'ಜಪ್ಪಯ್ಯ ಅಂದರೂ ಸಿಎಂ ಸ್ಥಾನದಿಂದ ಕೆಳಗಿಳಿಯುವುದಿಲ್ಲ, ಬೇಕಾದರೆ ಕೇಂದ್ರವೇ ನನ್ನನ್ನು ವಜಾ ಮಾಡಲಿ': ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶಗಳ ನಂತರ ಇಂಡಿಯಾ ಮೈತ್ರಿಕೂಟದಲ್ಲಿ ಇನ್ನಷ್ಟು ಏಕತೆ ಮೂಡಿದೆ ಎಂದೂ ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ನಿರ್ಗಮಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷದ ಹೊಸದಾಗಿ ಆಯ್ಕೆಯಾದ ಶಾಸಕರ ಸಭೆಯನ್ನುದ್ದೇಶಿಸಿ ನಿನ್ನೆ ಮಾತನಾಡಿ ಮತ್ತೆ ಬಿಜೆಪಿ ವಿರುದ್ಧ ಗುಡುಗಿದ್ದಾರೆ. ವಿಧಾನಸಭೆ ಚುನಾವಣಾ ಫಲಿತಾಂಶಗಳ ಹಿನ್ನೆಲೆಯಲ್ಲಿ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ, ಬೇಕಾದರೆ ಕೇಂದ್ರ ಸರ್ಕಾರವೇ ವಜಾ ಮಾಡಲಿ ಎಂದು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬಲವಂತವಾಗಿ ಸೋಲಿಸಲಾಗಿದೆ ಎಂದು ಅವರು ಹೇಳಿದ್ದು, 1500ಕ್ಕೂ ಹೆಚ್ಚು ತೃಣಮೂಲ ಕಾಂಗ್ರೆಸ್ ಕಚೇರಿಗಳನ್ನು ಕಬಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಬಂಗಾಳ ಚುನಾವಣಾ ಫಲಿತಾಂಶಗಳ ನಂತರ ಇಂಡಿಯಾ ಮೈತ್ರಿಕೂಟದಲ್ಲಿ ಇನ್ನಷ್ಟು ಏಕತೆ ಮೂಡಿದೆ ಎಂದೂ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಚುನಾವಣೆ ನಡೆದಿಲ್ಲ, ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ ಅವರು, ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ನೈತಿಕ ಜಯ ಸಾಧಿಸಿದೆ, ನಾನು ಹೋರಾಟ ಮುಂದುವರಿಸುತ್ತೇನೆ ಎಂದೂ ತಿಳಿಸಿದ್ದಾರೆ.
ಬಂಗಾಳದ ನಂತರ ಇಂಡಿಯಾ ತಂಡ ಈಗ ಏಕತೆಯಾಗಿದೆ. ನಾನು ರಾಜೀನಾಮೆ ನೀಡುವುದಿಲ್ಲ. ಬೇಕಾದರೆ ಅವರು ನನ್ನನ್ನು ವಜಾ ಮಾಡಲಿ. ಈ ದಿನವನ್ನು ಕಪ್ಪು ದಿನವಾಗಿ ಆಚರಿಸಬೇಕು. ನಾವು ಬಲವಾಗಿರಬೇಕು. ವಿಧಾನಸಭೆಯ ಮೊದಲ ದಿನ ಕಪ್ಪು ಬಟ್ಟೆ ಧರಿಸಿ ಬನ್ನಿ. ದ್ರೋಹ ಮಾಡಿದವರನ್ನು ಪಕ್ಷದಿಂದ ತೆಗೆದುಹಾಕಲಾಗುವುದು. ನನಗೆ ಬೇಸರವೇನೂ ಇಲ್ಲ, ನಾನು ಅವರನ್ನು ನೈತಿಕವಾಗಿ ಸೋಲಿಸಿದ್ದೇನೆ. ನಾನು ಇಂದು ಸ್ವತಂತ್ರ ಹಕ್ಕಿ. ಎಲ್ಲರಿಗಾಗಿ ಕೆಲಸ ಮಾಡಿದ್ದೇನೆ. ನಾವು ಸೋತಿರಬಹುದು, ಆದರೆ ಹೋರಾಟ ಮುಂದುವರಿಸುತ್ತೇವೆ. ಗೃಹ ಸಚಿವರು ಮತ್ತು ಪ್ರಧಾನಮಂತ್ರಿಗಳು ನೇರವಾಗಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಲವಂತವಾಗಿ ಸೋಲಿಸಲಾಗಿದೆ. ಪಶ್ಚಿಮ ಬಂಗಾಳ ಪೊಲೀಸ್, ಸಿಆರ್ ಪಿಎಫ್, ಬಿಜೆಪಿ ಮನೋಭಾವದ ಮುಖ್ಯ ಚುನಾವಣಾಧಿಕಾರಿ ಹಾಗೂ ಚುನಾವಣಾ ಆಯೋಗವನ್ನು ನಾನು ಖಂಡಿಸುತ್ತೇನೆ. 1500ಕ್ಕೂ ಹೆಚ್ಚು ಪಕ್ಷದ ಕಚೇರಿಗಳನ್ನು ಕಬಳಿಸಲಾಗಿದೆ. ನನ್ನನ್ನು ಅಂದು ತಳ್ಳಿದ್ದರಿಂದ ಎದೆನೋವು ಕಾಣಿಸಿಕೊಂಡಿತು. ಇದು ಚುನಾವಣೆ ಅಲ್ಲ, ದೌರ್ಜನ್ಯ ಎಂದು ಎಐಟಿಸಿ ಮೂಲಗಳ ಪ್ರಕಾರ ಅವರು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲು ನಿರಾಕರಿಸಿರುವುದು ರಾಜ್ಯದಲ್ಲಿ ಅಪೂರ್ವ ಪರಿಸ್ಥಿತಿಯನ್ನು ಹಾಗೂ ಒಂದು ರೀತಿಯ ಸಂವಿಧಾನಾತ್ಮಕ ಸಂಕಷ್ಟವನ್ನು ಸೃಷ್ಟಿಸಿದೆ.
207 ಸ್ಥಾನಗಳನ್ನು ಗೆದ್ದು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಭಾರತೀಯ ಜನತಾ ಪಾರ್ಟಿ ಸರ್ಕಾರ ರಚನೆಗೆ ಸಿದ್ಧತೆಗಳನ್ನು ಮುಂದುವರಿಸಿದೆ. ಇದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೊದಲ ಬಾರಿಗೆ ರಚಿಸುತ್ತಿರುವ ಸರ್ಕಾರವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




