Video: ಉರಿಯುತ್ತಿದ್ದ ಚಿತೆಯಿಂದ ಮಾಂಸ ತೆಗೆದು ತಿಂದ 'ಅಘೋರಿ'; ಉಜ್ಜೈನ್ ಪೊಲೀಸರಿಂದ ಬಂಧನ
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ನಡೆದಿದ್ದು, ಚಿತೆಯಲ್ಲಿ ಉರಿಯುತ್ತಿದ್ದ ಶವದ ತುಂಡುಗಳನ್ನು ತಿಂದಿರುವುದಾಗಿ ಹೇಳಿಕೊಂಡಿದ್ದ ಮಂಗಳಮುಖಿ ಅಘೋರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉಜ್ಜೈನ್: ಉರಿಯುತ್ತಿದ್ದ ಚಿತೆಯಿಂದ ಮಾಂಸ ತೆಗೆದು ತಿಂದ ಆರೋಪದ ಮೇರೆಗೆ ಮಂಗಳಮುಖಿ ಆಘೋರಿಯನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ನಡೆದಿದ್ದು, ಚಿತೆಯಲ್ಲಿ ಉರಿಯುತ್ತಿದ್ದ ಶವದ ತುಂಡುಗಳನ್ನು ತಿಂದಿರುವುದಾಗಿ ಹೇಳಿಕೊಂಡಿದ್ದ ಮಂಗಳಮುಖಿ ಅಘೋರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ ಕಿನ್ನರ್ ಅಖಾಡಕ್ಕೆ ಸಂಬಂಧಿಸಿದ್ದಾಗಿ ಹೇಳಿಕೊಂಡಿರುವ ಕಾಳಿ ಅಲಿಯಾಸ್ ನಂದಗಿರಿ ಎಂಬ ಆಘೋರಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೋ ವೈರಲ್ ಆದ ಬಳಿಕ ಮಧ್ಯ ಪ್ರದೇಶ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಚಿತೆಯಿಂದ ಶವದ ಮಾಂಸ ತೆಗೆದು ತಿಂದ ಆಘೋರಿ?
ಇನ್ನು ಈ ಆಘೋರಿ digambarladyaghorinagasadhvi ಎಂಬ ಇನ್‌ಸ್ಟಾಗ್ರಾಂ ಖಾತೆ ಹೊಂದಿದ್ದು, ಇದೇ ಖಾತೆಯಲ್ಲಿ ಸ್ಮಶಾನ ಜೀವನ ಮತ್ತು ಚಿತೆಯಿಂದ ಮೃತದೇಹದ ಮಾಂಸ ತೆಗೆದು ತಿನ್ನುವ ವಿಡಿಯೋ ಅಪ್ಲೋಡ್ ಮಾಡಿದ್ದರು. ವಿವಾದ ಬಳಿಕ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದರು.
ಆದರೆ ಅಷ್ಟು ಹೊತ್ತಿಗಾಗಲೇ ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹಲವರು ಇದನ್ನು ಅಮಾನವೀಯ ಕೃತ್ಯ ಎಂದು ಆರೋಪಿಸಿ, ಪೊಲೀಸರ ಕ್ರಮಕ್ಕೆ ಒತ್ತಾಯಿಸಿದ್ದರು.
ಮಾನವ ಮಾಂಸ ‘ಟೇಸ್ಟಿ’ ಎಂದಿದ್ದ ಅಘೋರಿ?
ವೈರಲ್ ಆಗಿದ್ದ ಮೊದಲ ವಿಡಿಯೋದಲ್ಲಿ ಕಾಳಿ ಅಲಿಯಾಸ್ ನಂದಗಿರಿ ಉರಿಯುತ್ತಿದ್ದ ಚಿತೆಯಿಂದ ಶವದ ತುಂಡುಗಳನ್ನು ತೆಗೆದು ತಿನ್ನುತ್ತಿರುವುದಾಗಿ ಹೇಳಿಕೊಳ್ಳುತ್ತಿರುವುದು ಕಂಡುಬಂದಿತ್ತು. ಇದೇ ವೇಳೆ ಮಾನವ ಮಾಂಸ ಬಿಸಿಯಾಗಿದ್ದು, ರುಚಿಕರವಾಗಿದೆ ಎಂದು ಹೇಳಿಕೊಂಡಿದ್ದಾಳೆ ಎನ್ನಲಾಗಿದೆ.
ದೂರು ಆಧರಿಸಿ FIR, ಅರೆಸ್ಟ್
ವಿಷಯ ಬೆಳಕಿಗೆ ಬಂದ ಬಳಿಕ ಜೀವಾಜಿಗಂಜ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಠಾಣಾಧಿಕಾರಿ ಪ್ರತೀಕ್ ಶರ್ಮಾ ಅವರ ಪ್ರಕಾರ, ವಿಷ್ಣುನಾಥ್ ಜಿ ಎಂಬ ವ್ಯಕ್ತಿ ವೈರಲ್ ವಿಡಿಯೋ ಆಧರಿಸಿ ಕಾಳಿ ಅಲಿಯಾಸ್ ನಂದಗಿರಿ ವಿರುದ್ಧ ದೂರು ದಾಖಲಿಸಲಾಗಿತ್ತು.
ದೂರಿನ ಆಧಾರದ ಮೇಲೆ ನಂದಗಿರಿ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 301ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಬಳಿಕ ಆಕೆಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಡಿಯೋ ವೈರಲ್ ಬಳಿಕ ಬೆದರಿಕೆ
ಮಾನವ ಮಾಂಸ ತಿನ್ನುತ್ತಿರುವುದಾಗಿ ಹೇಳಿಕೊಂಡಿದ್ದ ಮೊದಲ ವಿಡಿಯೋ ವೈರಲ್ ಆದ ಬಳಿಕ ಕಾಳಿ ನಂದಗಿರಿ ತನ್ನ ಇನ್‌ಸ್ಟಾಗ್ರಾಂ ಖಾತೆಯಿಂದ ಆ ವಿಡಿಯೋವನ್ನು ಅಳಿಸಿದ್ದಾಳೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಸೋಮವಾರ ರಾತ್ರಿ ಸ್ಮಶಾನದಿಂದ ಆಕೆಯ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋದಲ್ಲಿ ಆಕೆ ಚಿತೆಯ ಬೂದಿಯನ್ನು ಮುಖ ಹಾಗೂ ದೇಹಕ್ಕೆ ಹಚ್ಚಿಕೊಳ್ಳುತ್ತಿರುವುದು ಕಂಡುಬರುತ್ತದೆ.
ತನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿರುವವರನ್ನು ಆಕೆ ಬೆದರಿಸುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಬೆನ್ನ ಹಿಂದೆ ನಿಂತು ಮಾತನಾಡುವವರಿಗೆ ಧೈರ್ಯವಿದ್ದರೆ ನೇರವಾಗಿ ಬಂದು ಮಾತನಾಡಲಿ ಎಂದು ಆಕೆ ಸವಾಲು ಹಾಕಿದ್ದಾಳೆ ಎನ್ನಲಾಗಿದೆ. ಅಲ್ಲದೆ, ತಾನು ಚಕ್ರತೀರ್ಥದಲ್ಲೇ ಇರುವುದಾಗಿ ಹೇಳಿಕೊಂಡಿರುವ ಆಕೆ, ತನ್ನ ವಿರುದ್ಧ ಮಾತನಾಡುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ.
ವಿವಾದ ಮೊದಲೇನಲ್ಲ
ಈ ಹಿಂದೆ ಇದೇ ಮಂಗಳಮುಖಿ ಆಘೋರಿ ಆಂಧ್ರ ಪ್ರದೇಶದಲ್ಲೂ ಸಾಕಷ್ಟು ವಿವಾದಗಳಿಂದಾಗಿ ಸುದ್ದಿಗೆ ಗ್ರಾಸವಾಗಿದ್ದರು.
ವರ್ಷಿಣಿ ಎಂಬ ಯುವತಿ ಜೊತೆಗಿನ ಪ್ರೇಮ-ವಿವಾಹಗಳಿಂದಾಗಿ ಆಂಧ್ರಪ್ರದೇಶದಲ್ಲಿ ಇದೇ ನಾಗಾ ಅಘೋರಿ ವ್ಯಾಪಕ ವಿವಾದಕ್ಕೆ ಕಾರಣವಾಗಿದ್ದರು. ಬಳಿಕ ದೇಗುಲವೊಂದರಲ್ಲಿ ಅಕ್ರಮ ಪ್ರವೇಶ ಮಾಡಿ ದೇಗುಲದ ಸಿಬ್ಬಂದಿಗಳೊಂದಿಗೆ ಕಾದಾಟ ನಡೆಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




