ದೇಶ

ಒಡಿಶಾದ SCB ವೈದ್ಯಕೀಯ ಕಾಲೇಜಿನಲ್ಲಿ ಭಾರೀ ಅಗ್ನಿ ಅವಘಡ: ಕನಿಷ್ಠ 10 ಮಂದಿ ಸಾವು, ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ ಪರಿಹಾರ ಘೋಷಣೆ; Video

ಇವರಲ್ಲಿ ಹೆಚ್ಚಿನವರು ವೆಂಟಿಲೇಟರ್ ಹಾಗೂ ಆಕ್ಸಿಜನ್ ಸಹಾಯದೊಂದಿಗೆ ಇದ್ದುದರಿಂದ ಅವರನ್ನು ತಕ್ಷಣವೇ ಸ್ಥಳಾಂತರಿಸುವುದು ಕಷ್ಟವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಒಡಿಶಾದ SCB ವೈದ್ಯಕೀಯ ಕಾಲೇಜಿನಲ್ಲಿ ಭಾರೀ ಅಗ್ನಿ ಅವಘಡ: ಕನಿಷ್ಠ 10 ಮಂದಿ ಸಾವು, ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ ಪರಿಹಾರ ಘೋಷಣೆ; Video
ಅಗ್ನಿ ಅವಘಡ ಸಂಭವಿಸಿರುವುದು.
Published On :

ಕಟಕ್: ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 10 ಮಂದಿ ರೋಗಿಗಳು ಮೃತಪಟ್ಟಿರುವ ದುರ್ಘಟನೆ ಸೋಮವಾರ ಮುಂಜಾನೆ ನಡೆದಿದೆ.

ಈ ಘಟನೆ ಕಟಕ್ ನಗರದಲ್ಲಿರುವ ಆಸ್ಪತ್ರೆಯ ಟ್ರಾಮಾ ಕೇರ್ ಐಸಿಯು ವಿಭಾಗದಲ್ಲಿ ಸಂಭವಿಸಿದೆ. ಸೋಮವಾರ ಮುಂಜಾನೆ ಸುಮಾರು 2.59 ಗಂಟೆ ವೇಳೆಗೆ ಐಸಿಯುವಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ನಡೆದ ವೇಳೆಗೆ ಐಸಿಯುವಿನಲ್ಲಿ ಸುಮಾರು 15 ಮಂದಿ ರೋಗಿಗಳು ದಾಖಲಾಗಿದ್ದರು.

ಇವರಲ್ಲಿ ಹೆಚ್ಚಿನವರು ವೆಂಟಿಲೇಟರ್ ಹಾಗೂ ಆಕ್ಸಿಜನ್ ಸಹಾಯದೊಂದಿಗೆ ಇದ್ದುದರಿಂದ ಅವರನ್ನು ತಕ್ಷಣವೇ ಸ್ಥಳಾಂತರಿಸುವುದು ಕಷ್ಟವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಈ ನಡುವೆ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಸಂದರ್ಭದಲ್ಲಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಭುವನೇಶ್ವರ-ಕಟಕ್ ಪೊಲೀಸ್ ಆಯುಕ್ತ ಎಸ್ ದೇವ್ ದತ್ತ ಸಿಂಗ್ ಅವರು ಮಾತನಾಡಿ, ಈ ದುರಂತದಲ್ಲಿ 10 ಮಂದಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಸಾವಿಗೀಡಾದವರಲ್ಲಿ ಮಕ್ಕಳು ಯಾರೂ ಇಲ್ಲ ಎಂದು ತಿಳಿಸಿದ್ದಾರೆ.

ಘಟನೆ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಆಸ್ಪತ್ರೆಯಲ್ಲಿದ್ದ ಅಗ್ನಿಶಾಮಕ ಘಟಕದ ಜೊತೆಗೆ ಕಟಕ್ ಅಗ್ನಿಶಾಮಕ ಠಾಣೆಯಿಂದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಸಹಕರಿಸಿದರು. ಕನಿಷ್ಠ ಮೂರು ಅಗ್ನಿಶಾಮಕ ವಾಹನಗಳು ಹಾಗೂ 30ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕಾರ್ಯಾಚರಣೆಗೆ ನಿಯೋಜಿಸಲಾಯಿತು.

ಆದರೆ, ಘಟನೆ ನಡೆದ ಸಮಯದಲ್ಲಿ ಐಸಿಯುವಿನಲ್ಲಿ ಸಾಕಷ್ಟು ವೈದ್ಯರು ಹಾಗೂ ನರ್ಸ್‌ಗಳು ಇರದಿದ್ದ ಕಾರಣ ರೋಗಿಗಳನ್ನು ಸ್ಥಳಾಂತರಿಸುವಲ್ಲಿ ವಿಳಂಬ ಉಂಟಾಯಿತು ಎಂದು ಮೂಲಗಳು ತಿಳಿಸಿವೆ.

ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಒಡಿಶಾದ ಅತಿದೊಡ್ಡ ಸರ್ಕಾರಿ ಆರೋಗ್ಯ ಸಂಸ್ಥೆಯಾಗಿದ್ದು, ಸಾವಿರಾರು ರೋಗಿಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಮಧ್ಯೆ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದರು.

ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು.

ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ ಮುಖ್ಯಮಂತ್ರಿಗಳು, ಐಸಿಯುವಿನಲ್ಲಿ ಇದ್ದ ಉಳಿದ ರೋಗಿಗಳನ್ನು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದೇ ವೇಳೆ ಘಟನೆಯಲ್ಲಿ ರೋಗಿಗಳನ್ನು ರಕ್ಷಣೆ ಮಾಡುವ ವೇಳೆ 11 ಮಂದಿ ಆಸ್ಪತ್ರೆಯ ಸಿಬ್ಬಂದಿಗಳಿಗೂ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.