ಶಿಕ್ಷಕರ ಕೊರತೆ ಎಂದು ದೂರಿದ್ದೇ ತಪ್ಪಾಯ್ತು ಪಂಜಾಬ್ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತು!
ಪಂಜಾಬ್‌ನ ಬಟಿಂಡಾ ಜಿಲ್ಲೆಯ ಮೌರ್ ಕ್ಷೇತ್ರದ ಎಎಪಿ (AAP) ಶಾಸಕ ಸುಖವೀರ್ ಸಿಂಗ್ ಮೈಸರ್‌ಖಾನಾ ಶಿಕ್ಷಕರ ಕೊರತೆಯ ಬಗ್ಗೆ ಮಾತನಾಡಿದ್ದರು.

ತಮ್ಮ ಕ್ಷೇತ್ರದಲ್ಲಿನ ಕೆಲವು ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯ ಸಮಸ್ಯೆಯನ್ನು ಬಗೆಹರಿಸದಿರುವ ಬಗ್ಗೆ ಶನಿವಾರ ತಮ್ಮ ಪಕ್ಷದ ನಾಯಕತ್ವ ಮತ್ತು ಪಂಜಾಬ್ ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ಶಾಸಕನನ್ನು ಆಮ್ ಆದ್ಮಿ ಪಕ್ಷದ ಶಾಸಕನನ್ನು ಅಮಾನತು ಮಾಡಲಾಗಿದೆ.
ಪಂಜಾಬ್‌ನ ಬಟಿಂಡಾ ಜಿಲ್ಲೆಯ ಮೌರ್ ಕ್ಷೇತ್ರದ ಎಎಪಿ (AAP) ಶಾಸಕ ಸುಖವೀರ್ ಸಿಂಗ್ ಮೈಸರ್‌ಖಾನಾ ಶಿಕ್ಷಕರ ಕೊರತೆಯ ಬಗ್ಗೆ ಮಾತನಾಡಿದ್ದರು.
ಆದರೆ, ಆಮ್ ಆದ್ಮಿ ಪಕ್ಷವು (ಎಎಪಿ) ಮೈಸರ್‌ಖಾನಾ ಅವರ ಆರೋಪಗಳನ್ನು ತಳ್ಳಿಹಾಕಿದ್ದು "ಪಕ್ಷ ವಿರೋಧಿ ಚಟುವಟಿಕೆಗಳು ಹಾಗೂ ಶಿಸ್ತು ಉಲ್ಲಂಘನೆ"ಯ ಆರೋಪದ ಮೇಲೆ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ.
ಇದಕ್ಕೂ ಮುನ್ನ, ತಮ್ಮ ಫೇಸ್‌ಬುಕ್ ಪುಟದಲ್ಲಿ ನೇರ ಪ್ರಸಾರದ (ಲೈವ್) ಮೂಲಕ ಮಾತನಾಡಿದ ಮೈಸರ್‌ಖಾನಾ, ಶಿಕ್ಷಕರ ಕೊರತೆಗೆ ಸಂಬಂಧಿಸಿದ ತಮ್ಮ ಕುಂದುಕೊರತೆಯನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗದೆ ಬೇಸತ್ತು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾಗಿ ತಿಳಿಸಿದರು.
ಪಂಜಾಬ್‌ನಲ್ಲಿ ಎಎಪಿ ಸರ್ಕಾರದ ಅಡಿಯಲ್ಲಿ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯ ಕುರಿತು ಪಕ್ಷದ ಹೇಳಿಕೆಗಳನ್ನು ಪ್ರಶ್ನಿಸಿದ ಶಾಸಕರು, ವಾಸ್ತವ ಪರಿಸ್ಥಿತಿ ಅದಕ್ಕೆ ತದ್ವಿರುದ್ಧವಾಗಿದೆ ಎಂದು ಆರೋಪಿಸಿದರು.
ಭಾವನಾತ್ಮಕವಾಗಿ ಮಾತನಾಡಿದ ಎಎಪಿ ಶಾಸಕರು, ತಮ್ಮ ಮಗ ಕೂಡ ಸರ್ಕಾರದ 'ಸ್ಕೂಲ್ ಆಫ್ ಎಮಿನೆನ್ಸ್'ನಲ್ಲಿ (School of Eminence) ಓದುತ್ತಿದ್ದು, ಅಲ್ಲಿಯೂ ಶಿಕ್ಷಕರ ಕೊರತೆ ಇದೆ ಎಂದು ಹೇಳಿದರು. ಆಡಳಿತ ಪಕ್ಷದ ಶಾಸಕರ ಪೈಕಿ, ತಮ್ಮ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಏಕೈಕ ಶಾಸಕ ತಾವೇ ಎಂದು ಅವರು ಪ್ರತಿಪಾದಿಸಿದರು.
"ನಾನು ಬೇಸರದಿಂದ ಈ ಲೈವ್ ಬರುತ್ತಿದ್ದೇನೆ. ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ನಾನು ನಿರಂತರವಾಗಿ ಒತ್ತಾಯಿಸುತ್ತಲೇ ಬಂದಿದ್ದೇನೆ, ಆದರೆ ಅದನ್ನು ಇನ್ನೂ ಮಾಡಲಾಗಿಲ್ಲ," ಎಂದು ಎಎಪಿ ಶಾಸಕರು ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಆರೋಪ ಮಾಡಿದರು. ಪಕ್ಷದ ನಾಯಕತ್ವದ ಗಮನಕ್ಕೆ ಈ ವಿಷಯವನ್ನು ತಂದ ನಂತರ, ಮುಖ್ಯಮಂತ್ರಿಗಳು ತಮ್ಮನ್ನು ಕರೆದಿದ್ದಾರೆ ಎಂದು ತಮಗೆ ತಿಳಿಸಲಾಗಿತ್ತು ಎಂದು ಶಾಸಕರು ಹೇಳಿದರು.
"ಆದರೆ ಅವರು ನನ್ನನ್ನು ಭೇಟಿಯಾಗಲಿಲ್ಲ," ಎಂದು ಅವರು ಆರೋಪಿಸಿದರು. "ನಾನು ಎಷ್ಟು ದಿನ ಸಹಿಸಿಕೊಳ್ಳಲಿ? ಪಕ್ಷಕ್ಕೆ ನಾನು ಮಾಡಿದ ತಪ್ಪಾದರೂ ಏನು?" ಎಂದು ಅವರು ಪ್ರಶ್ನಿಸಿದರು.
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ತಮಗೆ ಟಿಕೆಟ್ ನಿರಾಕರಿಸಲಾಗುತ್ತದೆ ಎಂಬುದು ತಮಗೆ ತಿಳಿದಿದೆ ಎಂದು ಎಎಪಿ ಶಾಸಕರು ಹೇಳಿದರು. "ಆದರೂ ನಾನು ಜನರಿಗಾಗಿ ಹೋರಾಟ ಮುಂದುವರಿಸುತ್ತೇನೆ," ಎಂದು ಅವರು ಹೇಳಿದ್ದಾರೆ.
ತಮ್ಮ ಕುಂದುಕೊರತೆಯನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತಂದರೂ ಯಾವುದೇ ಪರಿಹಾರ ಸಿಗಲಿಲ್ಲ ಎಂದು ಶಾಸಕರು ಹೇಳಿದರು. "ನಾನು ಎಲ್ಲಿ ತಪ್ಪು ಮಾಡಿದ್ದೇನೆ ಎಂದು ಹೇಳಿ," ಎಂದು ಅವರು ಪ್ರಶ್ನಿಸಿದರು. ತಮ್ಮ ವಿರುದ್ಧ ಎಫ್‌ಐಆರ್ (FIR) ದಾಖಲಾಗಬಹುದು ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದರು.
ಶಾಲೆಯ ಪ್ರಾಂಶುಪಾಲರು ತಮ್ಮ ಮಗನಿಗೆ, ಶಿಕ್ಷಕರ ಕೊರತೆಯನ್ನು ನೀಗಿಸುವಂತೆ (ಅಂದರೆ ಅಗತ್ಯವಿರುವಷ್ಟು ಶಿಕ್ಷಕರನ್ನು ನೇಮಿಸುವಂತೆ) ತನ್ನ ತಂದೆಗೆ ಹೇಳುವಂತೆ ಸೂಚಿಸಿದ್ದರು ಎಂದು ಶಾಸಕರು ತಿಳಿಸಿದರು.
"ನನ್ನ ಹೋರಾಟ ಶಾಲೆಗಳಿಗಾಗಿ. ಶಾಲೆಗಳಲ್ಲಿ ಏನೂ ನಡೆಯದಿದ್ದರೆ, ಅಂತಹ ಶಿಕ್ಷಣದಿಂದ ಏನು ಪ್ರಯೋಜನ?" ಎಂದು ಅವರು ಪ್ರಶ್ನಿಸಿದರು. "ಎಲ್ಲಾ ಶಾಸಕರ ಪೈಕಿ, ನನ್ನ ಮಕ್ಕಳು ಮಾತ್ರ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ," ಎಂದು ಅವರು ಹೇಳಿದರು.
ಶಾಸಕರ ಈ ಹೇಳಿಕೆಯ ನಂತರ, ಪಂಜಾಬ್ ಆಮ್ ಆದ್ಮಿ ಪಕ್ಷದ (AAP) ಪ್ರಧಾನ ಕಾರ್ಯದರ್ಶಿ ಹರ್ಚಂದ್ ಸಿಂಗ್ ಬರ್ಸಾತ್ ಅವರು ಮೈಸರ್‌ಖಾನಾ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
"ನೀವು ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಶಿಸ್ತುರಾಹಿತ್ಯದಲ್ಲಿ ತೊಡಗಿರುವುದು ಪಕ್ಷದ ಗಮನಕ್ಕೆ ಬಂದಿದೆ. ಇದನ್ನು ಪರಿಗಣಿಸಿ, ನಿಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ," ಎಂದು ಬರ್ಸಾತ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



