IASಗೆ ಗುಡ್ ಬೈ; ಬಿಜೆಪಿ ಸೇರಿದ ಎರಡೇ ದಿನಕ್ಕೆ ಚುನಾವಣಾ ಟಿಕೆಟ್ ಪಡೆದ ದೇಬಾಶಿಶ್ ಶರ್ಮಾ
ಮಾಜಿ ಐಎಎಸ್ ಅಧಿಕಾರಿ ದೇಬಾಶಿಶ್ ಶರ್ಮಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಲೋಕಸಭಾ ಉಪಚುನಾವಣೆಯ ಬಿಜೆಪಿ ಟಿಕೆಟ್ ಪಡೆದಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಗುವಹಾಟಿ (ಅಸ್ಸಾಂ): ಮಾಜಿ ಐಎಎಸ್ ಅಧಿಕಾರಿ ದೇಬಾಶಿಶ್ ಶರ್ಮಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಲೋಕಸಭಾ ಉಪಚುನಾವಣೆಯ ಬಿಜೆಪಿ ಟಿಕೆಟ್ ಪಡೆದಿದ್ದಾರೆ. ಅಸ್ಸಾಂನ ನಾಗಾಂವ್ ಜಿಲ್ಲೆಯ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವರು ರಾಜಕೀಯ ಪ್ರವೇಶಕ್ಕಾಗಿ ತಮ್ಮ ಆಡಳಿತಾತ್ಮಕ ಹುದ್ದೆಯನ್ನು ತ್ಯಜಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಸ್ವಯಂ ನಿವೃತ್ತಿ ಪಡೆದು ಬಿಜೆಪಿ ಸೇರ್ಪಡೆಯಾದ ಐಎಎಸ್
ನಾಗಾಂವ್ ಜಿಲ್ಲಾಧಿಕಾರಿಯಾಗಿ (DC) ಕಾರ್ಯನಿರ್ವಹಿಸುತ್ತಿದ್ದ ದೇಬಾಶಿಶ್ ಶರ್ಮಾ ಅವರು ಸೆಪ್ಟೆಂಬರ್ 3, 2026 ರಂದು ತಮ್ಮ ಐಎಎಸ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಅದಾದ ಐದೇ ದಿನಗಳಲ್ಲಿ ಅಂದರೆ ಸೆಪ್ಟೆಂಬರ್ 8 ರಂದು ಗುವಾಹಟಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿ ಸೇರಿದರು. ಇನ್ನು, ಬಿಜೆಪಿ ಪಕ್ಷಕ್ಕೆ ಸೇರಿದ ಕೇವಲ ಎರಡೇ ದಿನಗಳ ಬಳಿಕ, ಅಂದರೆ ಸೆಪ್ಟೆಂಬರ್ 10 ರಂದು ಪಕ್ಷದ ಹೈಕಮಾಂಡ್ ಮುಂಬರುವ ನಾಗಾಂವ್ ಲೋಕಸಭಾ ಉಪಚುನಾವಣೆಗೆ ಇವರ ಹೆಸರನ್ನು ತನ್ನ ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಿಸಿದೆ.
ಆಯೋಗದ ಮೊರೆಹೋದ ಕಾಂಗ್ರೆಸ್
ಅಧಿಕಾರಿಯಾಗಿದ್ದ ವ್ಯಕ್ತಿ ತಕ್ಷಣವೇ ನಿವೃತ್ತಿ ಪಡೆದು ಚುನಾವಣಾ ಕಣಕ್ಕಿಳಿದಿರುವುದು ಈಗ ಅಸ್ಸಾಂ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅದರಂತೆ, ದೇಬಾಶಿಶ್ ಶರ್ಮಾ ಅವರು ಜಿಲ್ಲಾಧಿಕಾರಿಯಾಗಿ ಅಧಿಕಾರದಲ್ಲಿದ್ದಾಗ ಇತ್ತೀಚಿನ ಚುನಾವಣಾ ಪ್ರಕ್ರಿಯೆಗಳ (ಇವಿಎಂ ನಿರ್ವಹಣೆ ಮತ್ತು ಸಿಬ್ಬಂದಿ ನಿಯೋಜನೆ) ಜವಾಬ್ದಾರಿ ಹೊತ್ತಿದ್ದರಿಂದ, ಇವರ ದಿಢೀರ್ ರಾಜಕೀಯ ಪ್ರವೇಶವು ಚುನಾವಣೆಯ ತಟಸ್ಥತೆಯ ಮೇಲೆ ಪ್ರಭಾವ ಬೀರಬಹುದು ಎಂದು ಆರೋಪಿಸಿ ಕಾಂಗ್ರೆಸ್ ಸಂಸದ ರಾಕಿಬುಲ್ ಹುಸೇನ್ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಯಾಕೆ ಈ ಉಪಚುನಾವಣೆ?
ನಾಗಾಂವ್ ಲೋಕಸಭಾ ಕ್ಷೇತ್ರದಿಂದ ಈ ಹಿಂದೆ ಕಾಂಗ್ರೆಸ್ನಿಂದ ಗೆದ್ದಿದ್ದ ಸಂಸದ ಪ್ರದ್ಯುತ್ ಬೊರ್ಡೊಲೊಯ್ ಅವರು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡು ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಇದರಿಂದಾಗಿ ತೆರವಾದ ನಾಗಾಂವ್ ಕ್ಷೇತ್ರಕ್ಕೆ ಅಕ್ಟೋಬರ್ 6ರಂದು ಉಪಚುನಾವಣೆ ನಿಗದಿಯಾಗಿದ್ದು, ಅಕ್ಟೋಬರ್ 9 ರಂದು ಚುನಾವಣೆಯ ಫಲಿತಾಶ ಬರಲಿದೆ.
ಯಾರು ಈ ದೇಬಾಶಿಶ್ ಶರ್ಮಾ?
ದೇಬಾಶಿಶ್ ಶರ್ಮಾ ಅವರು ಅಸ್ಸಾಂ ಅಡ್ಮಿನಿಸ್ಟ್ರೇಟಿವ್ ಸರ್ವೀಸ್ ಮತ್ತು ಭಾರತೀಯ ಆಡಳಿತ ಸೇವೆ ವಲಯದಲ್ಲಿ ಸುದೀರ್ಘ 34 ವರ್ಷಗಳ ಕಾಲ ಸೇವೆ ಸಲ್ಲಿಸಿದ ಪ್ರಮುಖ ಮಾಜಿ ಅಧಿಕಾರಿಯಾಗಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ರಾಮ್ಜಾಸ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಹಾಗೂ ಸಾರ್ವಜನಿಕ ಸಂಪರ್ಕದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶರ್ಮಾ ಅವರು 1992ರಲ್ಲಿ ಅಸ್ಸಾಂ ನಾಗರಿಕ ಸೇವೆಗೆ ಸೇರ್ಪಡೆಯಾಗಿದ್ದರು. ಬರ್ಪೇಟಾದಲ್ಲಿ ಮೊದಲ ನಿಯೋಜನೆ ಪಡೆದಿದ್ದರು. ಬಳಿಕ ಅಸ್ಸಾಂನ ಅಂದಿನ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಎಸ್.ಕೆ. ಸಿನ್ಹಾ ಅವರ ವಿಶೇಷ ಅಧಿಕಾರಿಯಾಗಿದ್ದರು. ತದನಂತರ ಅವರಿಗೆ 2011 ರ ಬ್ಯಾಚ್ನ ಐಎಎಸ್ (IAS) ಹುದ್ದೆಗೆ ಬಡ್ತಿ ನೀಡಲಾಯಿತು. ಇದಾದ ತರುವಾಯು, ಮುಂಬೈನ ಅಸ್ಸಾಂ ಭವನದ ಉಪ ನಿವಾಸಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಮಹಾರಾಷ್ಟ್ರದಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವ ಜವಾಬ್ದಾರಿಯನ್ನೂ ನಿರ್ವಹಿಸಿದ್ದರು. ಗುವಾಹಟಿ ಮಹಾನಗರ ಪಾಲಿಕೆಯ ಆಯುಕ್ತರಾಗಿ, ಮೊರಿಗಾಂವ್ ಜಿಲ್ಲಾಧಿಕಾರಿಯಾಗಿಯೂ ಶರ್ಮಾ ಕಾರ್ಯನಿರ್ವಹಿಸಿದ್ದರು. ಬಳಿಕ ನಗಾಂವ್ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿದ್ದ ಅವರು ಅಲ್ಲಿಂದಲೇ ಸ್ವಯಂ ನಿವೃತ್ತಿ ಪಡೆದಿದ್ದರು. ಇದರೊಂದಿಗೆ, ಕ್ಯಾನ್ಸರ್ ಆರೈಕೆ ಸಂಸ್ಥೆ 'ದೀಪಶಿಖಾ'ದ ಸ್ಥಾಪಕ ಅಧ್ಯಕ್ಷ ಹಾಗೂ ಟ್ರಸ್ಟಿಯಾಗಿಯೂ ಶರ್ಮಾ ಸೇವೆ ಸಲ್ಲಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



