ದೇಶ

ಹಲ್ಲೆ ಆರೋಪ: ಹಿಂದುತ್ವ ಇನ್ ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್‌ ಒಂದು ದಿನ ಪೊಲೀಸ್ ಕಸ್ಟಡಿಗೆ!

ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ಪ್ರತಾಪ್ ಸಿಂಗ್ ಲಾಲೇರ್ ಅವರ ನಿವಾಸದಲ್ಲಿ ಭಾರದ್ವಾಜ್ ಅವರನ್ನು ಹಾಜರುಪಡಿಸಲಾಯಿತು.

ಹಲ್ಲೆ ಆರೋಪ: ಹಿಂದುತ್ವ ಇನ್ ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್‌ ಒಂದು ದಿನ ಪೊಲೀಸ್ ಕಸ್ಟಡಿಗೆ!
ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ ಹೊರಗೆ ಸಿಬ್ಬಂದಿ
Published On :

ನವದೆಹಲಿ: ಜುಲೈನಲ್ಲಿ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಅಪ್ರಾಪ್ತ ಕಾರ್ಯಕರ್ತರೊಬ್ಬರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ, ಹಿಂದುತ್ವ ಇನ್ ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್ ಅವರನ್ನು ದೆಹಲಿ ನ್ಯಾಯಾಲಯ ಶನಿವಾರ ಒಂದು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ಪ್ರತಾಪ್ ಸಿಂಗ್ ಲಾಲೇರ್ ಅವರ ನಿವಾಸದಲ್ಲಿ ಭಾರದ್ವಾಜ್ ಅವರನ್ನು ಹಾಜರುಪಡಿಸಲಾಯಿತು. ಅವರ ಪರ ವಕೀಲರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾದರು ಎಂದು ನ್ಯಾಯಾಲಯದ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಸಂಸತ್ ಭವನದ ರಸ್ತೆಯಲ್ಲಿರುವ ಪೊಲೀಸ್ ಠಾಣೆಯ ಹೊರಗೆ ಭಾರದ್ವಾಜ್ ಅವರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕೆಲವೇ ಗಂಟೆಗಳಲ್ಲಿ ಶುಕ್ರವಾರ ಬುಲಂದ್‌ಶಹರ್‌ನಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ದೆಹಲಿ ಪೊಲೀಸರು ಭಾರದ್ವಾಜ್ ವಿರುದ್ಧದ ಎಫ್‌ಐಆರ್‌ನಲ್ಲಿ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಕ್ರಿಮಿನಲ್ ಬೆದರಿಕೆ ವಿಭಾಗಗಳನ್ನು ಸೇರಿಸಿದ್ದಾರೆ. ಅವರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿ ಪ್ರತ್ಯೇಕ ಪ್ರಕರಣವನ್ನೂ ದಾಖಲಿಸಲಾಗಿದೆ.

ಜುಲೈ 20 ರ ಪ್ರತಿಭಟನೆಯ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿ ನಿಶು ಆಜಾದ್ ತಂದೆಯ "ತಲೆಬುರುಡೆ ಒಡೆದಿದ್ದೇನೆ ಮತ್ತು ರಾಜಕೀಯ ಸಂಪರ್ಕಗಳ ಕಾರಣದಿಂದಾಗಿ ಬಂಧನದಿಂದ ತಪ್ಪಿಸಿಕೊಂಡಿದ್ದೇನೆ ಎಂದು ಭಾರದ್ವಾಜ್ ಹೇಳಿಕೊಂಡಿರುವ ಸಂದರ್ಶನವೊಂದು ವೈರಲ್ ಆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ನಾನು ತಲೆಬುರುಡೆ ಒಡೆದ್ದೀನೆ. ಈ ಅಪರಾಧಕ್ಕೆ ಯಾವ ಸೆಕ್ಷನ್ ಅನ್ವಯಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಸೆಕ್ಷನ್ 307. ಅವರಿಗೆ 60 ಹೊಲಿಗೆಗಳು ಬೇಕಾದವು," ಎಂದು ಭಾರದ್ವಾಜ್ ಆ ಸಂದರ್ಶನದಲ್ಲಿ ಹೇಳಿದ್ದರು.

ಆ ವ್ಯಕ್ತಿಗೆ ಆದ ಗಾಯಗಳು "ಸಾಮಾನ್ಯ" ಸ್ವರೂಪದ್ದಾಗಿದ್ದು, ಉಕ್ಕಿನ ಬಳೆಯಿಂದ ಉಂಟಾಗಿವೆ ಎಂದು ದೆಹಲಿ ಪೊಲೀಸರು ಈ ಹಿಂದೆ ಹೇಳಿದ್ದರು. ನಂತರ ಭಾರದ್ವಾಜ್ ತಾವು ಆತ್ಮರಕ್ಷಣೆಗಾಗಿ ಹಾಗೆ ಮಾಡಿದ್ದಾಗಿ ಹೇಳಿಕೊಂಡಿದ್ದರು.

ಶುಕ್ರವಾರ ನಡೆದ ಮತ್ತೊಂದು ಬೆಳವಣಿಗೆಯಲ್ಲಿ, ಆನ್‌ಲೈನ್ ಬೆದರಿಕೆ ಮತ್ತು ಕಿರುಕುಳದ ಆರೋಪದ ಮೇಲೆ ಅಪ್ರಾಪ್ತ ಕಾರ್ಯಕರ್ತರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪೋಕ್ಸೊ (POCSO) ಕಾಯ್ದೆಯಡಿ ಹೊಸ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 351(3), 78 ಮತ್ತು 79 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ಅನ್ನು ಸಹ ಈ ಪ್ರಕರಣದಲ್ಲಿ ಅನ್ವಯಿಸಿದ್ದಾರೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.