ದೇಶ

ಇಬ್ಬರು ಅರ್ಚಕರಿಗೆ ಗುಂಡಿಕ್ಕಿ ಹತ್ಯೆ: ಮಕ್ಕಳನ್ನ ಒತ್ತೆಯಾಳಾಗಿ ಇರಿಸಿಕೊಂಡಿದ್ದ ವ್ಯಕ್ತಿ ಎನ್‌ಕೌಂಟರ್‌ಗೆ ಬಲಿ; ಆರೋಪಿಯ ಮಗನೂ ಸಾವು

ಪೊಲೀಸರು ಸ್ಥಳಕ್ಕೆ ಬಂದಾಗ ಆರೋಪಿ ತನ್ನ ಮಕ್ಕಳನ್ನ ಕೋಣೆಯೊಂದರಲ್ಲಿ ಕೂಡಿಹಾಕಿದ್ದ. ಪೊಲೀಸರು ಶರಣಾಗುವಂತೆ ಮತ್ತು ಮಕ್ಕಳನ್ನ ಸುರಕ್ಷಿತವಾಗಿ ಬಿಡುಗಡೆ ಮಾಡುವಂತೆ ಮನವೊಲಿಸಲು ಪ್ರಯತ್ನಿಸಿದರು ಆತ ಕರಗಲಿಲ್ಲ.

ಇಬ್ಬರು ಅರ್ಚಕರಿಗೆ ಗುಂಡಿಕ್ಕಿ ಹತ್ಯೆ: ಮಕ್ಕಳನ್ನ ಒತ್ತೆಯಾಳಾಗಿ ಇರಿಸಿಕೊಂಡಿದ್ದ ವ್ಯಕ್ತಿ ಎನ್‌ಕೌಂಟರ್‌ಗೆ ಬಲಿ; ಆರೋಪಿಯ ಮಗನೂ ಸಾವು
ಆರೋಪಿ ಅರವಿಂದ್ ಮತ್ತು ಪೊಲೀಸರು
Published On :

ಲಕ್ನೋ: ಉತ್ತರ ಪ್ರದೇಶದ ಅಜಮ್‌ಗಢದಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಅರ್ಚಕರನ್ನ ಗುಂಡಿಕ್ಕಿ ಕೊಂದು ಬಳಿಕ ಮೂವರು ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ವ್ಯಕ್ತಿಯೊಬ್ಬ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ. ಮೃತ ಆರೋಪಿಯನ್ನ ಅರವಿಂದ್‌ ಎಂದು ಗುರುತಿಸಲಾಗಿದೆ.

ಪೊಲೀಸರೊಂದಿಗೆ ಗುಂಡಿನ ಚಕಮಕಿ ವೇಳೆ ಆತ ತನ್ನ ಮೂರು ಮಕ್ಕಳಲ್ಲಿ ಒಬ್ಬನ ಮೇಲೂ ಗುಂಡು ಹಾರಿಸಿದ್ದನು. ಆ ಮಗು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಇನ್ನುಳಿದ ಇಬ್ಬರು ಮಕ್ಕಳನ್ನ ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಬಂದಾಗ ಆರೋಪಿ ತನ್ನ ಮಕ್ಕಳನ್ನ ಕೋಣೆಯೊಂದರಲ್ಲಿ ಕೂಡಿಹಾಕಿದ್ದ. ಪೊಲೀಸರು ಶರಣಾಗುವಂತೆ ಮತ್ತು ಮಕ್ಕಳನ್ನ ಸುರಕ್ಷಿತವಾಗಿ ಬಿಡುಗಡೆ ಮಾಡುವಂತೆ ಮನವೊಲಿಸಲು ಪ್ರಯತ್ನಿಸಿದರು ಆತ ಕರಗಲಿಲ್ಲ. ಪೊಲೀಸರು ಮತ್ತು ಕುಟುಂಬದವರ ಮೇಲೆ ಗುಂಡು ಹಾರಿಸುವುದಾಗಿ, ಜೊತೆಗೆ ಮಕ್ಕಳನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದಾರೆ.

ನಂತರ, ತನ್ನ ಮಗನ ಮೇಲೂ ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ಧ ಕೇಳಿ ಪೊಲೀಸರು ರೂಮಿನೊಳಗೆ ನುಗ್ಗಿದ್ದಾರೆ. ಆಗ ಆರೋಪಿ ಪೊಲೀಸರತ್ತ ಮನಬಂದಂತೆ ಗುಂಡು ಹಾರಿಸಲು ಶುರು ಮಾಡಿದ್ದಾನೆ. ನಾವು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಆರೋಪಿ ಗುಂಡು ಹಾರಿಸಿದ್ದಾನೆ.

ಪರಿಣಾಮವಾಗಿ ಆತ್ಮರಕ್ಷಣೆಗಾಗಿ ಹಾಗೂ ಮಕ್ಕಳ ರಕ್ಷಣೆಗಾಗಿ ನಾವು ಪ್ರತಿದಾಳಿ ನಡೆಸಬೇಕಾಯಿತು. ಈ ವೇಳೆ ಆರೋಪಿಗೆ ಗುಂಡು ತಗುಲಿ ಗಾಯಗೊಂಡಿದ್ದ. ತಕ್ಷಣ ಆತನನ್ನ ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆರೋಪಿ ಅರವಿಂದ್‌ ಹಾಗೂ ಆತನ ಮಗ ಇಬ್ಬರು ಮೃತಪಟ್ಟರು ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

ಮಾನಸಿಕ ಅಸ್ವಸ್ಥನೆಂದು ಹೇಳಲಾದ ಮತ್ತು ಆಕ್ರಮಣಕಾರಿ ವರ್ತನೆ ತೋರುತ್ತಿದ್ದ ಅರವಿಂದ್ ಸಿಂಗ್, ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಮನೆಗೆ ಮರಳಿದಾಗ, ತನ್ನ ಪತ್ನಿ ಬಬಿತಾ ಸಿಂಗ್ (32) ಇಬ್ಬರು ಅರ್ಚಕರಾದ ಮಹೇಂದ್ರ ಪಾಠಕ್ (60) ಮತ್ತು ಅಖಿಲೇಶ್ ಮಿಶ್ರಾ (50) ಅವರೊಂದಿಗೆ ಧಾರ್ಮಿಕ ವಿಧಿಯೊಂದರಲ್ಲಿ ತೊಡಗಿದ್ದನ್ನು ನೋಡಿದ್ದಾನೆ.

ಈ ವೇಳೆ ಮಾತಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ. ತೀವ್ರ ಕೋಪಗೊಂಡ ಅರವಿಂದ್ ತನ್ನ ಪರವಾನಗಿ ಪಡೆದ ಬಂದೂಕನ್ನು ಹೊರತೆಗೆದು, ಮೊದಲು ತನ್ನ ಪತ್ನಿಗೂ ನಂತರ ಆ ಇಬ್ಬರು ಅರ್ಚಕರಿಗೂ ಗುಂಡಿಕ್ಕಿದನು. ಬಳಿಕ ಆತ ತನ್ನ ಇಬ್ಬರು ಮಕ್ಕಳು ಮತ್ತು ತನ್ನ ಮೈದುನನ ಮಗುವನ್ನು ಕರೆದುಕೊಂಡು ಅವರೊಂದಿಗೆ ಒಂದು ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಕುಳಿತನು. ಪೂಜೆ ಮಾಡಲು ಐವರು ಅರ್ಚಕರು ಬಂದಿದ್ದರು. ಅದರಲ್ಲಿ ಮೂವರು ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.