ಎಬೋಲಾ ಭೀತಿ: ಡಿಆರ್‌ಸಿ, ಉಗಾಂಡಾ, ದಕ್ಷಿಣ ಸುಡಾನ್‌ಗೆ ಅನಗತ್ಯ ಪ್ರಯಾಣ ಬೇಡ: ಭಾರತೀಯರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ
ವಿಶ್ವ ಆರೋಗ್ಯ ಸಂಸ್ಥೆಯು (WHO) ಈ ದೇಶಗಳಲ್ಲಿನ ಎಬೋಲಾ ಪರಿಸ್ಥಿತಿಯನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ ಬೆನ್ನಲ್ಲೇ ಭಾರತ ಸರ್ಕಾರ ಈ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ನವದೆಹಲಿ: ಆಫ್ರಿಕಾದ ಪ್ರಮುಖ ದೇಶಗಳಲ್ಲಿ ಮಾರಕ ಎಬೋಲಾ ವೈರಸ್ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಭಾರತೀಯ ನಾಗರಿಕರಿಗೆ ಕಟ್ಟುನಿಟ್ಟಿನ ಪ್ರಯಾಣ ಮಾರ್ಗಸೂಚಿಯನ್ನು ಹೊರಡಿಸಿದೆ.
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC), ಉಗಾಂಡಾ ಮತ್ತು ದಕ್ಷಿಣ ಸುಡಾನ್ ದೇಶಗಳಿಗೆ ಅತ್ಯಗತ್ಯವಿಲ್ಲದಿದ್ದರೆ "ಅನಗತ್ಯ ಪ್ರಯಾಣ ಮಾಡಬೇಡಿ" ಎಂದು ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯು (WHO) ಈ ದೇಶಗಳಲ್ಲಿನ ಎಬೋಲಾ ಪರಿಸ್ಥಿತಿಯನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ ಬೆನ್ನಲ್ಲೇ ಭಾರತ ಸರ್ಕಾರ ಈ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಸದ್ಯ ಆಫ್ರಿಕಾದಲ್ಲಿ ಹರಡುತ್ತಿರುವ 'ಬುಂಡಿಬುಗ್ಯೋ' (Bundibugyo) ಹೆಸರಿನ ಎಬೋಲಾ ವೈರಸ್ ತಳಿಗೆ ಯಾವುದೇ ನಿರ್ದಿಷ್ಟ ಲಸಿಕೆ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.
ಎಬೋಲಾ ಪೀಡಿತ ದೇಶಗಳಿಂದ ಭಾರತಕ್ಕೆ ಬರುವ ಅಥವಾ ಆ ದೇಶಗಳ ಮೂಲಕ ಪ್ರಯಾಣ ಬೆಳೆಸಿ ಬರುವ ಎಲ್ಲಾ ಪ್ರಯಾಣಿಕರಿಗೆ ದೇಶದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮತ್ತು ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
ಒಂದು ವೇಳೆ ಯಾರಾದರೂ ಸೋಂಕಿತರ ನೇರ ಸಂಪರ್ಕಕ್ಕೆ ಬಂದಿದ್ದರೆ, ಅವರು ಇಮಿಗ್ರೇಷನ್ ಕ್ಲಿಯರೆನ್ಸ್‌ಗೂ ಮುನ್ನವೇ ವಿಮಾನ ನಿಲ್ದಾಣದ ಹೆಲ್ತ್ ಡೆಸ್ಕ್‌ಗೆ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಬಾಧಿತ ದೇಶಗಳಿಂದ ಮರಳಿದ 21 ದಿನಗಳ ಒಳಗಾಗಿ ಪ್ರಯಾಣಿಕರಲ್ಲಿ ಜ್ವರ, ತಲೆನೋವು, ವಾಂತಿ, ಭೇದಿ ಅಥವಾ ಅಸಹಜ ರಕ್ತಸ್ರಾವದಂತಹ ಲಕ್ಷಣಗಳು ಕಂಡುಬಂದಲ್ಲಿ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ತಮ್ಮ ಪ್ರವಾಸದ ಇತಿಹಾಸವನ್ನು (Travel History) ತಿಳಿಸುವಂತೆ ಸೂಚಿಸಲಾಗಿದೆ.
ಭಾರತದಲ್ಲಿ ಇದೂವರೆಗೆ ಈ ತಳಿಯ ಎಬೋಲಾದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದಾಗ್ಯೂ, ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯಲ್ಲಿ ನಡೆಯಬೇಕಾಗಿದ್ದ 'ಭಾರತ-ಆಫ್ರಿಕಾ ಒಕ್ಕೂಟ ಶೃಂಗಸಭೆ'ಯನ್ನು ಮುಂದೂಡಲಾಗಿದೆ.
ದೇಶದ ಎಲ್ಲಾ ರಾಜ್ಯಗಳಿಗೆ ಕ್ವಾರಂಟೈನ್ ಮತ್ತು ಐಸೊಲೇಶನ್ ವಾರ್ಡ್‌ಗಳನ್ನು ಸಜ್ಜುಗೊಳಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದು ಗಾಳಿಯ ಮೂಲಕ ಹರಡುವ ರೋಗವಲ್ಲದಿದ್ದರೂ, ಸೋಂಕಿತರ ದೈಹಿಕ ದ್ರವಗಳ ಸಂಪರ್ಕದಿಂದ ಹರಡುವುದರಿಂದ ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಡಿಆರ್‌ಸಿಯ ಮೂರು ಪ್ರಾಂತ್ಯಗಳಲ್ಲಿ 867 ಶಂಕಿತ ಪ್ರಕರಣಗಳಲ್ಲಿ 204 ಮಂದಿ ಮೃತಪಟ್ಟಿದ್ದಾರೆ. ಆದರೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ 750 ಶಂಕಿತ ಪ್ರಕರಣಗಳಲ್ಲಿ 177 ಸಾವುಗಳು ದಾಖಲಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




