ಕೇರಳ: ವಿ.ಡಿ ಸತೀಶನ್ ಸಂಪುಟದಲ್ಲಿ 20 ಸಚಿವರು;14 ಮಂದಿ ಹೊಸಬರು!
ಭಾನುವಾರ ಸಂಜೆ ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ತಮಿಳುನಾಡಿನ ಹೆಚ್ಚುವರಿ ಉಸ್ತುವಾರಿಯನ್ನೂ ಹೊಂದಿರುವ ರಾಜ್ಯಪಾಲ ಆರ್.ವಿ. ಅರ್ಕ್ಲೇಕರ್ ಅವರಿಗೆ ಹೆಸರುಗಳನ್ನು ಕಳುಹಿಸಲಾಗಿದೆ.

ತಿರುವನಂತಪುರ: ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ರಚನೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ವಿ.ಡಿ. ಸತೀಶನ್ ನೂತನ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿ.ಡಿ. ಸತೀಶನ್ ಸಂಪುಟದಲ್ಲಿ 20 ಸಚಿವರಿರುತ್ತಾರೆ. ಅವರಲ್ಲಿ 14 ಮಂದಿ ಹೊಸಬರಾಗಿದ್ದಾರೆ.
ಭಾನುವಾರ ಸಂಜೆ ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ತಮಿಳುನಾಡಿನ ಹೆಚ್ಚುವರಿ ಉಸ್ತುವಾರಿಯನ್ನೂ ಹೊಂದಿರುವ ರಾಜ್ಯಪಾಲ ಆರ್.ವಿ. ಅರ್ಕ್ಲೇಕರ್ ಅವರಿಗೆ ಹೆಸರುಗಳನ್ನು ಕಳುಹಿಸಲಾಗಿದೆ.
ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರು ಉನ್ನತ ಹುದ್ದೆಯ ಆಕಾಂಕ್ಷಿಯಾಗಿದ್ದು, ಸತೀಶನ್ ಅವರ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ. ಇನ್ನು ಉಳಿದಂತೆ ಸನ್ನಿ ಜೋಸೆಫ್, ಕೆ. ಮುರಳೀಧರನ್, ಅನಿಲ್ ಕುಮಾರ್, ಪಿ.ಸಿ. ವಿಷ್ಣುನಾಥ್, ರೋಜಿ ಎಂ. ಜಾನ್, ಬಿಂದು ಕೃಷ್ಣ, ಎಂ. ಲಿಜು, ಟಿ. ಸಿದ್ದಿಕ್, ಕೆ.ಎ. ತುಳಸಿ ಮತ್ತು ಒ.ಜೆ. ಜನೀಶ್ ಕೂಡ ಇದ್ದಾರೆ.
ತಿರುವಾಂಚೂರು ರಾಧಾಕೃಷ್ಣನ್ ಸ್ಪೀಕರ್ ಆಗಲಿದ್ದು, ಶನಿಮೋಳ್ ಉಸ್ಮಾನ್ ಉಪಸಭಾಪತಿಯಾಗಿರುತ್ತಾರೆ. ಕಾಂಗ್ರೆಸ್ ಮಿತ್ರ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಥವಾ IUML ಐದು ಸಚಿವ ಸ್ಥಾನಗಳನ್ನು ಹೊಂದಿರುತ್ತದೆ. ಪಿ.ಕೆ. ಕುನ್ಹಾಲಿಕುಟ್ಟಿ, ಕೆ.ಎಂ. ಶಾಜಿ, ವಿ. ಅಬ್ದುಲ್ ಗಫೂರ್, ಎನ್. ಶಂಸುದ್ದೀನ್ ಮತ್ತು ಪಿ.ಕೆ. ಬಶೀರ್ ಅವರ ಹೆಸರುಗಳನ್ನು ಸಹ ಪಕ್ಷ ಪ್ರಕಟಿಸಿದೆ.
ಹಿರಿಯ ನಾಯಕ ಪರಕ್ಕಲ್ ಅಬ್ದುಲ್ಲಾ ಅವರಿಗೆ 2.5 ವರ್ಷಗಳ ನಂತರ ಅವಕಾಶ ನೀಡಲಾಗುವುದು ಎಂದು ಐಯುಎಂಎಲ್‌ನ ಸಾದಿಕ್ ಅಲಿ ಶಿಹಾಬ್ ತಂಗಲ್ ಹೇಳಿದ್ದಾರೆ. ಸಚಿವ ಸಂಪುಟ ರಚನೆಯಲ್ಲಿ ಕೋಝಿಕ್ಕೋಡ್ ಜಿಲ್ಲೆಗೆ ಪ್ರಾತಿನಿಧ್ಯ ಒದಗಿಸಲು ಈ ಕ್ರಮವನ್ನು ಉದ್ದೇಶಿಸಲಾಗಿದೆ.
ಸಚಿವ ಸಂಪುಟದಲ್ಲಿ ಮಾನ್ಸ್ ಜೋಸೆಫ್ (ಕೇರಳ ಕಾಂಗ್ರೆಸ್-ಜೋಸೆಫ್), ಶಿಬು ಬೇಬಿ ಜಾನ್ (ಕ್ರಾಂತಿಕಾರಿ ಸಮಾಜವಾದಿ ಪಕ್ಷ), ಅನೂಪ್ ಜಾಕೋಬ್ (ಕೇರಳ ಕಾಂಗ್ರೆಸ್-ಜಾಕೋಬ್), ಮತ್ತು ಸಿ.ಪಿ. ಜಾನ್ (ಕಮ್ಯುನಿಸ್ಟ್ ಮಾರ್ಕ್ಸ್ವಾದಿ ಪಕ್ಷ) ಕೂಡ ಇರುತ್ತಾರೆ. ಸಂಪುಟದಲ್ಲಿ ಐಯುಎಂಎಲ್ ನಾಯಕರಾದ ಎನ್ ಶಂಸುದ್ದೀನ್ ಮತ್ತಿತರ 14 ಮಂದಿ ಹೊಸಬರಿಗೂ ಅವಕಾಶ ನೀಡಲಾಗಿದೆ. ಮಿತವಾದ ಇಂಧನ ಬಳಕೆ ಕುರಿತು ಕೇಂದ್ರದ ಸಲಹೆಯನ್ನು ಅನುಸರಿಸಿ ಯಾವುದೇ ಬೆಂಗಾವಲು, ಭದ್ರತಾ ವಾಹನಗಳು ಅಥವಾ ಆಂಬ್ಯುಲೆನ್ಸ್‌ಗಳನ್ನು ಹೊಂದಿರಬಾರದು ಎಂದು ಸತೀಶನ್ ಆದೇಶಿಸಿದ್ದಾರೆ.
ನಾಳೆ ನಡೆಯಲಿರುವ ಪ್ರಮಾಣ ವಚನ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಅವರ ಹಿಮಾಚಲ ಪ್ರದೇಶದ ಸಿಎಂ ಸುಖವಿಂದರ್ ಸುಖು, ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ನಾಯಕರು ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



