ದೇಶ

ಎತ್ತಿನಹೊಳೆ ಯೋಜನೆ: ಜೆಜೆಎಂನಲ್ಲಿ 4,708 ಕೋಟಿ ರೂ. ವೆಚ್ಚ ಭರಿಸಲು ಕೇಂದ್ರಕ್ಕೆ ಈಶ್ವರ ಖಂಡ್ರೆ ಮನವಿ

ಪಶ್ಚಿಮ ಘಟ್ಟಗಳ ಮೇಲ್ಭಾಗದಿಂದ ಬರಪೀಡಿತ ಜಿಲ್ಲೆಗಳಿಗೆ 24.01 ಟಿಎಂಸಿ ನೀರನ್ನು ಎತ್ತುವಳಿ ಮಾಡಲು ಎತ್ತಿನಹೊಳೆ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದ್ದು, ಇದರಲ್ಲಿ 14.056 ಟಿಎಂಸಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ್ದಾಗಿದೆ.

ಎತ್ತಿನಹೊಳೆ ಯೋಜನೆ:  ಜೆಜೆಎಂನಲ್ಲಿ 4,708 ಕೋಟಿ ರೂ. ವೆಚ್ಚ ಭರಿಸಲು ಕೇಂದ್ರಕ್ಕೆ ಈಶ್ವರ ಖಂಡ್ರೆ ಮನವಿ
ಕೇಂದ್ರ ಸಚಿವರಾದ ಸಿಆರ್ ಪಾಟೀಲ್, ವಿ ಸೋಮಣ್ಣ ಭೇಟಿಯಾದ ಈಶ್ವರ ಖಂಡ್ರೆ
Published On :

ನವದೆಹಲಿ: ಬರ ಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆಯ ವೆಚ್ಚದ ಪೈಕಿ 4,708.14 ಕೋಟಿ ರೂ.ಗಳನ್ನು ಜಲ ಜೀವನ್ ಮಿಷನ್ ಅಡಿಯಲ್ಲಿ ಭರಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ದೆಹಲಿಯ ಅಧಿಕೃತ ಪ್ರವಾಸದಲ್ಲಿರುವ ಅವರು, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ, ನೀರಿನ ಕೊರತೆಯಿರುವ ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಸುಮಾರು 6,657 ಹಳ್ಳಿಗಳು ಮತ್ತು 38 ಪಟ್ಟಣಗಳ 75.59 ಲಕ್ಷ ಜನರಿಗೆ ಸುಸ್ಥಿರ ಕುಡಿಯುವ ನೀರು ಪೂರೈಸುವ ಈ ಯೋಜನೆಯನ್ನು ಜೆಜೆಎಂ ಯೋಜನೆಯಡಿ ಪರಿಗಣಿಸುವಂತೆ ಕೋರಲಾಗಿದೆ ಎಂದರು.

ಪ್ರಸ್ತುತ ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಇಲಾಖೆಯ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದಿಂದ ಅನುಷ್ಠಾನಗೊಳಿಸಲಾಗುತ್ತಿರುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ರಾಜ್ಯ ಸರ್ಕಾರವೇ ಬಹುತೇಕ ಪೂರ್ಣಗೊಳಿಸಿದೆ. ಇನ್ನೂ ಸುಮಾರು 9,416.28 ಕೋಟಿ ರೂ. ಉಳಿಕೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರದಿಂದ ಶೇಕಡ 50ರಷ್ಟು ತನ್ನ ಪಾಲು ನೀಡುವಂತೆ ಕೋರಿ ಈ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಈಶ್ವರ ಖಂಡ್ರೆ ವಿವರಿಸಿದರು.

ಪಶ್ಚಿಮ ಘಟ್ಟಗಳ ಮೇಲ್ಭಾಗದಿಂದ ಬರಪೀಡಿತ ಜಿಲ್ಲೆಗಳಿಗೆ 24.01 ಟಿಎಂಸಿ ನೀರನ್ನು ಎತ್ತುವಳಿ ಮಾಡಲು ಎತ್ತಿನಹೊಳೆ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದ್ದು, ಇದರಲ್ಲಿ 14.056 ಟಿಎಂಸಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ್ದಾಗಿದೆ. ಈ ಪೈಕಿ ಗ್ರಾಮೀಣ ಪ್ರದೇಶಕ್ಕೆ 8.393 ಟಿಎಂಸಿ ಮತ್ತು ನಗರಕ್ಕೆ 5.538 ಟಿಎಂಸಿ ನೀರು ಪೂರೈಕೆ ಆಗುತ್ತದೆ. 9.953 ಟಿಎಂಸಿ ನೀರನ್ನು ಅಂತರ್ಜಲ ಮರುಪೂರಣಕ್ಕಾಗಿ 527 ಕೆರೆಗಳನ್ನು ತುಂಬಿಸಲುದ್ದೇಶಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

7 ಜಿಲ್ಲೆಗಳ ಗ್ರಾಮೀಣ ವಸತಿಗಳಿಗೆ 8.393 ಟಿಎಂಸಿ ನೀರನ್ನು ಮೀಸಲಿಡಲಾಗಿದೆ ಎಂಬ ವಿಷಯವನ್ನು ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ. ರಾಜ್ಯ ಸರ್ಕಾರ ಜೆಜೆಎಂ ಅಂದರೆ ಜಲ ಜೀವನ ಮಿಷನ್ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಕೊಳವೆ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲು ಮತ್ತು ಪ್ರತಿ ಗ್ರಾಮೀಣ ಮನೆಗಳಿಗೆ ಸುರಕ್ಷಿತ ಮತ್ತು ಸುಸ್ಥಿರ ಕುಡಿಯುವ ನೀರು ಸರಬರಾಜು ಮಾಡಲು ಬದ್ಧವಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.