಹ ದಾಳಿಗಳನ್ನು ತಡೆಯಲು ಅಂತರರಾಷ್ಟ್ರೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.
ಭಾರತ-ಲೈಬೀರಿಯಾ ಮಹತ್ವದ ಉಪಕ್ರಮ
ಇದೇ ವೇಳೆ ಭಾರತ ಮತ್ತು ಲೈಬೀರಿಯಾ ದೇಶಗಳು ಹಡಗುಗಳು ಹಾಗೂ ಸಮುದ್ರಯಾನಿಕರ ಸುರಕ್ಷತೆ ಮತ್ತು ಭದ್ರತೆಗಾಗಿ ‘ಸ್ನೇಹಿತರ ಗುಂಪು’ ಸ್ಥಾಪಿಸುವುದಾಗಿ ಘೋಷಿಸಿವೆ. ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಮಹತ್ವದ ಸಮುದ್ರಯಾನ ಉಪಕ್ರಮವನ್ನು ಆರಂಭಿಸಲಾಗಿದೆ.
“ಭಾರತವು ಸಮುದ್ರಯಾನಿಕರ ಪ್ರಮುಖ ಮೂಲ ದೇಶವಾಗಿದ್ದು, ಲೈಬೀರಿಯಾ ಅತಿದೊಡ್ಡ ಹಡಗು ನೋಂದಣಿ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಿದೆ. ಹಡಗುಗಳು ಮತ್ತು ಸಮುದ್ರಯಾನಿಕರ ಸುರಕ್ಷತೆ ಹಾಗೂ ಭದ್ರತೆಯನ್ನು ಪ್ರಮುಖವಾಗಿ ಎತ್ತಿಹಿಡಿಯಲು ಎರಡೂ ದೇಶಗಳು ಒಟ್ಟಾಗಿವೆ” ಎಂದು ಜೈಶಂಕರ್ ಹೇಳಿದರು.
ಪ್ರಮುಖ ಹಡಗು ಮಾಲೀಕ ರಾಷ್ಟ್ರಗಳು, ಅತಿದೊಡ್ಡ ಹಡಗು ನೋಂದಣಿ ಹೊಂದಿರುವ ದೇಶಗಳು ಹಾಗೂ ಹೆಚ್ಚಿನ ಸಂಖ್ಯೆಯ ಸಮುದ್ರಯಾನಿಕರನ್ನು ಒದಗಿಸುವ ರಾಷ್ಟ್ರಗಳನ್ನು ಒಂದೇ ವೇದಿಕೆಗೆ ತರುವ ನಿಟ್ಟಿನಲ್ಲಿ ಈ ಉಪಕ್ರಮ ಉತ್ತಮ ಆರಂಭವಾಗಿದೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಹೇಳಿಕೆ ಉಲ್ಲೇಖ
ಇತ್ತೀಚೆಗೆ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಸೀಫೇರರ್ಸ್ ಎಮರ್ಜೆನ್ಸಿ ಸಪೋರ್ಟ್ ನೆಟ್‌ವರ್ಕ್’ ಸ್ಥಾಪಿಸುವ ಪ್ರಸ್ತಾವನೆ ಮುಂದಿಟ್ಟಿದ್ದರು ಎಂದು ಜೈಶಂಕರ್ ತಿಳಿಸಿದರು.
ಈ ಜಾಲದ ಮೂಲಕ ಸಮುದ್ರ ಪ್ರಾಧಿಕಾರಗಳು ಮತ್ತು ರಾಯಭಾರ ಕಚೇರಿಗಳನ್ನು ಸಂಪರ್ಕಿಸಿ, ತುರ್ತು ಸಂಕೇತಗಳು, ವೈದ್ಯಕೀಯ ನೆರವು, ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಹಾಗೂ ಸ್ಥಳಾಂತರ ನೆರವು ಒದಗಿಸುವ ಉದ್ದೇಶವಿದೆ.
ಜಾಗತಿಕ ಸಂಘರ್ಷಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಹೋರ್ಮುಜ್ ಜಲಸಂಧಿ, ಓಮನ್ ಕೊಲ್ಲಿ, ಕೆಂಪು ಸಮುದ್ರ, ಏಡನ್ ಕೊಲ್ಲಿ, ಬಾಬ್-ಎಲ್-ಮಂದೇಬ್, ಕಪ್ಪು ಸಮುದ್ರ ಹಾಗೂ ಸೊಮಾಲಿಯಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಾಣಿಜ್ಯ ಹಡಗುಗಳು ಮತ್ತು ಸಮುದ್ರಯಾನಿಕರಿಗೆ ಅಪಾಯ ಹೆಚ್ಚಾಗಿದೆ.
ಈ ಪ್ರದೇಶಗಳಲ್ಲಿ ಸಂಚರಿಸುವ ಭಾರತೀಯ ಹಾಗೂ ವಿದೇಶಿ ಧ್ವಜದ ಹಡಗುಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ನಾವಿಕರು ಕೆಲಸ ಮಾಡುತ್ತಿರುವುದರಿಂದ ಅವರು ಕೂಡ ಸಮುದ್ರ ಭದ್ರತಾ ಅಪಾಯಗಳಿಗೆ ಒಳಗಾಗುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



