ಇಂದೋರ್‌ನಲ್ಲಿ ಅಗ್ನಿ ಅವಘಡ: ಒಂದೇ ಕುಟುಂಬದ 8 ಮಂದಿ ಸಜೀವ ದಹನ; ಇವಿ ಚಾರ್ಜಿಂಗ್ ಶಾರ್ಟ್ ಸರ್ಕ್ಯೂಟ್ ಶಂಕೆ!
ಬೆಳಗ್ಗೆ ಸುಮಾರು 4 ಗಂಟೆ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಮನೆಯ ಹೊರಭಾಗದಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜ್ ಮಾಡುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಭೋಪಾಲ್: ಮಧ್ಯಪ್ರದೇಶದ ಇಂದೋರ್‌ನ ತಿಲಕ್ ನಗರ ಪ್ರದೇಶದಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಎಂಟು ಮಂದಿ ಸಜೀವ ದಹನವಾಗಿದ್ದಾರೆ.
ಮೃತರನ್ನು ವಿಜಯ್ ಸೇಥಿಯಾ (65), ಸುಮನ್ (60), ಮನೋಜ್ ಪುಗಲಿಯಾ (65), ಸಿಮ್ರಾನ್ (30), ಟಿನು (35), ಛೋಟು ಸೇಥಿಯಾ (22), ಮತ್ತು 12 ವರ್ಷದ ರಾಶಿ ಸೇಥಿಯಾ ಎಂದು ಗುರ್ತಿಸಲಾಗಿದೆ. ಇನ್ನು ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳಲ್ಲಿ ಓರ್ವ ವ್ಯಕ್ತಿ ಇದೀಗ ಮೃತಪಟ್ಟಿದ್ದು, ಇದರೊಂದಿಗೆ ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಬೆಳಗ್ಗೆ ಸುಮಾರು 4 ಗಂಟೆ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಮನೆಯ ಹೊರಭಾಗದಲ್ಲಿ ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ಮನೆಯೊಳಗೆ ಹಲವು ಎಲ್‌ಪಿಜಿ ಸಿಲಿಂಡರ್‌ಗಳು ಇದ್ದ ಹಿನ್ನೆಲೆಯಲ್ಲಿ ಬೆಂಕಿ ಆವರಿಸಿ, ಸಿಲಿಂಡರ್ ಗಳೂ ಸ್ಫೋಟಗೊಂಡಿವೆ. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯುಂಟಾಗಿದೆ ಎಂದು ತಿಳಿದುಬಂದಿದೆ.
ಕಟ್ಟಡದಲ್ಲಿ ಹಲವರು ಸಿಲುಕಿಕೊಂಡಿದ್ದು, ಈವರೆಗೂ ಮೂವರನ್ನು ರಕ್ಷಣೆ ಮಾಡಲಾಗಿದ್ದು, ಆರು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಇಂದೋರ್ ಪೊಲೀಸ್ ಆಯುಕ್ತ ಸಂತೋಷ್ ಸಿಂಗ್ ಅವರು ಹೇಳಿದ್ದಾರೆ.
ಇನ್ನು ಅಗ್ನಿ ಅವಘಡದಿಂದ ವಿದ್ಯುತ್ ಸರಬರಾಜು ಕಡಿತವಾದ ಕಾರಣ ಮನೆಯಲ್ಲಿ ಅಳವಡಿಸಿದ್ದ ಎಲೆಕ್ಟ್ರಾನಿಕ್ ಲಾಕ್ ವ್ಯವಸ್ಥೆ ಕಾರ್ಯನಿರ್ವಹಿಸದೇ ಹೋಗಿದ್ದು, ರಕ್ಷಣಾ ಕಾರ್ಯ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.
ಮೃತರು 12ರಿಂದ 65 ವರ್ಷದೊಳಗಿನವರು ಆಗಿದ್ದು, ಅವರಲ್ಲಿ 12 ವರ್ಷದ ಬಾಲಕಿ ಹಾಗೂ ಇಬ್ಬರು ಮಹಿಳೆಯರು ಸೇರಿದ್ದಾರೆ. ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ಸುಮಾರು 10 ಎಲ್'ಪಿಜಿ ಸಿಲಿಂಡರ್ ಗಳಿರುವುದು ಪತ್ತೆಯಾಗಿದ್ದು, ಇಷ್ಟು ದೊಡ್ಡ ಸಂಖ್ಯೆಯ ಸಿಲಿಂಡರ್ ಯಾವ ಕಾರಣಕ್ಕೆ ಸಂಗ್ರಹಿಸಿದ್ದರು ಎಂಬುದು ತಿಳಿದುಬಂದಿಲ್ಲ.
ಕುಟುಂಬವು ಪ್ಲಾಸ್ಟಿಕ್ ಉದ್ಯಮ ನಡೆಸುತ್ತಿದ್ದು, ನೆರೆಯ ಧಾರ್ ಜಿಲ್ಲೆಯ ಪಿತಾಂಪುರ್ ಕೈಗಾರಿಕಾ ಪ್ರದೇಶದಲ್ಲಿ ಉತ್ಪಾದನಾ ಘಟಕ ಮತ್ತು ಇಂದೋರ್‌ನ ಸಿಯಾಗಂಜ್ ಸಗಟು ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ತನಿಖೆ ಮುಂದುವರೆದಿದ್ದು, ತನಿಖೆಯ ನಂತರ ಅಗ್ನಿ ಅವಘಡಕ್ಕೆ ನಿಖರ ಕಾರಣಗಳು ತಿಳಿದುಬರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



