ವಾಣಿಜ್ಯ LPG ಹಂಚಿಕೆ ಹೆಚ್ಚಳ; ಉದ್ಯಮ ವಲಯಕ್ಕೆ ಕೇಂದ್ರ ನೆರವು: ಪ್ರಲ್ಹಾದ ಜೋಶಿ
ದೇಶದಲ್ಲಿ ವಾಣಿಜ್ಯ LPG ಹಂಚಿಕೆಯನ್ನು ಹೆಚ್ಚಿಸಿದ್ದರಿಂದ ಕಾರ್ಮಿಕರಿರುವ ಕೈಗಾರಿಕಾ ವಲಯಗಳಿಗೆ ಆರ್ಥಿಕ ನೆರವು ದೊರೆಯಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ನವದೆಹಲಿ: ಜಾಗತಿಕ ಬಿಕ್ಕಟ್ಟು, ಸವಾಲಿನ ನಡುವೆಯೂ ಕೇಂದ್ರ ಸರ್ಕಾರ ಪ್ರಸ್ತುತವಾಗಿ ಶೇ.70ರಷ್ಟು ವಾಣಿಜ್ಯ ಎಲ್ಪಿಜಿ ಹಂಚಿಕೆ ಹೆಚ್ಚಿಸಿದೆ. ಇನ್ನೊಂದೆಡೆ ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಸಹ ಶೇ.10ರಷ್ಟು ಕಡಿತಗೊಳಿಸಿ ಉದ್ಯಮ ವಲಯಕ್ಕೆ ನೆರವಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಪ್ರಸ್ತುತ ಯುದ್ಧ ಸಂದಿಗ್ಧ ಪರಿಸ್ಥಿತಿಯಲ್ಲಿ ಇಡೀ ಜಗತ್ತೇ ಇಂಧನ ಪೂರೈಕೆ ಸವಾಲು ಎದುರಿಸುತ್ತಿದೆ. ಇದರ ನಡುವೆಯೂ ಭಾರತದ ಕೈಗಾರಿಕೆಗಳು ಸುಗಮವಾಗಿ ನಡೆಯುವಂತೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ತೈಲ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ್ದಲ್ಲದೇ, ವಾಣಿಜ್ಯ ಎಲ್ ಪಿಜಿ ಹಂಚಿಕೆಯನ್ನು ಹೆಚ್ಚಿಸಿ ನೆರವಾಗಿದೆ ಎಂದಿದ್ದಾರೆ.
ಕೋವಿಡ್ ನಂತಹ ಸ್ಥಿತಿಯೇನಿಲ್ಲ; ದೇಶದಲ್ಲಿ ಕೋವಿಡ್ ವೇಳೆ ಎದುರಾದಂತೆ ಲಾಕ್ ಡೌನ್ ಪರಿಸ್ಥಿತಿ ತಲೆದೋರಬಹುದು ಎಂದೆಲ್ಲಾ ಸುಳ್ಳುಗಳನ್ನು ಹರಿಬಿಡಲಾಗುತ್ತಿದೆ. ಆದರೆ, ದೇಶದಲ್ಲಿ ಅಂಥ ಪರಿಸ್ಥಿತಿ ಏನಿಲ್ಲ. ಯಾರೊಬ್ಬರೂ ಇಂಥ ಹುಸಿ ಮಾತುಗಳಿಗೆ ಕಿವಿಗೊಡಬೇಕಿಲ್ಲ ಮತ್ತು ಆತಂಕ ಪಡಬೇಕಿಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವರು, ಪ್ರಧಾನಿ ಮೋದಿ ಅವರು ಜನಪರ ನಿಲುವನ್ನೇ ತೆಗೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
ಸದಾ ಜನರ ಹಿತ ಬಯಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಾಣಿಜ್ಯ ಎಲ್ಪಿಜಿ ಹಂಚಿಕೆಯನ್ನು ಈಗಿರುವ ಮಟ್ಟದಿಂದ ಶೇ.70ಕ್ಕೆ ಹೆಚ್ಚಿಸುವಂತೆ ನಿರ್ದೇಶಿಸಿದ್ದು, ಈ ಕ್ರಮದಿಂದ ದೇಶದ ಉಕ್ಕು, ಆಟೋಮೊಬೈಲ್ ಮತ್ತು ಜವಳಿ ಉದ್ಯಮಗಳಿಗೆ ಆದ್ಯತೆ ಸಿಗಲಿದೆ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೈಗಾರಿಕೆ, ಆದ್ಯತಾ ವಲಯಕ್ಕೆ ನೆರವು: ದೇಶದಲ್ಲಿ ವಾಣಿಜ್ಯ LPG ಹಂಚಿಕೆಯನ್ನು ಹೆಚ್ಚಿಸಿದ್ದರಿಂದ ಕಾರ್ಮಿಕರಿರುವ ಕೈಗಾರಿಕಾ ವಲಯಗಳಿಗೆ ಆರ್ಥಿಕ ನೆರವು ದೊರೆಯಲಿದೆ. ಅಲ್ಲದೆ, ನೈಸರ್ಗಿಕ ಅನಿಲಕ್ಕೆ ಪರ್ಯಾಯವಿಲ್ಲದ ಪ್ರಕ್ರಿಯೆಗಳಿಗೆ ಎಲ್ಪಿಜಿ ಲಭ್ಯತೆ ಸುಲಭ ಸಾಧ್ಯವಾಗಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಯುದ್ಧ ಬಿಕ್ಕಟ್ಟಿಗೂ ಮುನ್ನ ರಾಜ್ಯಗಳಿಗೆ ಕೋಟಾದ ಶೇ.40ರಷ್ಟು ಹಂಚಿಕೆ ಮಾಡಲಾಗಿದೆ ಮತ್ತು PNG ಅನ್ನು ಉತ್ತೇಜಿಸಲು ಮತ್ತೆ ಶೇ.10ರಷ್ಟು ಹಂಚಿಕೆ ಮಾಡಲಾಗಿದೆ. ಹಲವಾರು ರಾಜ್ಯಗಳು ಕೆಲವು ಸುಧಾರಣೆ ಕೈಗೊಂಡಿವೆ ಹಾಗೂ ಶೇ.10ರವರೆಗಿನ ಹೆಚ್ಚುವರಿ ಕೋಟಾವನ್ನು ಪಡೆದುಕೊಂಡಿವೆ. ಶೇ.50 ಹಂಚಿಕೆ ಜೊತೆಗೆ ಈಗ ಹೆಚ್ಚುವರಿ 20% ಅನ್ನು ಪ್ರಸ್ತಾಪಿಸಲಾಗಿದೆ, ಇದು ವಾಣಿಜ್ಯ LPG ಹಂಚಿಕೆಯನ್ನು ಶೇ.70ಕ್ಕೆ ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಉಕ್ಕು, ಆಟೋಮೊಬೈಲ್, ಜವಳಿ, ಬಣ್ಣ, ರಾಸಾಯನಿಕ ಮತ್ತು ಪ್ಲಾಸ್ಟಿಕ್ಗಳಿಗೆ ಆದ್ಯತೆ ನೀಡುವ ಕೈಗಾರಿಕೆಗಳಿಗೆ LPG ಹೆಚ್ಚುವರಿ ಹಂಚಿಕೆಯಾಗುತ್ತದೆ. ಇತರ ಅಗತ್ಯ ವಲಯಗಳಿಗೂ ಅನ್ವಯಿಸುತ್ತದೆ ಎಂದಿರುವ ಸಚಿವರು, ರಾಜ್ಯಗಳು ಶೇ.10ರಷ್ಟು ಸುಧಾರಣಾ ಆಧಾರಿತ ಹಂಚಿಕೆಯನ್ನು ತಕ್ಷಣವೇ ಪಡೆದುಕೊಳ್ಳಬಹುದು ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



