ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ? ಕೇಂದ್ರದ ವಿರುದ್ಧ TMC ವಾಗ್ದಾಳಿ
ಪಕ್ಷದ ವರಿಷ್ಠೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಆಡಳಿತಾರೂಢ ಟಿಎಂಸಿ ನಾಯಕರು ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಲವಂತದಿಂದ ಬೋಸ್ ದಿಢೀರ್ ರಾಜೀನಾಮೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿನ ರಾಜಕೀಯ ದಿನದಿಂದ ದಿನಕ್ಕೆ ತೀವ್ರ ಕುತೂಹಲಕ್ಕೆ ಕಾರಣವಾಗುತ್ತಿದೆ. ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರ ದಿಢೀರ್ ರಾಜೀನಾಮೆ ಮತ್ತು ಅವರ ಸ್ಥಾನಕ್ಕೆ ತಮಿಳುನಾಡು ರಾಜ್ಯಪಾಲ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಆರ್.ಎನ್.ರವಿ ಅವರನ್ನು ನೇಮಿಸಿರುವುದು ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆಯೇ?ಎಂಬ ವದಂತಿಯನ್ನು ಹುಟ್ಟುಹಾಕಿದೆ.
ಪಕ್ಷದ ವರಿಷ್ಠೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಆಡಳಿತಾರೂಢ ಟಿಎಂಸಿ ನಾಯಕರು ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಲವಂತದಿಂದ ಬೋಸ್ ದಿಢೀರ್ ರಾಜೀನಾಮೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಶೇಷವಾಗಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಮಧ್ಯೆ ರಾಜಕೀಯ ಲಾಭಕ್ಕಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಕೇಂದ್ರದ ಸಂಚಿನ ಭಾಗವಾಗಿ ಈ ಬೆಳವಣಿಗೆಯಾಗಿರಬಹುದು ಎಂದು ಪಕ್ಷದ ನಾಯಕತ್ವವು ಆತಂಕ ವ್ಯಕ್ತಪಡಿಸಿದೆ. SIR ಪ್ರಕ್ರಿಯೆಯಿಂದ 60 ಲಕ್ಷಕ್ಕೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ವರದಿಯಾಗಿದೆ.
ಇನ್ನೂ 60 ಲಕ್ಷ ಮತದಾರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ, ಟಿಎಂಸಿಯ ಆರೋಪಗಳನ್ನು ರಾಜ್ಯದ ಬಿಜೆಪಿ ನಾಯಕರು ತಳ್ಳಿಹಾಕಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರಕ್ಕೆ ಯಾವುದೇ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.
ಬಂಗಾಳದಲ್ಲಿ 356 ನೇ ವಿಧಿಯನ್ನು ಹೇರುವ ಬಗ್ಗೆ ಬಿಜೆಪಿಗೆ ಯಾವುದೇ ಆಸಕ್ತಿಯಿಲ್ಲ. SIR ಪ್ರಕ್ರಿಯೆ ಮುಗಿದು ಮತದಾರರ ಪಟ್ಟಿಯನ್ನು ಸರಿಯಾಗಿ ಅಂತಿಮಗೊಳಿಸಿದ ನಂತರ ಸಮಯಕ್ಕೆ ಸರಿಯಾಗಿ ಚುನಾವಣೆಗಳನ್ನು ನಡೆಸಬೇಕೆಂದು ನಾವು ಬಯಸುತ್ತೇವೆ ಎಂದು ಅರ್ಥಶಾಸ್ತ್ರಜ್ಞ ಮತ್ತು ಬಿಜೆಪಿ ಶಾಸಕ ಅಶೋಕ್ ಲಾಹಿರಿ TNIE ಗೆ ಹೇಳಿದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಮತಬ್ಯಾಂಕ್ ಆಗಿರುವ ನುಸುಳುಕೋರರ ಡಿಲೀಟ್ ಗೆ ಹೆದರಿ ಎಸ್ಐಆರ್ ಪ್ರಕ್ರಿಯೆಯನ್ನು ತಡೆಯಲು ಅಡ್ಡಿಪಡಿಸುತ್ತಿದ್ದಾರೆ. ರಾಷ್ಟ್ರಪತಿ ಆಳ್ವಿಕೆಯ ವಿಷಯ ಪ್ರಸ್ತಾಪಿಸುವ ಮೂಲಕ ಬಿಜೆಪಿ ಕಾರಣ ಎನ್ನುವಂತೆ ಪ್ರತಿಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಲಾಹಿರಿ ವಾಗ್ದಾಳಿ ನಡೆಸಿದ್ದಾರೆ.
ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಸಿ.ವಿ. ಆನಂದ ಬೋಸ್ ಅವರ ದಿಢೀರ್ ರಾಜೀನಾಮೆಯ ಸುದ್ದಿಯಿಂದ ಆಘಾತಕ್ಕೊಳಗಾಗಿದ್ದೇನೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ.
"ಅವರ ರಾಜೀನಾಮೆಯ ಹಿಂದಿನ ಕಾರಣಗಳು ನನಗೆ ಸದ್ಯಕ್ಕೆ ತಿಳಿದಿಲ್ಲ, ಆದರೆ, ಸದ್ಯದ ಪರಿಸ್ಥಿತಿಗಳನ್ನು ಗಮನಿಸಿದರೆ, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಮುನ್ನಾ ಕೆಲವು ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಲು ಕೇಂದ್ರ ಗೃಹ ಸಚಿವರಿಂದ ರಾಜ್ಯಪಾಲರು ಸ್ವಲ್ಪ ಒತ್ತಡಕ್ಕೆ ಒಳಗಾಗಿದ್ದರೆ ಆಶ್ಚರ್ಯವಿಲ್ಲ ಅನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಆರ್.ಎನ್. ರವಿ ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವರು ನನಗೆ ತಿಳಿಸಿದ್ದಾರೆ. ಆದರೆ ಶಿಷ್ಟಾಚಾರದಂತೆ ನನ್ನ ಜೊತೆಗೆ ಸಮಾಲೋಚನೆ ನಡೆಸಿಲ್ಲ. ಇಂತಹ ಕ್ರಮಗಳು ಭಾರತದ ಸಂವಿಧಾನವನ್ನು ದುರ್ಬಲಗೊಳಿಸುತ್ತವೆ ಮತ್ತು ನಮ್ಮ ಒಕ್ಕೂಟ ವ್ಯವಸ್ಥೆ ಮೇಲೆ ದಾಳಿ ಮಾಡುತ್ತವೆ. ಕೇಂದ್ರವು ಸಹಕಾರಿ ಒಕ್ಕೂಟದ ತತ್ವಗಳನ್ನು ಗೌರವಿಸಬೇಕು ಮತ್ತು ಪ್ರಜಾಪ್ರಭುತ್ವದ ಸಂಪ್ರದಾಯಗಳು ಮತ್ತು ರಾಜ್ಯಗಳ ಘನತೆಯನ್ನು ಕುಗ್ಗಿಸುವ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
“ಚುನಾವಣೆಗೂ ಮುನ್ನ ಬಂಗಾಳದಲ್ಲಿ 356 ನೇ ವಿಧಿಯನ್ನು ಹೇರಲು ಸಂಚು ನಡೆಸಿರುವುದು ಬಿಜೆಪಿಯ ಕೆಟ್ಟ ಯೋಜನೆಯಾಗಿದೆ ಎಂದು ಮಮತಾ ಬ್ಯಾನರ್ಜಿ ಸಂಪುಟದ ಹಿರಿಯ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ, ಹೇಳಿದ್ದಾರೆ. ಬಿಜೆಪಿ ನಾಯಕರಾದ ಸ್ವಪನ್ ದಾಸ್ಗುಪ್ತ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



