ಪ್ರಧಾನಿ ಮೋದಿ ಭೇಟಿ ಮಾಡಿದ ಪೇಜಾವರ ಶ್ರೀ: ಯಕ್ಷಗಾನ ಕಿರೀಟ ತೊಡಿಸಿ ಗೌರವ, ಲಾಂಛನ ಬಿಡುಗಡೆ
ಪ್ರಧಾನಿ ಮೋದಿ ಅವರ ಜನ್ಮದಿನದ ಅಂಗವಾಗಿ ವೇದವ್ಯಾಸ ಗುರುಕುಲದಲ್ಲಿ ನೆರವೇರಿಸಲಾಗಿದ್ದ ಪೂರ್ಣ ನವಗ್ರಹ ಹಾಗೂ ರಾಷ್ಟ್ರಸೂಕ್ತ ಹೋಮದ ಪ್ರಸಾದವನ್ನು ಶುಭಾಶಯಗಳೊಂದಿಗೆ ಪ್ರಧಾನಿಯವರಿಗೆ ಹಸ್ತಾಂತರಿಸಲಾಯಿತು.

ನವದೆಹಲಿ: ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನಿನ್ನೆ ಮಂಗಳವಾರ ಸಂಜೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ದೆಹಲಿಯಲ್ಲಿ ಶ್ರೀಗಳು ಆಚರಿಸುತ್ತಿದ್ದ ಇಂದ್ರಪ್ರಸ್ಥ ಚಾತುರ್ಮಾಸ್ಯ ವ್ರತದ ಸಮಾರೋಪದ ಹಿನ್ನೆಲೆಯಲ್ಲಿ ಈ ಭೇಟಿ ನಡೆಯಿತು.
ಈ ಸಂದರ್ಭದಲ್ಲಿ, 2031ರಲ್ಲಿ ನಡೆಯಲಿರುವ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಜನ್ಮಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗುತ್ತಿರುವ ಐದು ವರ್ಷಗಳ ಯೋಜನೆಯ ಲಾಂಛನವನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು.
ಶ್ರೀ ವಿಶ್ವಪ್ರಸನ್ನ ತೀರ್ಥರು ಸಾಂಪ್ರದಾಯಿಕ ಯಕ್ಷಗಾನದ ರಾಜವೇಷದ ಕಿರೀಟವನ್ನು ಪ್ರಧಾನಿಯವರಿಗೆ ತೊಡಿಸಿ ಗೌರವಿಸಿದರು. ಅಲ್ಲದೆ, ಶಾಲು, ಚಿನ್ನದ ಲೇಪಿತ ಕಾಳಿಯ ಕೃಷ್ಣನ ವಿಗ್ರಹ, ಹಣ್ಣುಗಳು ಹಾಗೂ ಮಂತ್ರಾಕ್ಷತೆಯನ್ನು ಪ್ರಧಾನಿಯವರಿಗೆ ಸಮರ್ಪಿಸಿದರು.
ಪ್ರಧಾನಿ ಮೋದಿ ಅವರ ಜನ್ಮದಿನದ ಅಂಗವಾಗಿ ವೇದವ್ಯಾಸ ಗುರುಕುಲದಲ್ಲಿ ನೆರವೇರಿಸಲಾಗಿದ್ದ ಪೂರ್ಣ ನವಗ್ರಹ ಹಾಗೂ ರಾಷ್ಟ್ರಸೂಕ್ತ ಹೋಮದ ಪ್ರಸಾದವನ್ನು ಶುಭಾಶಯಗಳೊಂದಿಗೆ ಪ್ರಧಾನಿಯವರಿಗೆ ಹಸ್ತಾಂತರಿಸಲಾಯಿತು.
ಯೋಜನೆಯಲ್ಲಿ ದ್ವಾರಕೆಯನ್ನೂ ಸೇರಿಸುವಂತೆ ಸಲಹೆ
ಶ್ರೀ ವಿಶ್ವೇಶ ತೀರ್ಥರು ಹಾಗೂ ಪೇಜಾವರ ಮಠದ ಕೊಡುಗೆಗಳನ್ನು ಸ್ಮರಿಸಿದ ಪ್ರಧಾನಿ ಮೋದಿ, ಉಡುಪಿ ಮತ್ತು ದ್ವಾರಕೆಯ ನಡುವಿನ ಆಳವಾದ ಆಧ್ಯಾತ್ಮಿಕ ನಂಟನ್ನು ಉಲ್ಲೇಖಿಸಿದರು. ಜನ್ಮಶತಮಾನೋತ್ಸವದ ಐದು ವರ್ಷಗಳ ಯೋಜನೆಯಲ್ಲಿ ದ್ವಾರಕೆಯನ್ನೂ ಸೇರಿಸುವಂತೆ ಅವರು ಸಲಹೆ ನೀಡಿದರು.
ಶ್ರೀಗಳ ಸಂದೇಶ
ದೆಹಲಿಯಲ್ಲಿ ನಡೆಸಿದ ಚಾತುರ್ಮಾಸ್ಯ ವ್ರತ, ಧಾರ್ಮಿಕ ವಿಧಿವಿಧಾನಗಳು ಹಾಗೂ ಜನಸಾಮಾನ್ಯರಿಗೆ ಮಂತ್ರದೀಕ್ಷೆ ನೀಡುವ ಕಾರ್ಯ ಯಶಸ್ವಿಯಾಗಿ ನೆರವೇರಿದೆ ಎಂದು ವಿಶ್ವಪ್ರಸನ್ನ ತೀರ್ಥರು ಹೇಳಿದರು.
ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಯ ಲಾಂಛನವನ್ನು ಅನಾವರಣಗೊಳಿಸಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದ ಶ್ರೀಗಳು, ಪ್ರಧಾನಿಯವರಿಗೆ ಶುಭ ಹಾರೈಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



