Devi Awards 2026: ಮಹಿಳೆಯರನ್ನು ಕೇವಲ ಫಲಾನುಭವಿಗಳಾಗಿ ನೋಡುವ ಬದಲು ಅಭಿವೃದ್ಧಿಯ ಪಾಲುದಾರರು, ನಾಯಕಿಯರನ್ನಾಗಿ ಪರಿಗಣಿಸಬೇಕು- ಒಡಿಶಾ ಡಿಸಿಎಂ
ಈ ಕಾರ್ಯಕ್ರಮದಲ್ಲಿ TNIE ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಮತ್ತು ಗ್ರೂಪ್ ಸಿಇಒ ಲಕ್ಷ್ಮಿ ಮೆನನ್ ಉಪಸ್ಥಿತರಿದ್ದರು.

ಭುವನೇಶ್ವರ: ಮಹಿಳೆಯರನ್ನು ಕೇವಲ ಕಲ್ಯಾಣ ಯೋಜನೆಗಳ ಫಲಾನುಭವಿಗಳಾಗಿ ನೋಡುವ ಮನಸ್ಥಿತಿಯಿಂದ ಹೊರಬಂದು, ಅವರನ್ನು ಅಭಿವೃದ್ಧಿಯ ಪಾಲುದಾರರು, ನಾಯಕಿಯರು ಮತ್ತು ಚಾಲಕ ಶಕ್ತಿಗಳನ್ನಾಗಿ ಗುರುತಿಸುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಪ್ರವತಿ ಪರಿಡಾ ಭಾನುವಾರ ಕರೆ ನೀಡಿದರು.
'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' (TNIE) ಆಯೋಜಿಸಿದ್ದ 'ದೇವಿ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಒಡಿಶಾವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಪರಿವರ್ತಿಸುವಲ್ಲಿ ಮತ್ತು 'ವಿಕಸಿತ ಭಾರತ'ದ ರಾಷ್ಟ್ರೀಯ ಗುರಿಯನ್ನು ಸಾಧಿಸುವಲ್ಲಿ ಮಹಿಳಾ ನೇತೃತ್ವದ ಬೆಳವಣಿಗೆಯು ಕೇಂದ್ರಬಿಂದುವಾಗಬೇಕು ಎಂದು ಪ್ರತಿಪಾದಿಸಿದರು. ಈ ಕಾರ್ಯಕ್ರಮದಲ್ಲಿ TNIE ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಮತ್ತು ಗ್ರೂಪ್ ಸಿಇಒ ಲಕ್ಷ್ಮಿ ಮೆನನ್ ಉಪಸ್ಥಿತರಿದ್ದರು.
"ದೇವಿ ಪ್ರಶಸ್ತಿಗಳು 'ಶಕ್ತಿ'ಯ ಆಧುನಿಕ ಅಭಿವ್ಯಕ್ತಿಯನ್ನು ಅಂದರೆ ಸಮಾಜವನ್ನು ಸೃಷ್ಟಿಸುವ, ಮುನ್ನಡೆಸುವ ಮತ್ತು ಪರಿವರ್ತಿಸುವ ಮಹಿಳೆಯರನ್ನು ಗೌರವಿಸುತ್ತವೆ. ನಾವು ನಮ್ಮ ದೇವಾಲಯಗಳಲ್ಲಿ ಶಕ್ತಿ ದೇವತೆಯನ್ನು ಪೂಜಿಸುತ್ತೇವೆ ಮತ್ತು ನಮ್ಮ ಸಂಪ್ರದಾಯಗಳಲ್ಲಿ ಮಹಿಳೆಯರ ಶಕ್ತಿಯನ್ನು ಗೌರವಿಸುತ್ತೇವೆ. ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅಗತ್ಯವಾದ ಅವಕಾಶಗಳು, ಸಂಪನ್ಮೂಲಗಳು ಮತ್ತು ಸ್ವಾತಂತ್ರ್ಯವನ್ನು ಒದಗಿಸುವ ವಾತಾವರಣವನ್ನು ಸಮಾಜವು ಸೃಷ್ಟಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ 'ಮಿಷನ್ ಶಕ್ತಿ'ಯ ಸಚಿವೆಯೂ ಆಗಿರುವ ಪರಿಡಾ ಹೇಳಿದರು.
"ನಮ್ಮ ಹೆಣ್ಣುಮಕ್ಕಳು ಉದ್ಯಮಿಗಳಾಗಬೇಕೆಂದು ನಾವು ಬಯಸುತ್ತೇವೆ. ಮಹಿಳೆಯರು ಉದ್ಯಮಗಳನ್ನು ಮುನ್ನಡೆಸಬೇಕು ಹಾಗೂ ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಅಳವಡಿಸಿಕೊಳ್ಳಬೇಕು ಎಂದು ನಾವು ಆಶಿಸುತ್ತೇವೆ. ಆಡಳಿತ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆ ಇರಬೇಕು ಎಂದು ಪರಿಡಾ ಹೇಳಿದರು.
'ಮಿಷನ್ ಶಕ್ತಿ'ಯನ್ನು ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯ ಪ್ರಮುಖ ಸಾಧನ ಎಂದು ಬಣ್ಣಿಸಿದ ಪರಿಡಾ, "ಒಡಿಶಾದ ದೃಷ್ಟಿಕೋನವು ಮಹಿಳಾ ಕಲ್ಯಾಣದಿಂದ ಮಹಿಳಾ ಸಬಲೀಕರಣದತ್ತ, ಮಹಿಳಾ ಸಬಲೀಕರಣದಿಂದ ಮಹಿಳಾ ನಾಯಕತ್ವದತ್ತ ಮತ್ತು ಮಹಿಳಾ ನಾಯಕತ್ವದಿಂದ ಮಹಿಳಾ ನೇತೃತ್ವದ ಆರ್ಥಿಕತೆಯತ್ತ ವಿಕಸನಗೊಳ್ಳುತ್ತಿದೆ ಎಂದು ಹೇಳಿದರು.
'ಸುಭದ್ರಾ' ಯೋಜನೆಯ ಕುರಿತು ಮಾತನಾಡಿದ ಅವರು, ಇದರ ಉದ್ದೇಶ ಕೇವಲ ಆರ್ಥಿಕ ನೆರವು ನೀಡುವುದಲ್ಲ, ಬದಲಾಗಿ ಮಹಿಳೆಯರ ಆತ್ಮವಿಶ್ವಾಸ, ಆರ್ಥಿಕ ಸ್ವಾತಂತ್ರ್ಯ ಹಾಗೂ ಆರ್ಥಿಕತೆ ಮತ್ತು ಸಮಾಜದಲ್ಲಿ ಅವರ ಭಾಗವಹಿಸುವಿಕೆಯನ್ನು ಬಲಪಡಿಸುವುದಾಗಿದೆ. ಒಬ್ಬ ಮಹಿಳೆ ಆರ್ಥಿಕವಾಗಿ ಸಬಲಳಾದಾಗ, ಅದರ ಪ್ರಭಾವವು ಆಕೆಯ ವೈಯಕ್ತಿಕ ಜೀವನವನ್ನೂ ಮೀರಿ ವಿಸ್ತರಿಸುತ್ತದೆ. ಆಕೆ ತನ್ನ ಕುಟುಂಬ, ಸಮುದಾಯ ಮತ್ತು ಅಂತಿಮವಾಗಿ ರಾಜ್ಯ ಹಾಗೂ ರಾಷ್ಟ್ರದ ಆರ್ಥಿಕತೆಯನ್ನು ಬಲಪಡಿಸುತ್ತಾಳೆ ಎಂದು ಅವರು ಹೇಳಿದರು.
ಪ್ರಶಸ್ತಿ ಪುರಸ್ಕೃತರು ಅಡೆತಡೆಗಳನ್ನು ಮುರಿಯುವುದನ್ನು ಮತ್ತು ಇತರರಿಗೆ ಅವಕಾಶಗಳ ಬಾಗಿಲು ತೆರೆಯುವುದನ್ನು ಮುಂದುವರಿಸುವಂತೆ ಕರೆ ನೀಡಿದ ಅವರು, "ಯಶಸ್ಸಿನ ಅತಿ ದೊಡ್ಡ ಮಾನದಂಡವೆಂದರೆ ನಾವು ವೈಯಕ್ತಿಕವಾಗಿ ಎಷ್ಟು ಎತ್ತರಕ್ಕೆ ಏರುತ್ತೇವೆ ಎಂಬುದಲ್ಲ; ಬದಲಾಗಿ, ನಾವು ಏರಿದ ಕಾರಣದಿಂದಾಗಿ ಎಷ್ಟು ಮಂದಿ ಇತರರು ಮೇಲೆ ಬರುತ್ತಾರೆ ಎಂಬುದೇ ಆಗಿದೆ. ಸ್ಫೂರ್ತಿ ನೀಡುವುದನ್ನು, ಅಡೆತಡೆಗಳನ್ನು ಮುರಿಯುವುದನ್ನು ಮತ್ತು ಇತರರಿಗೆ ಅವಕಾಶಗಳನ್ನು ಕಲ್ಪಿಸಿಕೊಡುವುದನ್ನು ಮುಂದುವರಿಸಿ. ನೀವು ಒಂದು ಹೆಜ್ಜೆ ಮುಂದಿಟ್ಟಾಗಲೆಲ್ಲಾ, ಮತ್ತೊಬ್ಬ ಮಹಿಳೆಯನ್ನೂ ನಿಮ್ಮೊಂದಿಗೆ ಕರೆದೊಯ್ಯುವುದನ್ನು ನೆನಪಿಡಿ ಎಂದರು.
ಮಹಿಳೆಯರ ಸಂಪೂರ್ಣ ಭಾಗವಹಿಸುವಿಕೆ ಇಲ್ಲದೆ ಅಭಿವೃದ್ಧಿ ಹೊಂದಿದ ಒಡಿಶಾವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿದ ಉಪಮುಖ್ಯಮಂತ್ರಿಯವರು, 'ದೇವಿ ಪ್ರಶಸ್ತಿಗಳು' ಒಡಿಶಾ ಮತ್ತು ಭಾರತದ ಮೂಲೆಮೂಲೆಗಳಿಂದ ಮಹಿಳೆಯರನ್ನು ಗುರುತಿಸುವುದನ್ನು ಮತ್ತು ಗೌರವಿಸುವುದನ್ನು ಮುಂದುವರಿಸುತ್ತವೆ ಎಂಬ ಆಶಯ ವ್ಯಕ್ತಪಡಿಸಿದರು.
ಒಡಿಶಾದಲ್ಲಿ ನಡೆದ ಐದನೇ ಆವೃತ್ತಿಯ 'ದೇವಿ ಪ್ರಶಸ್ತಿ' ಸಮಾರಂಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠತೆ, ಬದ್ಧತೆ ಮತ್ತು ಗಮನಾರ್ಹ ಪ್ರಭಾವವನ್ನು ಪ್ರದರ್ಶಿಸಿದ 10 ಸಾಧಕ ಮಹಿಳೆಯರನ್ನು ಗೌರವಿಸಲಾಯಿತು.
ಒಡಿಸ್ಸಿ ನೃತ್ಯಗಾರ್ತಿ ಮತ್ತು ನೃತ್ಯ ಸಂಯೋಜಕಿ ಅರುಣಾ ಮೊಹಂತಿ, ಹಿರಿಯ ಐಪಿಎಸ್ ಅಧಿಕಾರಿ ಶೈನಿ ಎಸ್. ಪಟ್ಟಚಿತ್ರ ಕಲಾವಿದೆ ಲಕ್ಷ್ಮಿ ಮೆಹರ್; ಖ್ಯಾತ ಲೇಖಕಿ ಪರಮಿತಾ ಸತ್ಪಥಿ; ವಿಜ್ಞಾನಿ ಮತ್ತು ಉದ್ಯಮಿ ಸುಮೋನಾ ಕಾರ್ಜಿ ಮಿಶ್ರಾ, ವಿಜ್ಞಾನಿ ಪ್ರೊ. ದೇಬಸ್ಮಿತಾ ಪಂಕಜ್; ರಂಗಭೂಮಿ ಕಲಾವಿದೆ ಮತ್ತು ನಟಿ ಸುಜಾತಾ ಪ್ರಿಯಂಬದಾ ಚೌಧರಿ, ಉದ್ಯಮಿ ನೀನಾ ಸಿಂಗ್; ಪರಿಸರವಾದಿ ಮತ್ತು ಸಂರಕ್ಷಣಾ ಕಾರ್ಯಕರ್ತೆ ನಳಿನಿ ಕಂಡಿ ಹಾಗೂ ಪ್ಯಾರಾ-ಅಥ್ಲೀಟ್ ಜಯಂತಿ ಬೆಹೆರಾ ಅವರಿಗೆ ಪ್ರತಿಷ್ಟಿತ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



