'ಇದು ನನ್ನ ಮನದ ಆಸೆ': ಸಿಎಂ ಹುದ್ದೆ ತೊರೆದು ರಾಜ್ಯಸಭೆ ಪ್ರವೇಶ ಖಚಿತಪಡಿಸಿದ Nitish Kumar
75 ವರ್ಷದ ಹಿರಿಯ ನಾಯಕ ನಿತೀಶ್ ಕುಮಾರ್, ಕಳೆದ ವರ್ಷದ ನವೆಂಬರ್‌ನಲ್ಲಿ ದಾಖಲೆ 10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ರಾಜ್ಯದ ಜನರು ನಿರಂತರವಾಗಿ ತಮಗೆ ವಿಶ್ವಾಸ ತೋರಿಸಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಂತೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 20 ವರ್ಷಕ್ಕಿಂತ ಹೆಚ್ಚು ಕಾಲ ವಹಿಸಿಕೊಂಡಿದ್ದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ರಾಜ್ಯಸಭೆಗೆ ಸೇರುವುದಾಗಿ ದೃಢಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಅವರು ಈ ವಿಚಾರವನ್ನು ಹಂಚಿಕೊಂಡಿದ್ದು, ನನ್ನ ರಾಜಕೀಯ ಜೀವನದ ಆರಂಭದಿಂದಲೇ ಬಿಹಾರ ವಿಧಾನಮಂಡಲದ ಎರಡೂ ಸದನಗಳಲ್ಲೂ ಹಾಗೂ ಭಾರತದ ಸಂಸತ್ತಿನ ಎರಡೂ ಸದನಗಳಲ್ಲೂ ಸದಸ್ಯನಾಗಬೇಕೆಂಬ ಆಸೆ ನನ್ನ ಮನಸ್ಸಿನಲ್ಲಿ ಇತ್ತು. ನನ್ನ ಆಸೆಯಂತೆ ಈ ಬಾರಿ ನಡೆಯುತ್ತಿರುವ ಚುನಾವಣೆಯಲ್ಲಿ ರಾಜ್ಯಸಭೆ ಸದಸ್ಯನಾಗಲು ಬಯಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
75 ವರ್ಷದ ಹಿರಿಯ ನಾಯಕ ನಿತೀಶ್ ಕುಮಾರ್, ಕಳೆದ ವರ್ಷದ ನವೆಂಬರ್‌ನಲ್ಲಿ ದಾಖಲೆ 10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ರಾಜ್ಯದ ಜನರು ನಿರಂತರವಾಗಿ ತಮಗೆ ವಿಶ್ವಾಸ ತೋರಿಸಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಎರಡು ದಶಕಕ್ಕೂ ಹೆಚ್ಚು ಕಾಲ ನೀವು ನನ್ನ ಮೇಲೆ ನಿರಂತರವಾಗಿ ವಿಶ್ವಾಸ ಮತ್ತು ಬೆಂಬಲವನ್ನು ತೋರಿದ್ದೀರಿ. ಆ ವಿಶ್ವಾಸದ ಶಕ್ತಿಯಿಂದಲೇ ನಾವು ಬಿಹಾರ ಜನರಿಗೆ ಸಂಪೂರ್ಣ ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸಿದ್ದೇವೆ. ನಿಮ್ಮ ವಿಶ್ವಾಸ ಮತ್ತು ಬೆಂಬಲದ ಕಾರಣದಿಂದಲೇ ಇಂದು ಬಿಹಾರ ಅಭಿವೃದ್ಧಿ ಮತ್ತು ಗೌರವದ ಹೊಸ ದಿಕ್ಕನ್ನು ಕಾಣುತ್ತಿದೆ ಎಂದು ಅವರು ಬರೆದಿದ್ದಾರೆ.
ಜೆಡಿಯು ಮುಖ್ಯಸ್ಥರೂ ಆಗಿರುವ ನಿತೀಶ್ ಕುಮಾರ್ ಅವರು, ಮುಂದೆಯೂ ರಾಜ್ಯದ ಜನರೊಂದಿಗೆ ತಮ್ಮ ಸಂಬಂಧ ಮುಂದುವರಿಯಲಿದೆ ಹಾಗೂ ಹೊಸ ಸರ್ಕಾರಕ್ಕೆ ಮಾರ್ಗದರ್ಶನ ನೀಡುವುದಾಗಿ ಹೇಳಿದ್ದಾರೆ.
ನಿಮ್ಮೊಂದಿಗೆ ನನ್ನ ಸಂಬಂಧ ಮುಂದೆಯೂ ಮುಂದುವರಿಯುತ್ತದೆ. ಅಭಿವೃದ್ಧಿ ಬಿಹಾರ ನಿರ್ಮಾಣಕ್ಕೆ ನಿಮ್ಮೊಂದಿಗಿನ ನಮ್ಮ ಪ್ರಯತ್ನ ಅಚಲವಾಗಿರುತ್ತದೆ. ಹೊಸದಾಗಿ ರೂಪುಗೊಳ್ಳುವ ಸರ್ಕಾರಕ್ಕೆ ನನ್ನ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ಇರುತ್ತದೆ ಎಂದು ತಿಳಿಸಿದ್ದಾರೆ.
ಯಾರಾಗುತ್ತಾರೆ ಬಿಹಾರ ಸಿಎಂ?
2005ರಲ್ಲಿ ಮೊದಲ ಬಾರಿಗೆ ಬಿಹಾರ ಮುಖ್ಯಮಂತ್ರಿ ಆಗಿ ಆಯ್ಕೆಯಾದ ನಿತೀಶ್ ಕುಮಾರ್ ಅವರು ಒಟ್ಟು 10 ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಸುಧಾರಿಸುವುದು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಉತ್ತಮ ಆಡಳಿತ ಅವರಿಗೆ ರಾಜಕೀಯ ಶ್ರೇಯಸ್ಸನ್ನು ನೀಡಿದೆ.
ಜೆಡಿಯುನಿಂದ ರಾಜ್ಯಸಭೆಗೆ ಅವರ ಏಕೈಕ ನಾಮನಿರ್ದೇಶನ ಖಚಿತವಾಗಿರುವುದರಿಂದ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಾಗುತ್ತದೆ. ಅವರ ಉತ್ತರಾಧಿಕಾರಿಯಾಗಿ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹ ಅವರ ಹೆಸರುಗಳು ಸಿಎಂ ಹುದ್ದೆಯ ಚರ್ಚೆಯಲ್ಲಿವೆ.
ಇದರ ಮಧ್ಯೆ ಎನ್ ಡಿಎ ಸಭೆಗಳು ನಡೆಯುತ್ತಿದ್ದು, ಮಾರ್ಚ್ 16ರಂದು ನಡೆಯುವ ಚುನಾವಣೆಗೆ ಮುನ್ನ ಪಟ್ನಾದಲ್ಲಿ ನಡೆಯುವ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಜರಾಗುವ ನಿರೀಕ್ಷೆಯಿದೆ.
ಜೆಡಿಯು ಕಾರ್ಯಕರ್ತರಿಂದ ಪ್ರತಿಭಟನೆ
ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಸಭೆ ಪ್ರವೇಶಿಸುವುದು ಜೆಡಿಯು ಕಾರ್ಯಕರ್ತರಿಗೆ ಇಷ್ಟವಿಲ್ಲ, ಹೀಗಾಗಿ ಇಂದು ಪಾಟ್ನಾದಲ್ಲಿ ನಿತೀಶ್ ಕುಮಾರ್ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



