West Asia Conflict: ಮಧ್ಯಪ್ರಾಚ್ಯ ಉದ್ವಿಗ್ನತೆ ಕಡಿಮೆ ಮಾಡಲು 'ವಿಶ್ವಾಸಾರ್ಹ' ಭಾರತದಿಂದ ಸಾಧ್ಯ; ಇರಾನ್ ರಾಯಭಾರಿ
ಈಮಧ್ಯೆ, ಇರಾನ್‌ನ ಸೇನೆಯು ಅಮೆರಿಕದ ರಾಜತಾಂತ್ರಿಕ ಪ್ರಯತ್ನವನ್ನು ಅಪಹಾಸ್ಯ ಮಾಡಿದೆ ಮತ್ತು ಇಸ್ರೇಲ್ ಮತ್ತು ಕೊಲ್ಲಿ ಪ್ರದೇಶದ ಮೇಲೆ ಹೆಚ್ಚಿನ ದಾಳಿಗಳನ್ನು ಪ್ರಾರಂಭಿಸಿದೆ.
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧದ ಮಧ್ಯೆ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ನವದೆಹಲಿ ವಿಶ್ವಾಸಾರ್ಹ ಪಾತ್ರ ವಹಿಸಬಹುದು ಎಂದು ಟೆಹ್ರಾನ್ ನಂಬುತ್ತದೆ.
ಸದ್ಯ ಯುದ್ಧದಲ್ಲಿ ತೊಡಗಿರುವ ಅಮೆರಿಕ ಮತ್ತು ಇಸ್ರೇಲ್ ಮತ್ತು ಇರಾನ್‌ಗಳೊಂದಿಗೆ ಐತಿಹಾಸಿಕ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ನಿರ್ವಹಿಸಲು ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ಭಾರತವು 'ಪರಿಣಾಮಕಾರಿ ಮತ್ತು ಸಕಾರಾತ್ಮಕ' ಪಾತ್ರವನ್ನು ವಹಿಸಬಹುದು ಎಂದು ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ದಾಳಿಗೆ ತಾತ್ಕಾಲಿಕ ವಿರಾಮ ಘೋಷಿಸಿ, ಮಾತುಕತೆಗೆ ಟೆಹ್ರಾನ್‌ಗೆ ಕರೆ ನೀಡಿದ ನಂತರ ಇರಾನ್ ರಾಯಭಾರಿ ಈ ಹೇಳಿಕೆ ನೀಡಿದ್ದಾರೆ.
'ಭಾರತವು ಸದ್ಯದ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ಖಂಡಿತವಾಗಿಯೂ ಪರಿಣಾಮಕಾರಿ ಮತ್ತು ಸಕಾರಾತ್ಮಕ ಪಾತ್ರವನ್ನು ವಹಿಸಬಹುದು. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ (ಗ್ಲೋಬಲ್ ಸೌತ್) ತನ್ನ ಬಲವಾದ ಸ್ಥಾನ ಮತ್ತು ಸಮತೋಲಿತ, ತಟಸ್ಥ ವಿದೇಶಾಂಗ ನೀತಿಯಿಂದಾಗಿ, ಭಾರತವು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಬಹುದು. ಇದು ಉದ್ವಿಗ್ನತೆಯನ್ನು ಕಡಿಮೆ ಮಾಡಲು, ಶಾಂತಿಯುತ ಚರ್ಚೆಗಳನ್ನು ಪ್ರೋತ್ಸಾಹಿಸಲು ಮತ್ತು ಎದುರಾಳಿ ದೇಶಗಳ ನಡುವೆ ಸಂವಾದವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ' ಎಂದು ಅವರು ನವದೆಹಲಿಯಲ್ಲಿ ಮಾತನಾಡುತ್ತಾ ಹೇಳಿದರು.
'ಭಾರತವು ಎಲ್ಲ ದೇಶಗಳೊಂದಿಗೆ ದೀರ್ಘಕಾಲೀನ ಮತ್ತು ಪ್ರಮುಖ ಕಾರ್ಯತಂತ್ರದ ಸಂಬಂಧಗಳನ್ನು ಹೊಂದಿದೆ. ಈ ಸಮತೋಲಿತ ಸಂಬಂಧಗಳಿಂದಾಗಿ, ಭಾರತವನ್ನು ತಟಸ್ಥ ಮತ್ತು ವಿಶ್ವಾಸಾರ್ಹ ದೇಶವೆಂದು ಪರಿಗಣಿಸಲಾಗುತ್ತದೆ. ಅದು ಅವುಗಳ ನಡುವಿನ ತಪ್ಪು ತಿಳುವಳಿಕೆಯನ್ನು ನಿವಾರಿಸಲು ಮತ್ತು ರಾಜತಾಂತ್ರಿಕ ಮಾರ್ಗಗಳನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತದೆ' ಎಂದು ಫಥಾಲಿ ಹೇಳಿದರು.
ರಾಜತಾಂತ್ರಿಕತೆಗೆ ಅಮೆರಿಕ ಒತ್ತಾಯ
ಅಮೆರಿಕವು ರಾಜತಾಂತ್ರಿಕತೆ ಮತ್ತು ಮಿಲಿಟರಿ ಸಿದ್ಧತೆ ಎರಡನ್ನೂ ಏಕಕಾಲದಲ್ಲಿ ಮಾಡುತ್ತಿದೆ. ಯುದ್ಧ ವಿರಾಮ ಘೋಷಿಸಲು ಮತ್ತು ಸಂಘರ್ಷವನ್ನು ಕಡಿಮೆ ಮಾಡಲು ಅಮೆರಿಕ ಇರಾನ್‌ಗೆ 15 ಅಂಶಗಳ ಪ್ರಸ್ತಾವನೆಯನ್ನು ಕಳುಹಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿಯೊಂದು ತಿಳಿಸಿದೆ. ಅದೇ ಸಮಯದಲ್ಲಿ, ಪರಿಸ್ಥಿತಿ ಹದಗೆಟ್ಟರೆ ತನ್ನ ಮಿಲಿಟರಿ ಉಪಸ್ಥಿತಿಯನ್ನು ಬಲಪಡಿಸಲು ಪ್ಯಾರಾಟ್ರೂಪರ್‌ಗಳು ಮತ್ತು ಮೆರೈನ್‌ಗಳು ಸೇರಿದಂತೆ ಪಡೆಗಳನ್ನು ಗಲ್ಫ್ ಪ್ರದೇಶಕ್ಕೆ ನಿಯೋಜಿಸುತ್ತಿದೆ.
ಈಮಧ್ಯೆ, ಇರಾನ್‌ನ ಸೇನೆಯು ರಾಜತಾಂತ್ರಿಕ ಪ್ರಯತ್ನವನ್ನು ಅಪಹಾಸ್ಯ ಮಾಡಿದೆ ಮತ್ತು ಇಸ್ರೇಲ್ ಮತ್ತು ಕೊಲ್ಲಿ ಪ್ರದೇಶದ ಮೇಲೆ ಹೆಚ್ಚಿನ ದಾಳಿಗಳನ್ನು ಪ್ರಾರಂಭಿಸಿದೆ. ಇದರಲ್ಲಿ ಕುವೈತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ದಾಳಿಯೂ ಸೇರಿದೆ.
ಯುದ್ಧ ಆರಂಭವಾಗಿ ಒಂದು ತಿಂಗಳು ಸಮೀಪಿಸುತ್ತಿರುವಾಗ ಸಂಘರ್ಷವನ್ನು ಕೊನೆಗೊಳಿಸುವಂತೆ ಅಮೆರಿಕದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಈ ಬೆನ್ನಲ್ಲೇ, ಅಮೆರಿಕದ ಅಧಿಕಾರಿಗಳು ಪಾಕಿಸ್ತಾನದ ಮಧ್ಯವರ್ತಿಗಳ ಮೂಲಕ ಇರಾನ್‌ಗೆ ಯೋಜನೆಯೊಂದನ್ನು ಸಲ್ಲಿಸಿದ್ದಾರೆ. ಅವರು ಹೊಸ ಮಾತುಕತೆಗಳನ್ನು ಆಯೋಜಿಸಲು ಮುಂದಾಗಿದ್ದಾರೆ. ಅಮೆರಿಕದ ಅಧಿಕಾರಿಗಳು ಇರಾನ್‌ನೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಯಾರೊಂದಿಗೆ ಸಂಪರ್ಕದಲ್ಲಿದ್ದಾರೆಂದು ಹೇಳಿಲ್ಲ.
ಇರಾನ್ ವಿರೋಧ
ಸಾಮಾನ್ಯ ಮಿಲಿಟರಿ ಮತ್ತು ಅರೆಸೈನಿಕ ಕ್ರಾಂತಿಕಾರಿ ಗಾರ್ಡ್ ಎರಡನ್ನೂ ನಿಯಂತ್ರಿಸುವ ಇರಾನ್‌ನ ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯು, ಈ ಹೇಳಿಕೆಯನ್ನು ತಿರಸ್ಕರಿಸಿದ್ದು, ಅಮೆರಿಕದೊಂದಿಗೆ ಯಾವುದೇ ಮಾತುಕತೆ ಇಲ್ಲ ಎಂದು ಸೂಚಿಸಿದೆ.
'ನಿಮ್ಮ ಆಂತರಿಕ ಸಂಘರ್ಷಗಳು ನಿಮ್ಮೊಂದಿಗೆ ನೀವೆ ಮಾತುಕತೆ ನಡೆಸುವ ಹಂತವನ್ನು ತಲುಪಿವೆಯೇ?' ಎಂದು ಪ್ರಧಾನ ಕಚೇರಿಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಇಬ್ರಾಹಿಂ ಝೋಲ್ಫಾಘರಿ ಪ್ರಶ್ನಿಸಿದ್ದಾರೆ.
'ನಮ್ಮ ಮೊದಲ ಮತ್ತು ಕೊನೆಯ ಮಾತು ಮೊದಲ ದಿನದಿಂದಲೂ ಒಂದೇ ಆಗಿತ್ತು ಮತ್ತು ಅದು ಹಾಗೆಯೇ ಇರುತ್ತದೆ: ನಮ್ಮಂತಹವರು ನಿಮ್ಮಂತಹವರ ಜೊತೆ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಈಗ ಅಲ್ಲ, ಎಂದಿಗೂ ಅದು ಸಾಧ್ಯವಿಲ್ಲ' ಎಂದು ಝೋಲ್ಫಾಘರಿ ರಾಜ್ಯ ದೂರದರ್ಶನದಲ್ಲಿ ಪ್ರಸಾರವಾದ ವಿಡಿಯೋ ಹೇಳಿಕೆಯಲ್ಲಿ ಹೇಳಿದರು.
ಅಮೆರಿಕ ಮಾತುಕತೆ ನಡೆಸುವ ಸ್ಥಿತಿಯಲ್ಲಿಲ್ಲ. ನೀವು ಮಾತನಾಡುತ್ತಿದ್ದ ಕಾರ್ಯತಂತ್ರದ ಶಕ್ತಿಯು ವೈಫಲ್ಯಕ್ಕೆ ತಿರುಗಿದೆ. ಜಾಗತಿಕ ಸೂಪರ್ ಪವರ್ ಎಂದು ಹೇಳಿಕೊಳ್ಳುವವರು ಸಾಧ್ಯವಾದರೆ, ಈ ಅವ್ಯವಸ್ಥೆಯಿಂದ ಈಗಾಗಲೇ ಹೊರಬರುತ್ತಿದ್ದರು' ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


