ದೇಶ

West Asia war: ಶಾಂತಿ ಸ್ಥಾಪನೆಗೆ ಪಾಕ್ ಮಧ್ಯಸ್ಥಿಕೆ; ಶತ್ರು ರಾಷ್ಟ್ರಕ್ಕೆ ಹೆಚ್ಚಿದ ಜಾಗತಿಕ ಪ್ರಾಮುಖ್ಯತೆ, ಭಾರತಕ್ಕೆ ತೀವ್ರ ಹಿನ್ನಡೆ..?

ಪಾಕಿಸ್ತಾನ, ಅಮೆರಿಕಾ-ಇಸ್ರೇಲ್ ಹಾಗೂ ಇರಾನ್ ಪರವಾಗಿ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ಕಳವಳಕಾರಿಯಾಗಿದ್ದು, ಇದರಿಂದ ಭಾರತದ ರಾಜತಾಂತ್ರಿಕ ಸ್ಥಿತಿಗೆ ಹಿನ್ನಡೆಯಾಗಲಿದೆ.

West Asia war: ಶಾಂತಿ ಸ್ಥಾಪನೆಗೆ ಪಾಕ್ ಮಧ್ಯಸ್ಥಿಕೆ; ಶತ್ರು ರಾಷ್ಟ್ರಕ್ಕೆ ಹೆಚ್ಚಿದ ಜಾಗತಿಕ ಪ್ರಾಮುಖ್ಯತೆ, ಭಾರತಕ್ಕೆ ತೀವ್ರ ಹಿನ್ನಡೆ..?
ಡೊನಾಲ್ಡ್ ಟ್ರಂಪ್-ನರೇಂದ್ರ ಮೋದಿ
Published On :

ನವದೆಹಲಿ: ಮಧ್ಯ ಪ್ರಾಚ್ಯಜಲ್ಲಿ ನಡೆಯುತ್ತಿರುವ ಯುದ್ಧಸಮಾನ ಪರಿಸ್ಥಿತಿಯ ನಡುವೆ, ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಶಾಂತಿ ಸ್ಥಾಪನೆಗಾಗಿ ಪಾಕಿಸ್ತಾನ ಮಧ್ಯಸ್ಥಿತಿಗೆ ವಹಿಸುತ್ತಿದೆ ಎಂಬ ಅಂತರರಾಷ್ಟ್ರೀಯ ಮಾಧ್ಯಮ ವರದಿಗಳು ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿವೆ.

ಈ ಬೆಳವಣಿಗೆ ಸತ್ಯವಾಗಿರುವುದೇ ಆದರೆ, ಅದು ಭಾರತಕ್ಕೆ “ತೀವ್ರ ಹಿನ್ನಡೆ” ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಹೇಳಿಕೆ ನೀಡಿದ್ದಾರೆ.

ಪ್ರಮುಖ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಉಲ್ಲೇಖಿಸಿ ಮಾತನಾಡಿರುವ ಅವರು, ಪಾಕಿಸ್ತಾನ, ಅಮೆರಿಕಾ-ಇಸ್ರೇಲ್ ಹಾಗೂ ಇರಾನ್ ಪರವಾಗಿ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ಕಳವಳಕಾರಿಯಾಗಿದ್ದು, ಇದರಿಂದ ಭಾರತದ ರಾಜತಾಂತ್ರಿಕ ಸ್ಥಿತಿಗೆ ಹಿನ್ನಡೆಯಾಗುತ್ತದೆ ಎಂದು ಹೇಳಿದ್ದಾರೆ.

ಇಧೇ ವೇಳೆ ಕೇಂದ್ರ ಸರ್ಕಾರವನ್ನು ಟೀಕಿಸಿರುವ ಅವರು, ಭಾರತವು ಸೈನಿಕವಾಗಿ ಸಾಧನೆಗಳನ್ನು ಮಾಡಿದರೂ, ರಾಜತಾಂತ್ರಿಕ ಮಟ್ಟದಲ್ಲಿ ಪಾಕಿಸ್ತಾನ ಮೇಲುಗೈ ಸಾಧಿಸಿದೆ. ವಿಶೇಷವಾಗಿ ‘ಆಪರೇಷನ್ ಸಿಂಧೂರ್’ ನಂತರದ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಜಾಗತಿಕ ಸಂಪರ್ಕ ಮತ್ತು ಪ್ರಚಾರ ತಂತ್ರಗಳು ಭಾರತಕ್ಕಿಂತ ಪರಿಣಾಮಕಾರಿ ಆಗಿವೆ ಎಂದು ತಿಳಿಸಿದ್ದಾರೆ.

ಈ ಹಿಂದೆ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಂಕಷ್ಟದಲ್ಲಿದ್ದ ಪಾಕಿಸ್ತಾನ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಪ್ರಾಮುಖ್ಯತೆ ಗಳಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಪಾಕಿಸ್ತಾನದ ಸಂಬಂಧಗಳು ಹೆಚ್ಚು ಸೌಹಾರ್ದಯುತವಾಗಿದೆ ಎಂದೂ ತಿಳಿಸಿದ್ದಾರೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ವೈಟ್ ಹೌಸ್‌ನಲ್ಲಿ ಆತಿಥ್ಯ ನೀಡಿರುವುದು, ಎರಡೂ ದೇಶಗಳ ನಡುವಿನ ಆಪ್ತತೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇತ್ತೀಚಿನ ಇಸ್ರೇಲ್ ಭೇಟಿಯನ್ನು ಕೂಡ ಅವರು ತೀವ್ರವಾಗಿ ಟೀಕಿಸಿದ್ದಾರೆ.

ಯುದ್ಧ ಪ್ರಾರಂಭವಾಗುವ ಮೊದಲು ನಡೆದ ಈ ಭೇಟಿ ರಾಜತಾಂತ್ರಿಕವಾಗಿ ತಪ್ಪಾದ ನಿರ್ಧಾರವಾಗಿದ್ದು, ಇದರಿಂದ ಭಾರತ ಮಧ್ಯಸ್ಥಿಕೆ ವಹಿಸುವ ಅವಕಾಶವನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.

ಅಮೆರಿಕಾ-ಇರಾನ್ ಮಾತುಕತೆ ನಡೆಯುತ್ತಿದೆ: ಟ್ರಂಪ್

ಏತನ್ಮಧ್ಯೆ, ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮಾತುಕತೆ ನಡೆಸಲು ಅಮೆರಿಕಾ ಇರಾನ್ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಹೇಳಿದ್ದಾರೆ, ಆದರೆ ಇರಾನ್ ಈ ಮಾತುಕತೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಇವು “ಸುಳ್ಳುಸುದ್ದಿ” ಎಂದು ಪ್ರತಿಕ್ರಿಯಿಸಿದೆ.

ಈ ನಡುವೆ ವೈಟ್ ಹೌಸ್ ಕೂಡ ಇಸ್ಲಾಮಾಬಾದ್‌ನಲ್ಲಿ ಗುಪ್ತ ಸಭೆಗಳು ನಡೆಯುತ್ತಿವೆ ಎಂಬ ವರದಿಗಳನ್ನು ದೃಢಪಡಿಸಿಲ್ಲ. ಪರಿಸ್ಥಿತಿ ಇನ್ನೂ ಸೂಕ್ಷ್ಮವಾಗಿದ್ದು, ಅಧಿಕೃತ ಘೋಷಣೆಗಳ ಹೊರತು ಇಂತಹ ವಿಷಯಗಳನ್ನು ದೃಢಪಡಿಸಲಾಗುವುದಿಲ್ಲ ಎಂದು ಅಮೆರಿಕಾ ಸ್ಪಷ್ಟಪಡಿಸಿದೆ.

ಒಟ್ಟಾರೆ, ಮಧ್ಯ ಪ್ರಾಚ್ಯ ಯುದ್ಧ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಪಾತ್ರ ಹೆಚ್ಚುತ್ತಿರುವ ಸಾಧ್ಯತೆ ಹಾಗೂ ಭಾರತಕ್ಕೆ ಅದರ ಪರಿಣಾಮಗಳ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.