ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ: ರೂಬಿಯೊ ಜೊತೆಗಿನ ಸುದ್ದಿಗೋಷ್ಠಿಯಲ್ಲಿ ಭಾರತ-ಅಮೆರಿಕದ ನಿಲುವು ಪುನರುಚ್ಚರಿಸಿದ ಎಸ್ ಜೈಶಂಕರ್
ಭಾರತ ಮತ್ತು ಅಮೆರಿಕದ ತಂತ್ರಾತ್ಮಕ ಸಹಭಾಗಿತ್ವ ಎರಡೂ ದೇಶಗಳ ಸಮಾನ ರಾಷ್ಟ್ರೀಯ ಹಿತಾಸಕ್ತಿಗಳಿಂದ ರೂಪುಗೊಂಡಿದೆ ಎಂದು ಹೇಳಿದರು.

ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಇಂದು ಭಾನುವಾರ ಬೆಳಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಇಬ್ಬರೂ ಜಂಟಿ ಸುದ್ದಿಗೋಷ್ಠಿ ನಡೆಸಿ, ಭಾರತ-ಅಮೆರಿಕ ಸಹಕಾರದ ವಿಸ್ತರಣೆ, ಇಂಧನ, ಪಶ್ಚಿಮ ಏಷ್ಯಾ ಬಿಕ್ಕಟ್ಟು, ರಕ್ಷಣಾ ಸಹಕಾರ ಹಾಗೂ ಭಾರತದ ಅಣು ಕಾರ್ಯಕ್ರಮದ ವಿಸ್ತರಣೆ ಕುರಿತು ಚರ್ಚಿಸಿದರು.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಎಸ್ ಜೈಶಂಕರ್, ರೂಬಿಯೊ ಅವರನ್ನು ಭಾರತಕ್ಕೆ ಸ್ವಾಗತಿಸಿ, ಉಭಯ ದೇಶಗಳ ನಡುವೆ ನಿರಂತರ ಸಂವಹನ ನಡೆಯುತ್ತಿದೆ ಎಂದು ಹೇಳಿದರು. ಭಾರತ ಮತ್ತು ಅಮೆರಿಕದ ತಂತ್ರಾತ್ಮಕ ಸಹಭಾಗಿತ್ವ ಎರಡೂ ದೇಶಗಳ ಸಮಾನ ರಾಷ್ಟ್ರೀಯ ಹಿತಾಸಕ್ತಿಗಳಿಂದ ರೂಪುಗೊಂಡಿದೆ ಎಂದು ಹೇಳಿದರು.
ನಿನ್ನೆ ಅಮೆರಿಕ ವಿದೇಶಾಂಗ ಸಚಿವರು ಪ್ರಧಾನಮಂತ್ರಿಯವರನ್ನು ಭೇಟಿಯಾದ ವೇಳೆ ಕೆಲವು ಜಾಗತಿಕ ಮತ್ತು ಪ್ರಾದೇಶಿಕ ವಿಚಾರಗಳು ಚರ್ಚೆಗೆ ಬಂದವು. ನಂತರ ರಾಯಭಾರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಶ್ಚಿಮ ಏಷ್ಯಾ, ಭಾರತೀಯ ಉಪಖಂಡ ಮತ್ತು ಪೂರ್ವ ಏಷ್ಯಾದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದೆವು. ಇತ್ತೀಚೆಗೆ ನಾನು ಕೆರೆಬಿಯನ್ ಪ್ರದೇಶ ಪ್ರವಾಸದಿಂದ ಪಡೆದ ಅನುಭವಗಳನ್ನೂ ಅವರೊಂದಿಗೆ ಹಂಚಿಕೊಂಡೆ ಎಂದು ಜೈಶಂಕರ್ ಹೇಳಿದರು.
ಇಂದು ಮಧ್ಯಾಹ್ನದ ಮಾತುಕತೆಯಲ್ಲಿ ಗಲ್ಫ್ ಪ್ರದೇಶದ ಇತ್ತೀಚಿನ ಬೆಳವಣಿಗೆಗಳು ಹಾಗೂ ಉಕ್ರೇನ್ ಸಂಘರ್ಷದ ಬಗ್ಗೆ ಚರ್ಚೆ ನಡೆಸಲಾಗುವುದು. ಕಳೆದ ರಾತ್ರಿ ಕೆಲವು ಮಹತ್ವದ ಬೆಳವಣಿಗೆಗಳು ನಡೆದಿವೆ ಅಥವಾ ನಡೆಯುತ್ತಿರುವಂತಿದೆ ಎಂದರು.
ರಕ್ಷಣಾ, ಆರ್ಥಿಕತೆ, ಇಂಧನ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದ ವಿಷಯಗಳನ್ನೂ ಜೈಶಂಕರ್ ಪ್ರಸ್ತಾಪಿಸಿದರು. 10 ವರ್ಷದ ಪ್ರಮುಖ ರಕ್ಷಣಾ ಸಹಭಾಗಿತ್ವ ಚೌಕಟ್ಟು ಒಪ್ಪಂದವನ್ನು ಇತ್ತೀಚೆಗೆ ನವೀಕರಿಸಲಾಗಿದೆ. ಸಮಗ್ರ ಅಂಡರ್‌ವಾಟರ್ ಡೊಮೇನ್ ಅವೇರ್‌ನೆಸ್ ರಸ್ತೆನಕ್ಷೆಯ ಮೇಲೂ ಸಹಿ ಹಾಕಲಾಗಿದೆ ಎಂದು ಅವರು ಹೇಳಿದರು.
ಆರ್ಥಿಕ ಕ್ಷೇತ್ರದಲ್ಲಿ ಪರಸ್ಪರ ಲಾಭದಾಯಕ ವ್ಯಾಪಾರಕ್ಕೆ ಸಂಬಂಧಿಸಿದ ಮಧ್ಯಂತರ ಒಪ್ಪಂದದ ಅಂತಿಮ ಪಠ್ಯವನ್ನು ಶೀಘ್ರ ಪೂರ್ಣಗೊಳಿಸುವ ಅಗತ್ಯದ ಬಗ್ಗೆ ಚರ್ಚೆ ನಡೆಸಿದೆವು ಎಂದರು.
ಸಮಗ್ರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ರೂಪುರೇಷೆ ಸಿದ್ಧಪಡಿಸಲು ಅಮೆರಿಕದ ತಂಡ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದೆ ಎಂದು ತಿಳಿಸಿದರು.
ಭಯೋತ್ಪಾದನೆ ಕುರಿತು ಮಾತನಾಡಿದ ಜೈಶಂಕರ್, 26/11 ಮುಂಬೈ ದಾಳಿಯ ಪ್ರಮುಖ ಸಂಚುಕೋರ ತಹವ್ವೂರ್ ರಾಣಾ ಅವರನ್ನು ಭಾರತಕ್ಕೆ ಹಸ್ತಾಂತರಿಸುವಲ್ಲಿ ಅಮೆರಿಕ ನೀಡಿದ ಸಹಕಾರವನ್ನು ಶ್ಲಾಘಿಸಿದರು.
ಭಾರತ ಮತ್ತು ಅಮೆರಿಕದ ಹಿತಾಸಕ್ತಿಗಳು ಒಂದೇ ರೀತಿಯವಾಗಿವೆ. ಜೊತೆಗೆ, ಎರಡೂ ದೇಶಗಳು ಸಾಮಾನ್ಯ ಸವಾಲುಗಳನ್ನೂ ಎದುರಿಸುತ್ತಿವೆ. ಅವುಗಳಲ್ಲಿ ಪ್ರಮುಖವಾದದ್ದು ಭಯೋತ್ಪಾದನೆ. ಈ ವಿಷಯದಲ್ಲಿ ನಮ್ಮ ನಿಲುವು ಸಂಪೂರ್ಣ ಶೂನ್ಯ ಸಹಿಷ್ಣುತೆಯಾಗಿದೆ ಎಂದು ಹೇಳಿದರು.
ಭಾರತ ಮತ್ತು ಅಮೆರಿಕವನ್ನು ಜಗತ್ತಿನ ಎರಡು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳು ಎಂದು ಕರೆದ ರೂಬಿಯೊ, ಭಾರತದೊಂದಿಗೆ ನಾವು ಕೆಲಸ ಮಾಡುತ್ತಿರುವ ವಿಷಯಗಳ ವ್ಯಾಪ್ತಿ ಮತ್ತು ಅಗಾಧತೆ, ಭಾರತ ಅಮೆರಿಕದ ಪ್ರಮುಖ ತಂತ್ರಾತ್ಮಕ ಪಾಲುದಾರ ಎಂಬುದನ್ನು ತೋರಿಸುತ್ತದೆ ಎಂದರು.
ಅಮೆರಿಕ ಮತ್ತು ಭಾರತ ಕೈಗೊಳ್ಳುವ ಪ್ರತಿಯೊಂದು ನಿರ್ಧಾರವನ್ನೂ ತಮ್ಮ ಜನರಿಗೆ ಸಮರ್ಥಿಸಬೇಕಾಗುತ್ತದೆ ಎಂದು ರೂಬಿಯೊ ಹೇಳಿದರು. ನಿಮ್ಮ ದೇಶದಲ್ಲಿ ಬಹಳಷ್ಟು ಮಾಧ್ಯಮಗಳಿವೆ. ಅಂದರೆ ಹೆಚ್ಚಿನ ಪರಿಶೀಲನೆ ಮತ್ತು ಗಮನವಿದೆ.
ಆದರೆ ಅದೇ ನಮ್ಮ ಹಿತಾಸಕ್ತಿಗಳನ್ನು ಒಂದಾಗಿಸುತ್ತದೆ. ಏಕೆಂದರೆ ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ, ಮಾಡುವ ಪ್ರತಿಯೊಂದು ಘೋಷಣೆ ಮತ್ತು ಒಟ್ಟಾಗಿ ಕೈಗೊಳ್ಳುವ ಪ್ರತಿಯೊಂದು ಕಾರ್ಯವನ್ನೂ ನಮ್ಮ ಮತದಾರರು ಹಾಗೂ ಜನರಿಗೆ ಸಮರ್ಥಿಸಬೇಕಾಗುತ್ತದೆ ಎಂಬ ಪರಸ್ಪರ ಗೌರವ ಮತ್ತು ಅರಿವು ಎರಡೂ ದೇಶಗಳಿಗೂ ಇದೆ ಎಂದು ಅವರು ಹೇಳಿದರು.
ರೂಬಿಯೊ ಅವರು ನಿನ್ನೆ ನಾಲ್ಕು ದಿನಗಳ ಭಾರತ ಪ್ರವಾಸ ಆರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರವಾಗಿ ವೈಟ್ ಹೌಸ್‌ಗೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



